ಅದಾನಿ ಗ್ರೂಪ್‌ ಬೆನ್ನಲ್ಲೇ ಪತಂಜಲಿ ಫುಡ್ಸ್‌ ಶೇರು ಮೌಲ್ಯ ಎರಡು ವಾರಗಳಲ್ಲಿ ಶೇ. 16 ರಷ್ಟು ಕುಸಿತ

Update: 2023-02-06 09:14 GMT

ಹೊಸದಿಲ್ಲಿ: ಅದಾನಿ ಗ್ರೂಪ್‌ (Adani Group) ಶೇರುಗಳ ಮೌಲ್ಯಗಳ ಕುಸಿತ ನಡೆಯುತ್ತಿರುವ ನಡುವೆಯೇ ಕಳೆದೆರಡು ವಾರಗಳಲ್ಲಿ ರಾಮದೇವ್‌ ಅವರ ಪತಂಜಲಿ ಫುಡ್ಸ್‌ (Patanjali Foods) ಸಂಸ್ಥೆಯ ಶೇರುಗಳ ಮೌಲ್ಯವೂ ಶೇ. 16 ರಷ್ಟು ಕುಸಿತ ಕಂಡಿದ್ದು, ಎರಡು ಟ್ರೇಡಿಂಗ್‌ ದಿನಗಳಲ್ಲಿ ಅವರ ಕಂಪೆನಿಯ ಷೇರುಗಳಿಗೆ ಸರ್ಕ್ಯೂಟ್‌ ಬ್ರೇಕರ್‌ ಅಳವಡಿಸಲಾಗಿದೆ ಎಂದು ವರದಿಯಾಗಿದೆ,

ಶೇರು ಮೌಲ್ಯಗಳ ಕುಸಿತದಿಂದ ಪತಂಜಲಿ ಫುಡ್ಸ್‌ ಶೇರು ಮೌಲ್ಯ ಈಗ ರೂ. 700 ರಷ್ಟು ತಲುಪಿದ್ದು, ನಾಲ್ಕು ತಿಂಗಳ ಹಿಂದೆ ಶೇರು ಮೌಲ್ಯ ರೂ. 1,495 ಆಗಿತ್ತು.

ಪತಂಜಲಿ ಫುಡ್ಸ್‌ನ ಡಿಸೆಂಬರ್‌ ಅಂತ್ಯದ ತ್ರೈಮಾಸಿಕ ಫಲಿತಾಂಶಗಳ ಪ್ರಕಾರ ಸಂಸ್ಥೆಯ ಆದಾಯ ಕಳೆದ ವರ್ಷಕ್ಕೆ ಹೋಲಿಸಿದಾಗ ಶೇ. 26 ರಷ್ಟು ಏರಿಕೆಯಾಗಿದ್ದರೂ ಮಾರುಕಟ್ಟೆಗೆ ನಿರೀಕ್ಷಿತ ಆದಾಯ ದೊರಕಿಲ್ಲ ಎನ್ನಲಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಶೇ. 7ರಷ್ಟು ಬೇಡಿಕೆ ಕುಸಿದಿರುವುದರಿಂದ ಒಟ್ಟಾರೆ ಲಾಭ ಶೇ. 12 ರಷ್ಟು ಕಡಿಮೆಯಾಗಿದೆ ಎನ್ನಲಾಗಿದೆ.

ಕಚ್ಛಾ ಸೋಯಾಬೀನ್‌ ತೈಲ ಆಮದನ್ನು ಟ್ಯಾರಿಫ್‌ ರೇಟ್‌ ಕೋಟಾ (ಟಿಆರ್‌ಕ್ಯೂ) ಅಡಿಯಲ್ಲಿ ಎಪ್ರಿಲ್‌ 1, 2023 ರಿಂದ ನಿಲ್ಲಿಸಲು ಕೇಂದ್ರ ನಿರ್ಧರಿಸಿರುವುದೂ ಪತಂಜಲಿ ಫುಡ್ಸ್‌ ಮೇಲೆ ಪರಿಣಾಮ ಬೀರಿರಬಹುದು ಎಂದು ಹೇಳಲಾಗುತ್ತಿದೆ.

ಟಿಆರ್‌ಕ್ಯೂ ಅಡಿಯಲ್ಲಿ ಪತಂಜಲಿ ಮತ್ತು ಅಂತಹುದೇ ಕಂಪೆನಿಗಳು ಯಾವುದೇ ಸುಂಕವಿಲ್ಲದೆ ನಿರ್ದಿಷ್ಟ ಪ್ರಮಾಣದ ತೈಲವನ್ನು ಆಮದು ಮಾಡಬಹುದಾಗಿದ್ದು, ಅದನ್ನು ಎಪ್ರಿಲ್‌ ತಿಂಗಳಿನಿಂದ ನಿಲ್ಲಿಸುವುದರಿಂದ ಕಂಪೆನಿ ಮೇಲೆ ಪರಿಣಾಮ ಬೀರಬಹುದೆಂಬ ನಿರೀಕ್ಷೆಯಿದೆ. ಇದೇ ಕಾರಣದಿಂದ ಅದಾನಿ ವಿಲ್ಮಾರ್‌ ಷೇರು ಬೆಲೆಗಳೂ ಇಳಿಕೆಯಾಗಿವೆ ಎನ್ನಲಾಗಿದೆ.

ಇದನ್ನೂ ಓದಿ: ಈಗ ದೇಶ ಬಿಟ್ಟು ಓಡುವುದು ಮೋದಿ ಆಪ್ತ ಅದಾನಿ ಸರದಿಯೇ?: ದಿನೇಶ್ ಗುಂಡೂರಾವ್

Similar News