ಮೂರನೇ ಬಾರಿಗೆ ಅಂತಾರಾಷ್ಟ್ರೀಯ ಗ್ರ್ಯಾಮಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡ ಬೆಂಗಳೂರು ಮೂಲದ ರಿಕ್ಕಿ ಕೇಜ್‌

Update: 2023-02-06 07:43 GMT

ಹೊಸದಿಲ್ಲಿ: ಖ್ಯಾತ ಸಂಗೀತ ಸಂಯೋಜಕ ಬೆಂಗಳೂರು ಮೂಲದ ರಿಕ್ಕಿ ಕೇಜ್‌ (Ricky Kej) ಅವರು ತಮ್ಮ ಆಲ್ಬಂ 'ಡಿವೈನ್‌ ಟೈಡ್ಸ್‌'ಗೆ ಗ್ರ್ಯಾಮಿ ಪ್ರಶಸ್ತಿ (Grammy Award) ಪಡೆದಿದ್ದಾರೆ. ಇದು ಅವರು ಪಡೆದ ಮೂರನೇ ಗ್ರ್ಯಾಮಿ ಪ್ರಶಸ್ತಿಯಾಗಿದೆ.

ರಿಕ್ಕಿ ಕೇಜ್‌ ಅವರು ಪ್ರಶಸ್ತಿಯನ್ನು ಬ್ರಿಟಿಷ್‌ ರಾಕ್‌ ಬ್ಯಾಂಡ್‌ ʻದಿ ಪೊಲೀಸ್‌ʼ ಇದರ ಡ್ರಮ್ಮರ್‌ ಸ್ಟಿವಾರ್ಟ್‌ ಕೋಪ್‌ಲ್ಯಾಂಡ್‌ ಜೊತೆಗೆ ಹಂಚಿಕೊಂಡಿದ್ದಾರೆ. ʻಡಿವೈನ್‌ ಟೈಡ್ಸ್ʼ ಆಲ್ಬಂ ತಯಾರಿಯಲ್ಲಿ ಸ್ಟಿವಾರ್ಟ್‌ ಅವರು ರಿಕ್ಕಿ ಕೇಜ್‌ ಜೊತೆಗೆ ಸಹಯೋಗ ಮಾಡಿದ್ದರು.

65ನೇ ವಾರ್ಷಿಕ ಗ್ರ್ಯಾಮಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಈ ಇಬ್ಬರೂ ತಮ್ಮ ಅತ್ಯುತ್ತಮ ಇಮ್ಮರ್ಸಿವ್‌ ಆಡಿಯೋ ಆಲ್ಬಂ ವಿಭಾಗದ ಪ್ರಶಸ್ತಿಯ ಭಾಗವಾಗಿ ಗ್ರಾಮಾಫೋನ್‌ ಟ್ರೋಫಿ ಪಡೆದರು. ಕಳೆದ ವರ್ಷ ಇದೇ ಆಲ್ಬಂಗೆ ಇವರು ಅತ್ಯುತ್ತಮ ನ್ಯೂ ಏಜ್‌ ಆಲ್ಬಂ ವಿಭಾಗದಲ್ಲಿ ಪ್ರಶಸ್ತಿ ಪಡೆದಿದ್ದರು.

ಈ ವರ್ಷದ ಪ್ರಶಸ್ತಿ ವಿಜೇತರ ವಿವರಗಳನ್ನು ಗ್ರ್ಯಾಮಿ ಪ್ರಶಸ್ತಿ ನೀಡುವ ರೆಕಾರ್ಡಿಂಗ್‌ ಅಕಾಡೆಮಿ ತನ್ನ ಅಧಿಕೃತ ಟ್ವಿಟರ್‌ ಪುಟದಲ್ಲಿ ಹಂಚಿಕೊಂಡಿದೆ.

ಡಿವೈನ್‌ ಟೈಡ್ಸ್‌ ಒಂಬತ್ತು ಹಾಡುಗಳ ಆಲ್ಬಂ ಆಗಿದೆ. ಕೇಜ್‌ ಅವರು ತಮ್ಮ ಮೊದಲ ಗ್ರ್ಯಾಮಿ ಪ್ರಶಸ್ತಿಯನ್ನು ಅತ್ಯುತ್ತಮ ನ್ಯೂ ಏಜ್‌ ವಿಭಾಗದಲ್ಲಿ 2016 ರಲ್ಲಿ ತಮ್ಮ ಆಲ್ಬಂ "ವಿಂಡ್ಸ್‌ ಆಫ್‌ ಸಂಸಾರ" ಕ್ಕೆ ಪಡೆದುಕೊಂಡಿದ್ದರು.

ಇದನ್ನೂ ಓದಿ: ಟರ್ಕಿಯಲ್ಲಿ ಭೂಕಂಪನ ಹಿನ್ನೆಲೆ: ಇಟಲಿಯಲ್ಲಿ ಸುನಾಮಿ ಎಚ್ಚರಿಕೆ

Similar News