ಬಂಗಾಳಿಗಳ ಕುರಿತು ಅಪಮಾನಕಾರಿ ಹೇಳಿಕೆ ಪ್ರಕರಣ: ಪರೇಶ್‌ ರಾವಲ್‌ ವಿರುದ್ಧದ ಎಫ್‌ಐಆರ್‌ ರದ್ದು

Update: 2023-02-07 08:17 GMT

ಹೊಸದಿಲ್ಲಿ: ಬಂಗಾಳಿ ಸಮುದಾಯದ ವಿರುದ್ಧ ಅವಹೇಳನಕಾರಿ ಮಾತುಗಳನ್ನಾಡಿದ ಆರೋಪ ಎದುರಿಸುತ್ತಿದ್ದ ಹಿರಿಯ ನಟ ಹಾಗೂ ಬಿಜೆಪಿ ನಾಯಕ ಪರೇಶ್‌ ರಾವಲ್‌ ಅವರ ವಿರುದ್ಧದ ಎಫ್‌ಐಆರ್‌ ಅನ್ನು ಕೊಲ್ಕತ್ತಾ ಹೈಕೋರ್ಟ್‌ ಸೋಮವಾರ ವಜಾಗೊಳಿಸಿದೆ.

ರಾವಲ್‌ ಅವರು ಈಗಾಗಲೇ ತಮ್ಮ ಹೇಳಿಕೆಗಳಿಗೆ ಕ್ಷಮೆಯಾಚಿಸಿದ್ದಾರೆ ಹಾಗೂ ಅವರ ವಿರುದ್ಧ ನೀಡಲಾದ ದೂರಿನ ಆಧಾರದಲ್ಲಿ ದಾಖಲಾದ ಎಫ್‌ಐಆರ್‌ ಪ್ರಕಾರ ಅವರ ವಿರುದ್ಧ ಕ್ರಮಕೈಗೊಳ್ಳುವ ಅಗತ್ಯವಿಲ್ಲ ಎಂದು ಜಸ್ಟಿಸ್‌ ರಾಜಶೇಖರ್‌ ಮಂಥ ತಮ್ಮ ಆದೇಶದಲ್ಲಿ ತಿಳಿಸಿದರು.

ತಮ್ಮ ವಿರುದ್ಧ ದಾಖಲಾದ ಎಫ್‌ಐಆರ್‌ ರದ್ದುಗೊಳಿಸಬೇಕೆಂದು ಕೋರಿ ರಾವಲ್‌ ಅಪೀಲು ಸಲ್ಲಿಸಿದ್ದರು. ತಾವು ಗುಜರಾತಿ ಭಾಷೆಯಲ್ಲಿ ನೀಡಿದ ಭಾಷಣಕ್ಕೆ ಆಕ್ಷೇಪ ಸೂಚಿಸಿದ್ದ ಕೆಲವರು ಆ ಭಾಷೆಯನ್ನು ಸರಿಯಾಗಿ ಅರ್ಥೈಸಿದ್ದಾರೆಂದು ಹೇಳಲಾಗದು ಎಂದು ಅವರು ತಮ್ಮ ಅರ್ಜಿಯಲ್ಲಿ ಹೇಳಿದ್ದರು.

ಕಳೆದ ನವೆಂಬರ್‌ ತಿಂಗಳಿನಲ್ಲಿ ಗುಜರಾತ್‌ ರಾಜ್ಯದ ವಲ್ಸದ್‌ ಎಂಬಲ್ಲಿ ನಡೆದ ಚುನಾವಣಾ ರ್ಯಾಲಿಯಲ್ಲಿ ಮಾತನಾಡುವ ವೇಳೆ ಪ್ರತಿಕ್ರಿಯಿಸಿದ್ದ ರಾವಲ್‌, ರಾಜ್ಯದ ನಿವಾಸಿಗಳು ಹಣದುಬ್ಬರವನ್ನು ಸಹಿಸಿಯಾರು ಆದರೆ ತಮ್ಮ ನೆರೆಹೊರೆಯಲ್ಲಿ ವಾಸಿಸುವ ರೋಹಿಂಗ್ಯ ವಲಸಿಗರನ್ನಲ್ಲ ಎಂದಿದ್ದರು. ತಮ್ಮ ಗ್ಯಾಸ್‌ ಸಂಪರ್ಕಗಳನ್ನು ಬಳಸಿ ನಿವಾಸಿಗಳು ʻಬಂಗಾಳಿಗಳಿಗೆ ಮೀನು ಬೇಯಿಸುವರೇʼ ಎಂದೂ  ಅವರು ಪ್ರಶ್ನಿಸಿದ್ದರು.

"ಗ್ಯಾಸ್‌ ಸಿಲಿಂಡರ್‌ಗಳು ದುಬಾರಿಯಾಗಿರಬಹುದು, ಆದರೆ ಅವುಗಳು ಮತ್ತೆ ಅಗ್ಗವಾಗಬಹುದು. ಹಣದುಬ್ಬರ ಏರಿಕೆಯಾಗಿದ್ದರೆ ಮತ್ತೆ ಕಡಿಮೆಯಾಗಬಹುದು. ಜನರಿಗೆ ಉದ್ಯೋಗವೂ ಲಭಿಸಬಹುದು. ಆದರೆ ರೋಹಿಂಗ್ಯ ವಲಸಿಗರು ಮತ್ತು ಬಾಂಗ್ಲಾದೇಶಿಗಳು ದಿಲ್ಲಿಯಲ್ಲಿದ್ದಂತೆ ನಿಮ್ಮ ಸುತ್ತಮುತ್ತಲು ವಾಸಿಸಲು ಆರಂಭಿಸಿದರೆ ಏನಾಗುತ್ತದೆ? ಗ್ಯಾಸ್‌ ಸಿಲಿಂಡರ್‌ ಬಳಸಿ ಏನು ಮಾಡುತ್ತೀರಿ? ಮೊದಲು ಬಂಗಾಳಿಗಳಿಗೆ ಮೀನು ಬೇಯಿಸುತ್ತೀರಾ?" ಎಂದು ಅವರು ಪ್ರಶ್ನಿಸಿದರು.

ನಂತರ ಕ್ಷಮೆಯಾಚಿಸಿದ ರಾವಲ್‌, ತಾವು ಬಂಗಾಳಿಗಳೆಂದರೆ ʻಅಕ್ರಮ ಬಾಂಗ್ಲಾದೇಶಿ ಮತ್ತು ರೋಹಿಂಗ್ಯʼರನ್ನು ಉಲ್ಲೇಖಿಸಿರುವುದಾಗಿ ಹೇಳಿದ್ದರು.

ಬಂಗಾಳಿಗಳ ವಿರುದ್ಧ ದ್ವೇಷದ ಭಾವನೆ ಮೂಡಿಸಿದ ಆರೋಪ ಹೊರಿಸಿ ನಂತರ ಪರೇಶ್‌ ರಾವಲ್‌ ವಿರುದ್ಧ ಸಿಪಿಐ(ಎಂ) ನಾಯಕ ಮೊಹಮ್ಮದ್‌ ಸಲೀಂ ದೂರು ನೀಡಿದ್ದರು.

Similar News