ಅಗ್ನಿ ಅವಘಡದಲ್ಲಿ 7 ಮಕ್ಕಳ ಸಹಿತ ತಾಯಿ ಮೃತ್ಯು

Update: 2023-02-06 17:50 GMT

ಪ್ಯಾರಿಸ್, ಫೆ.6: ಉತ್ತರ ಫ್ರಾನ್ಸ್‌ನ ಮನೆಯೊಂದರಲ್ಲಿ ನಡೆದ ಬೆಂಕಿ ದುರಂತದಲ್ಲಿ 7 ಮಕ್ಕಳ ಸಹಿತ ತಾಯಿಯೊಬ್ಬಳು ಸಜೀವ ದಹನವಾಗಿರುವುದಾಗಿ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಅಧಿಕಾರಿಗಳನ್ನು ಉಲ್ಲೇಖಿಸಿ ಎಎಫ್‌ಪಿ ಸುದ್ಧಿಸಂಸ್ಥೆ ವರದಿ ಮಾಡಿದೆ.

ರವಿವಾರ ತಡರಾತ್ರಿ ಮನೆಯ ಕೆಳ ಅಂತಸ್ತಿನಲ್ಲಿದ್ದ ಬಟ್ಟೆಒಣಗಿಸುವ ಯಂತ್ರ(ಡ್ರೈಯರ್)ನಲ್ಲಿ ತಾಂತ್ರಿಕ ದೋಷದಿಂದ ಉಂಟಾದ ಬೆಂಕಿ ತಕ್ಷಣ ಮನೆಯನ್ನು ವ್ಯಾಪಿಸಿದೆ. ಮಹಿಳೆ ತನ್ನ 7 ಮಕ್ಕಳೊಂದಿಗೆ ಮೇಲಿನ ಮಹಡಿಗೆ ಓಡಿಹೋಗಿದ್ದು ಅಲ್ಲಿಂದ ತಪ್ಪಿಸಿಕೊಳ್ಳಲಾಗದೆ ಬೆಂಕಿಯಲ್ಲಿ ಸಜೀವ ದಹನಗೊಂಡಿದ್ದಾರೆ. ಮೃತ ಮಕ್ಕಳಲ್ಲಿ 5 ಮಂದಿ ಬಾಲಕಿಯರು ಮತ್ತು ಇಬ್ಬರು ಬಾಲಕರು ಸೇರಿದ್ದಾರೆ.ಮಹಿಳೆಯ 2ನೇ ಪತಿ ತೀವ್ರವಾಗಿ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಆತ ಪತ್ನಿ ಮತ್ತು ಮಕ್ಕಳನ್ನು 2ನೇ ಮಹಡಿಗೆ ಧಾವಿಸದಂತೆ ಶತಪ್ರಯತ್ನ ಪಟ್ಟರೂ ಅವರು ಆತನ ಮಾತನ್ನು ಕೇಳಲಿಲ್ಲ. ಈ ಮನೆಯ ಕಿಟಕಿ ಬಾಗಿಲು ಇಲೆಕ್ಟ್ರಾನಿಕ್ಸ್ ವ್ಯವಸ್ಥೆ ಹೊಂದಿದ್ದು ವಿದ್ಯುತ್‌ಪೂರೈಕೆ ಸ್ಥಗಿತಗೊಂಡಿದ್ದರಿಂದ ಕಿಟಕಿ ಬಾಗಿಲನ್ನು ತೆರೆಯಲು ಸಾಧ್ಯವಾಗದೆ ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಯಾಗಿದೆ ಎಂದು ಅಗ್ನಿಶಾಮಕದ ದಳದ ಸಿಬಂದಿಗಳನ್ನು ಉಲ್ಲೇಖಿಸಿದ ವರದಿ ಹೇಳಿದೆ.

ರವಿವಾರ ತಡರಾತ್ರಿ ಸುಮಾರು 1 ಗಂಟೆಗೆ ಮನೆಯಿಂದ ಬೆಂಕಿಯ ಜ್ವಾಲೆ ಮತ್ತು ಹೊಗೆ ಏಳುತ್ತಿರುವುದನ್ನು ಕಂಡ ನೆರೆಮನೆಯವರು ತಕ್ಷಣ ಅಗ್ನಿಶಾಮಕ ದಳಕ್ಕೆ ಕರೆ ಮಾಡಿದ್ದರು ಎಂದು ವರದಿಯಾಗಿದೆ

Similar News