ಇನ್ನಷ್ಟು ಕುಸಿದ ಅದಾನಿ ಗ್ರೂಪ್ ಶೇರುಗಳು

Update: 2023-02-06 10:03 GMT

ಹೊಸದಿಲ್ಲಿ, ಫೆ.6: ಹಿಂಡನ್ಬರ್ಗ್ ರೀಸರ್ಚ್‌ನ (Hindenburg Research) ವರದಿಯ ಹೊಡೆತದಿಂದ ತತ್ತರಿಸಿರುವ ಅದಾನಿ ಗ್ರೂಪ್ (Adani Group) ಶೇರುಗಳ ಕುಸಿತ ಸೋಮವಾರವೂ ಮುಂದುವರಿದಿದ್ದು, ಗ್ರೂಪ್ ನ ಹೆಚ್ಚಿನ ಶೇರುಗಳು ಶೇ.5 ಮತ್ತು ಶೇ.10ರ ಲೋವರ್ ಸರ್ಕ್ಯೂಟ್‌ನಲ್ಲಿ ಲಾಕ್ ಆಗಿವೆ. ಅದಾನಿ ಗ್ರೂಪ್ ಶೇರುಗಳು ಮಾರಾಟ ಒತ್ತಡದಲ್ಲಿರುವುದು ಇದು ಸತತ ಎಂಟನೇ ವಹಿವಾಟಿನ ದಿನವಾಗಿದೆ. ಈ ನಡುವೆ ಜಾಗತಿಕ ಹಣಕಾಸು ಏಜೆನ್ಸಿಗಳು ಒಂದೊಂದಾಗಿ ಅದಾನಿ ಗ್ರೂಪ್ನೊಂದಿಗೆ ತಮ್ಮ ವ್ಯವಹಾರಗಳನ್ನು ಕಡಿತಗೊಳಿಸುತ್ತಿವೆ.

ಕ್ರೆಡಿಟ್ ಸುಸ್ಸೆ ಮತ್ತು ಸಿಟಿ ಗ್ರೂಪ್ ಬಳಿಕ ಈಗ ಬ್ರಿಟನ್ನ ಸ್ಟಾಂಡರ್ಡ್ ಚಾರ್ಟರ್ಡ್ ಕೂಡ ಸಾಲಗಳಿಗೆ ಭದ್ರತೆಯಾಗಿ ಅದಾನಿ ಗ್ರೂಪ್ನ ಬಾಂಡ್ಗಳನ್ನು ಸ್ವೀಕರಿಸುವುದನ್ನು ನಿಲ್ಲಿಸಿದೆ.

ಸೋಮವಾರ ಶೇರು ಮಾರುಕಟ್ಟೆಗಳ ಬೆಳಗಿನ ವಹಿವಾಟಿನಲ್ಲಿ ಗ್ರೂಪ್ ನ ಮುಂಚೂಣಿ ಕಂಪನಿ ಅದಾನಿ ಎಂಟರ್ಪ್ರೈಸಸ್ನ ಶೇರು ಶೇ.10ರಷ್ಟು ಕುಸಿತವನ್ನು ದಾಖಲಿಸಿತ್ತಾದರೂ ಅಪರಾಹ್ನದ ವೇಳೆಗೆ ಚೇತರಿಸಿಕೊಂಡಿತ್ತು. ಅದಾನಿ ಟೋಟಲ್ ಗ್ಯಾಸ್, ಅದಾನಿ ಗ್ರೀನ್, ಅದಾನಿ ಟ್ರಾನ್ಸ್ಮಿಷನ್, ಅದಾನಿ ವಿಲ್ಮರ್, ಅದಾನಿ ಪವರ್ ಮತ್ತು ಎನ್ಡಿಟಿವಿ ಶೇ.5 ಮತ್ತು ಶೇ.10 ಮೌಲ್ಯ ಕುಸಿತದೊಂದಿಗೆ ಲೋವರ್ ಸರ್ಕ್ಯೂಟ್‌ನಲ್ಲಿ ಲಾಕ್ ಆಗಿವೆ. ಗ್ರೂಪ್ ನ ಸಿಮೆಂಟ್ ಕಂಪನಿಗಳಾದ ಎಸಿಸಿ ಮತ್ತು ಅಂಬುಜಾ ಶೇರುಗಳು ಬೆಳಿಗ್ಗೆ ನಷ್ಟದಲ್ಲಿದ್ದವಾದರೂ ಕ್ರಮೇಣ ಚೇತರಿಸಿಕೊಂಡಿವೆ.

ಗ್ರೂಪ್ ಕಂಪನಿಗಳ ಶೇರುಗಳು ಚೇತರಿಸಿಕೊಳ್ಳದಿದ್ದರೆ ಸೋಮವಾರದ ವಹಿವಾಟಿನ ಅಂತ್ಯದಲ್ಲಿ ಅದಾನಿ ಗ್ರೂಪ್ ನ ಒಟ್ಟು ಮಾರುಕಟ್ಟೆ ಬಂಡವಾಳವು ಸುಮಾರು 10 ಲ.ಕೋ.ರೂ.ಗಳಷ್ಟು ಕುಸಿಯಬಹುದು ಎಂದು ಅಂದಾಜಿಸಲಾಗಿದೆ.

ಈ ನಡುವೆ ನ್ಯೂಯಾರ್ಕ್ ವಿವಿಯ ಪ್ರೊಫೆಸರ್ ಮತ್ತು ಮೌಲ್ಯಮಾಪನ ಗುರು ಅಶ್ವಥ ದಾಮೋದರನ್ ಅವರು ಅದಾನಿ ಎಂಟರ್ಪ್ರೈಸಸ್ನ ಶೇರು ತನ್ನ ನ್ಯಾಯಯುತ ಮೌಲ್ಯ 945ಕ್ಕೆ ಕುಸಿಯಬಹುದು ಎಂದು ಭವಿಷ್ಯ ನುಡಿದಿದ್ದಾರೆ.

Similar News