ಆಂತರಿಕ ಪರೀಕ್ಷೆಯಲ್ಲಿ ಅನುತ್ತೀರ್ಣರಾದ 600 ಮಂದಿ ಹೊಸ ಉದ್ಯೋಗಿಗಳನ್ನು ಕೈಬಿಟ್ಟ ಇನ್ಫೋಸಿಸ್‌

Update: 2023-02-06 10:45 GMT

ಹೊಸದಿಲ್ಲಿ: ದೇಶದ ಪ್ರಮುಖ ಐಟಿ ಕಂಪೆನಿಯಗಿರುವ ಇನ್ಫೋಸಿಸ್‌ (Infosys) 600 ಹೊಸ ಉದ್ಯೋಗಿಗಳನ್ನು (freshers) ಕೆಲಸದಿಂದ ತೆಗೆದುಹಾಕಿದೆ. ಈ ಎಲ್ಲಾ 600 ಮಂದಿ ಕಂಪೆನಿಯ ಇಂಟರ್ನಲ್‌ ಫ್ರೆಶರ್‌ ಅಸೆಸ್ಮೆಂಟ್‌ ಪರೀಕ್ಷೆಯಲ್ಲಿ ಅನುತ್ತೀರ್ಣರಾಗಿರುವುದರಿಂದ ಅವರನ್ನು ಕೆಲಸದಿಂದ ತೆಗೆದುಹಾಕಲಾಗಿದೆ ಎಂದು ವರದಿಯಾಗಿದೆ. ಹೀಗೆ ನೌಕರಿ ಕಳೆದುಕೊಂಡ ಫ್ರೆಶರ್‌ಗಳಲ್ಲಿ ಹೆಚ್ಚಿನವರು ಜುಲೈ 2022 ರ ನಂತರ ನೇಮಕಗೊಂಡವರಾಗಿದ್ದಾರೆ.

ಎಸ್‌ಎಪಿ ಎಬಿಎಪಿ ಸ್ಟ್ರೀಮ್‌ನಲ್ಲಿದ್ದ 150 ಮಂದಿಯಲ್ಲಿ 60 ಮಂದಿ ಮಾತ್ರ ಪರೀಕ್ಷೆ ತೇರ್ಗಡೆಗೊಂಡಿದ್ದಾರೆಂದು ಹೇಳಿ ಉಳಿದವರನ್ನು ಎರಡು ವಾರಗಳ ಹಿಂದೆ ವಜಾಗೊಳಿಸಲಾಗಿದೆ ಎಂದು ಉದ್ಯೋಗ ಕಳೆದುಕೊಂಡವರೊಬ್ಬರು ಪ್ರತಿಕ್ರಿಯಿಸಿದ್ದಾರೆ.

ಜುಲೈ 2020 ರ ಬ್ಯಾಚಿನ ಫ್ರೆಶರ್‌ಗಳ ಪೈಕಿ 85 ಮಂದಿಯನ್ನು ಪರೀಕ್ಷೆಯಲ್ಲಿ ಅನುತ್ತೀರ್ಣರಾಗಿದ್ದಾರೆಂಬ ಕಾರಣದಿಂದ ಕೈಬಿಡಲಾಗಿದೆ ಎಂದು ವರದಿಯಾಗಿದೆ.

ಒಟ್ಟು 600 ಮಂದಿ ಹೊಸ ಉದ್ಯೋಗಿಗಳ ಪೈಕಿ 280 ಮಂದಿಯನ್ನು ಎರಡು ವಾರಗಳ ಹಿಂದೆ ಕೈಬಿಡಲಾಗಿದೆ.

ಈಗಾಗಲೇ ಇನ್ಫೋಸಿಸ್‌ನಿಂದ ಹಲವಾರ ತಿಂಗಳುಗಳ ಹಿಂದೆಯೇ ಆಫರ್‌ ಲೆಟರ್‌ ಪಡೆದು ಉದ್ಯೋಗಕ್ಕೆ ಸೇರುವ ದಿನಾಂಕಕ್ಕಾಗಿ ನೂರಾರು ಮಂದಿ ಕಾಯುತ್ತಿರುವ ನಡುವೆಯೇ ಈ ಬೆಳವಣಿಗೆ ನಡೆದಿದೆ.

ಆಂತರಿಕ ಪರೀಕ್ಷೆಯಲ್ಲಿ ಅನುತ್ತೀರ್ಣರಾದವರನ್ನು ಕೈಬಿಡಲಾಗುತ್ತದೆ ಎಂದು ಕಂಪೆನಿಯ ಪ್ರತಿನಿಧಿಯೊಬ್ಬರು ಹೇಳಿದ್ದಾರೆ.

ಪ್ರಸ್ತುತ ವಿತ್ತ ವರ್ಷದ ಮೂರನೇ ತ್ರೈಮಾಸಿಕದಲ್ಲಿ ಕಂಪೆನಿ 6000 ಮಂದಿ ಫ್ರೆಶರ್‌ಗಳಿಗೆ ಆಫರ್‌ ಲೆಟರ್‌ ನೀಡಿತ್ತು. ಆರ್ಥಿಕ ವರ್ಷ 2023 ರಲ್ಲಿ ಕಂಪೆನಿ 50,000 ಜನರನ್ನು ನೇಮಕಗೊಳಿಸುವಾಗಿ ಹೇಳಿತ್ತಲ್ಲದೆ ಈಗಾಗಲೇ 40,000 ಜನರನ್ನು ಆಯ್ಕೆ ಮಾಡಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ: ಟರ್ಕಿ, ಸಿರಿಯಾದಲ್ಲಿ ಭೂಕಂಪ: ಮೃತರ ಸಂಖ್ಯೆ 530 ಕ್ಕೆ ಏರಿಕೆ

Similar News