ವ್ಯಕ್ತಿಗೆ ನಾಯಿ ಕಚ್ಚಿದ ಪ್ರಕರಣ: ನಾಯಿ ಮಾಲಕನಿಗೆ 3 ತಿಂಗಳ ಸಾದಾ ಜೈಲು ಶಿಕ್ಷೆ ವಿಧಿಸಿದ ನ್ಯಾಯಾಲಯ

Update: 2023-02-06 08:03 GMT

ಮುಂಬೈ: ರೊಟ್‌ವೀಲರ್ ನಾಯಿ ಮನುಷ್ಯನೊಬ್ಬನನ್ನು ಕಚ್ಚಿದ 12 ವರ್ಷಗಳ ನಂತರ ನಾಯಿಯ ಮಾಲಕನಿಗೆ ಮುಂಬೈನ ನ್ಯಾಯಾಲಯವು ಮೂರು ತಿಂಗಳ ಸಾದಾ ಜೈಲು ಶಿಕ್ಷೆ ವಿಧಿಸಿದೆ.

ಸಾರ್ವಜನಿಕ ಸುರಕ್ಷತೆಯ ಪ್ರಶ್ನೆಯಿರುವ ಅಂತಹ ಪ್ರಕರಣಗಳಲ್ಲಿ, "ಮೃದು ಧೋರಣೆ ಅನಗತ್ಯ" ಎಂದು ಗಿರ್ಗಾಂವ್ ನ್ಯಾಯಾಲಯದ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಎನ್ .ಎ. ಪಟೇಲ್ ಅವರು ಜನವರಿ 3 ರಂದು ನೀಡಿದ ಆದೇಶದಲ್ಲಿ ತಿಳಿಸಿದ್ದಾರೆ. ವಿವರವಾದ ಆದೇಶದ ಪ್ರತಿ ರವಿವಾರ ಲಭ್ಯವಾಗಿದೆ.

ನ್ಯಾಯಾಲಯವು ನಾಯಿಯ ಮಾಲಕ ಸೈರಸ್ ಪರ್ಸಿ ಹಾರ್ಮುಸ್ಜಿ (44 ವರ್ಷ)  ಭಾರತೀಯ ದಂಡ ಸಂಹಿತೆ ಸೆಕ್ಷನ್ 289 (ಪ್ರಾಣಿಗಳಿಗೆ ಸಂಬಂಧಿಸಿದಂತೆ ನಿರ್ಲಕ್ಷ್ಯ ವರ್ತನೆ) ಹಾಗೂ  337 (ಇತರರ ಜೀವ ಅಥವಾ ವೈಯಕ್ತಿಕ ಸುರಕ್ಷತೆಗೆ ಅಪಾಯವನ್ನುಂಟುಮಾಡುವ ಕ್ರಿಯೆಯಿಂದ ನೋವುಂಟುಮಾಡುವುದು) ಅಪರಾಧಗಳಲ್ಲಿ ತಪ್ಪಿತಸ್ಥರೆಂದು ತೀರ್ಪು ನೀಡಿದೆ.

ಈ  ಘಟನೆಯು ಮೇ 2010 ರಲ್ಲಿ ಮುಂಬೈನ ನೆಪಿಯನ್ ಸೀ ರೋಡ್‌ನಲ್ಲಿ ನಡೆದಿದ್ದು,  ಹೊರ್ಮುಸ್ಜಿ ತನ್ನ ಕಾರಿನ ಬಳಿ ನಿಂತು ಆಸ್ತಿ ವಿವಾದದ ಬಗ್ಗೆ ಸಂತ್ರಸ್ತ ಕೆರ್ಸಿ ಇರಾನಿಯೊಂದಿಗೆ ಜಗಳವಾಡುತ್ತಿದ್ದರು.

ಹೊರ್ಮುಸ್ಜಿಯವರ ಸಾಕುನಾಯಿ ಕಾರಿನೊಳಗೆ ಇದ್ದು ವಾಹನದಿಂದ ಹೊರಬರಲು ಪ್ರಯತ್ನಿಸುತ್ತಿತ್ತು.

ಕಾರಿನ ಬಾಗಿಲು ತೆರೆಯದಂತೆ ಮನವಿ ಮಾಡಿದರೂ ಆರೋಪಿ (ಹೊರ್ಮುಸ್ಜಿ) ಅದನ್ನು ತೆರೆದಿದ್ದರಿಂದ ನಾಯಿ ಹೊರಬಂದು ಇರಾನಿ ಮೇಲೆ ನೇರವಾಗಿ ದಾಳಿ ಮಾಡಿದೆ ಎಂದು ಪ್ರಾಸಿಕ್ಯೂಷನ್ ಹೇಳಿದೆ.

ನಾಯಿಯು  ಇರಾನಿ ಅವರ ಬಲಗಾಲಿಗೆ ಎರಡು ಬಾರಿ ಮತ್ತು ಬಲಗೈಗೆ ಎರಡು ಬಾರಿ ಕಚ್ಚಿತ್ತು.

Similar News