ಭೂಕಂಪ ಪೀಡಿತ ಟರ್ಕಿಗೆ ರಕ್ಷಣಾ ತಂಡಗಳು, ಪರಿಹಾರ ಸಾಮಗ್ರಿಗಳನ್ನು ಕಳುಹಿಸಲು ಭಾರತ ನಿರ್ಧಾರ

Update: 2023-02-06 12:41 GMT

ಹೊಸದಿಲ್ಲಿ: ಭೂಕಂಪ ಪೀಡಿತ ಟರ್ಕಿ ದೇಶಕ್ಕೆ ಸಾಧ್ಯವಿರುವ ಎಲ್ಲ ನೆರವನ್ನು ನೀಡುವಂತೆ ಪ್ರಧಾನಿ ನರೇಂದ್ರ ಮೋದಿ ಅವರ ಸೂಚನೆಯ ಮೇರೆಗೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ ಶೋಧ ಹಾಗೂ ರಕ್ಷಣಾ ತಂಡಗಳು, ವೈದ್ಯಕೀಯ ತಂಡಗಳು ಹಾಗೂ ಪರಿಹಾರ ಸಾಮಗ್ರಿಗಳನ್ನು ತಕ್ಷಣವೇ ರವಾನಿಸಲು ಸರಕಾರ ಸೋಮವಾರ ನಿರ್ಧರಿಸಿದೆ.

ಪ್ರಧಾನಿ ಮೋದಿಯವರ ಪ್ರಧಾನ ಕಾರ್ಯದರ್ಶಿ ಪಿ.ಕೆ. ಮಿಶ್ರಾ  ಅವರು ಸೌತ್ ಬ್ಲಾಕ್‌ನಲ್ಲಿ ತಕ್ಷಣದ ಪರಿಹಾರ ಕ್ರಮಗಳ ಕುರಿತು ಚರ್ಚಿಸಲು ಸಭೆ ನಡೆಸಿದರು ಹಾಗೂ  ಅಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಅಧಿಕೃತ ಹೇಳಿಕೆ ತಿಳಿಸಿದೆ.

ವಿಶೇಷ ತರಬೇತಿ ಪಡೆದ ಶ್ವಾನದಳಗಳು ಹಾಗೂ  ಅಗತ್ಯ ಉಪಕರಣಗಳೊಂದಿಗೆ 100 ಸಿಬ್ಬಂದಿಗಳನ್ನು ಒಳಗೊಂಡಿರುವ ಎನ್‌ಡಿಆರ್‌ಎಫ್‌ನ ಎರಡು ತಂಡಗಳು ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗಾಗಿ ಭೂಕಂಪ ಪೀಡಿತ ಪ್ರದೇಶಕ್ಕೆ ತೆರಳಲು ಸಜ್ಜುಗೊಂಡಿವೆ.

ತರಬೇತಿ ಪಡೆದ ವೈದ್ಯರು ಹಾಗೂ  ಅರೆವೈದ್ಯರೊಂದಿಗೆ ಅಗತ್ಯ ಔಷಧಿಗಳೊಂದಿಗೆ ವೈದ್ಯಕೀಯ ತಂಡಗಳನ್ನು ಸಹ ಸಿದ್ಧಪಡಿಸಲಾಗುತ್ತಿದೆ ಎಂದು ಪ್ರಕಟನೆ ತಿಳಿಸಿದೆ.

Similar News