'ವಿಶ್ವದ ಕುಶಾಗ್ರಮತಿ ವಿದ್ಯಾರ್ಥಿಗಳ ಪಟ್ಟಿ'ಯಲ್ಲಿ ಭಾರತೀಯ ಮೂಲದ ಅಮೆರಿಕಾ ವಿದ್ಯಾರ್ಥಿನಿ

Update: 2023-02-07 08:11 GMT

ವಾಷಿಂಗ್ಟನ್: ಭಾರತ ಮೂಲದ ಅಮೆರಿಕಾ ವಿದ್ಯಾರ್ಥಿನಿ ನತಾಶಾ ಪೆರಿಯನಾಯಗಮ್ 'ವಿಶ್ವದ ಕುಶಾಗ್ರಮತಿ' ಪಟ್ಟಿಯಲ್ಲಿ ಸ್ಥಾನ ಪಡೆದಿದ್ದು, ಅಮೆರಿಕಾದ ಜಾನ್ಸ್ ಹಾಪ್ಕಿನ್ಸ್ ಕೇಂದ್ರವು ಆಯೋಜಿಸುವ 'ಪ್ರತಿಭಾವಂತ ಯುವಕರ ಆಯ್ಕೆ ಪಟ್ಟಿ'ಯಲ್ಲಿ ಸತತ ಎರಡನೆಯ ಬಾರಿಗೆ ಸ್ಥಾನ ಪಡೆದಿದ್ದಾಳೆ. ಈ ಪಟ್ಟಿಯು 67 ದೇಶಗಳ 15,000 ವಿದ್ಯಾರ್ಥಿಗಳಿಗೆ ನಡೆಸುವ ಸಾಮಾನ್ಯಕ್ಕಿಂತ ಮೇಲ್ದರ್ಜೆ ಪರೀಕ್ಷೆಯ ಫಲಿತಾಂಶವಾಗಿದೆ ಎಂದು ndtv.com ವರದಿ ಮಾಡಿದೆ.

ಪೆರಿಯನಾಯಗಮ್ (13) ನ್ಯೂಜೆರ್ಸಿಯ ಫ್ಲಾರೆನ್ಸ್ ಎಂ. ಗೌಡಿನಿಯರ್ ಮಾಧ್ಯಮಿಕ ಶಾಲೆಯ ವಿದ್ಯಾರ್ಥಿನಿಯಾಗಿದ್ದಾಳೆ. ಈಕೆ ಐದನೆ ದರ್ಜೆ ವಿದ್ಯಾರ್ಥಿನಿಯಾಗಿದ್ದಾಗ 2021ರ ಚಳಿಗಾಲದಲ್ಲೂ ಕೂಡಾ ಜಾನ್ಸ್ ಹಾಪ್ಕಿನ್ಸ್ ಕೇಂದ್ರದಲ್ಲಿ ಪ್ರತಿಭಾವಂತ ಯುವಕರಿಗಾಗಿನ ಪರೀಕ್ಷೆ ತೆಗೆದುಕೊಂಡಿದ್ದಳು.

ಮೌಖಿಕ ಹಾಗೂ ಮೌಲಿಕ ಪರೀಕ್ಷೆಯಲ್ಲಿ ಮೇಲ್ದರ್ಜೆಯ ಎಂಟನೆ ದರ್ಜೆ ಸಾಧನೆಯ ಮೂಲಕ ಶೇ. 90ರಷ್ಟು ಅಂಕ ಗಳಿಸಿದ್ದ ಈಕೆ, ಆ ವರ್ಷದಲ್ಲಿ ಕುಶಾಗ್ರಮತಿ ವಿದ್ಯಾರ್ಥಿಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಳು. ಈ ವರ್ಷ ಜಾನ್ಸ್ ಹಾಪ್ಕಿನ್ಸ್ ಕೇಂದ್ರದಿಂದ ಪ್ರತಿಭಾವಂತ ಯುವಕರಿಗಾಗಿ ಆಯೋಜಿಸಲಾಗಿದ್ದ SAT, ACT, ಶಾಲೆ ಮತ್ತು ಕಾಲೇಜು ಸಾಮರ್ಥ್ಯ ಪರೀಕ್ಷೆ ಅಥವಾ ಅಂತಹುದೇ ಮೌಲ್ಯಾಂಕನದಲ್ಲಿ ಅಸಾಧಾರಣ ಸಾಧನೆ ತೋರುವ ಮೂಲಕ ಮತ್ತೆ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾಳೆ ಎಂದು ವಿಶ್ವವಿದ್ಯಾಲಯದ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಪೆರಿಯನಾಯಗಮ್ ಪೋಷಕರು, ತಮ್ಮ ಮಗಳು ವಿರಾಮದ ವೇಳೆಯಲ್ಲಿ ಚಿತ್ರಕಲೆ ಬಿಡಿಸುವುದು ಹಾಗೂ ಜೆಆರ್‌ಆರ್ ಟೋಕಿನ್ ಅವರ ಕಾದಂಬರಿ ಓದುವ ಮೂಲಕ ಕಾಲ ಕಳೆಯುತ್ತಾಳೆ ಎಂದು ಹೇಳಿದ್ದಾರೆ.

ಜಾನ್ ಹಾಪ್ಕಿನ್ಸ್ ಕೇಂದ್ರದ 'ಪ್ರತಿಭಾವಂತ ಯುವಕರು' ಪರೀಕ್ಷೆಯನ್ನು ಜಗತ್ತಿನಾದ್ಯಂತ ಇರುವ ಚುರುಕುಮತಿ ವಿದ್ಯಾರ್ಥಿಗಳಿಗೆ ಆಯೋಜಿಸಲಾಗುತ್ತಾ ಬರುತ್ತಿದ್ದು, ಅವರ ಶೈಕ್ಷಣಿಕ ಸಾಮರ್ಥ್ಯದ ಕುರಿತು ಸ್ಪಷ್ಟ ಚಿತ್ರಣ ಒದಗಿಸುತ್ತದೆ.

Similar News