ನಿಯಮ ಉಲ್ಲಂಘಿಸಿ ಕಅಬಾದ ಮುಂದೆ ಭಾರತ್‌ ಜೋಡೋ ಯಾತ್ರೆಯ ಫಲಕ ಪ್ರದರ್ಶನ: ವ್ಯಕ್ತಿ ಬಂಧನ

Update: 2023-02-07 15:21 GMT

ಜಿದ್ದಾ: ಸೌದಿ ಅರೇಬಿಯಾದಲ್ಲಿರುವ ಪವಿತ್ರ ನಗರ ಮಕ್ಕಾದಲ್ಲಿರುವ ಕಅಬಾದ ಎದುರು ಭಾರತ್ ಜೋಡೋ ಯಾತ್ರೆಯ ಫಲಕ ಪ್ರದರ್ಶಿಸಿದ ಯುವ ಕಾಂಗ್ರೆಸ್ ಕಾರ್ಯಕರ್ತರೊಬ್ಬರನ್ನು ಸ್ಥಳೀಯ ಪೊಲೀಸರು ಬಂಧಿಸಿದ್ದಾರೆ.

ಮಧ್ಯಪ್ರದೇಶದ ಝಾನ್ಸಿ ಬಳಿಯ ನಿವಾರಿ ಜಿಲ್ಲೆಯ ನಿವಾಸಿ ರಝಾ ಖಾದ್ರಿ (26) ಎಂಬಾತನನ್ನು ಮಕ್ಕಾದಲ್ಲಿರುವ ಪವಿತ್ರ ಕಅಬಾದಲ್ಲಿ ಫಲಕ ಪ್ರದರ್ಶಿಸಿದ್ದಕ್ಕಾಗಿ ಬಂಧಿಸಲಾಗಿದೆ. ಪವಿತ್ರ ಕಅಬಾದ ಮುಂದೆ ನಿಂತು ಭಾರತ್ ಜೋಡೋ ಯಾತ್ರೆಯನ್ನು ಬೆಂಬಲಿಸುವ ಫಲಕವನ್ನು ಹಿಡಿದುಕೊಂಡ ಚಿತ್ರವನ್ನು ಹಂಚಿಕೊಂಡ ಎರಡು ದಿನಗಳ ನಂತರ, ಭದ್ರತಾ ಸಿಬ್ಬಂದಿಗಳು ಅವರು ತಂಗಿದ್ದ ಹೋಟೆಲ್‌ ನಿಂದ ಅವರನ್ನು  ವಶಕ್ಕೆ ತೆಗೆದುಕೊಂಡರು ಎಂದು ಮೂಲಗಳು ತಿಳಿಸಿವೆ.

ಇಸ್ಲಾಮಿಕ್ ಪವಿತ್ರ ಸ್ಥಳಗಳು ಸೇರಿದಂತೆ ಸೌದಿ ಅರೇಬಿಯಾದಲ್ಲಿ ಯಾವುದೇ ರೀತಿಯ ಧ್ವಜ ಮತ್ತು ಫಲಕವನ್ನು ಪ್ರದರ್ಶಿಸುವುದು ಕಾನೂನುಬಾಹಿರವಾಗಿದೆ. ಹರಮ್ ಪ್ರದೇಶದಲ್ಲಿ ಯಾವುದೇ ರೀತಿಯ ಧ್ವಜವನ್ನು ಪ್ರದರ್ಶಿಸದಂತೆ ಹಾಗೂ ನೆಲದಲ್ಲಿ ಸಿಗುವ ವಸ್ತುಗಳನ್ನು ಹೆಕ್ಕದಂತೆ ಭಾರತೀಯ ದೂತಾವಾಸವು ಹಲವು ಬಾರಿ ಎಚ್ಚರಿಕೆ ನೀಡಿದೆ.

ನೆಲದಲ್ಲಿರುವವಸ್ತುಗಳನ್ನು ಹೆಕ್ಕುವ ಹಾಗೂ ಯಾವುದಾದರೂ ಧ್ವಜ ಅಥವಾ ಫಲಕವನ್ನು ಪ್ರದರ್ಶಿಸುವ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ಸ್ಥಳೀಯ ನಿಯಮಗಳನ್ನು ಪಾಲಿಸುವಂತೆ ರಾಜತಾಂತ್ರಿಕರು ಪ್ರವಾಸಿ ಭಾರತೀಯರನ್ನು ಎಚ್ಚರಿಸುತ್ತಿದ್ದಾರೆ.

Similar News