2022-23ರಲ್ಲಿ 10,000ಕ್ಕೂ ಅಧಿಕ ಕಿರು, ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ ಬೀಗ

Update: 2023-02-08 14:24 GMT

ಹೊಸದಿಲ್ಲಿ: ವಿತ್ತವರ್ಷ 2022-23ರಲ್ಲಿ 10,655 ಕಿರು, ಸಣ್ಣ ಮತ್ತು ಮಧ್ಯಮ ಉದ್ಯಮ (MSME)ಗಳು ಮುಚ್ಚಲ್ಪಟ್ಟಿದ್ದು,ಇದು ಕಳೆದ ನಾಲ್ಕು ವರ್ಷಗಳಲ್ಲಿ ಗರಿಷ್ಠವಾಗಿದೆ. ಪ್ರಸಕ್ತ ವಿತ್ತವರ್ಷವು ಕೊನೆಗೊಳ್ಳಲು ಇನ್ನೂ ಒಂದು ತಿಂಗಳು ಬಾಕಿಯಿದೆ, ಹೀಗಾಗಿ ನೈಜ ಸಂಖ್ಯೆ ಇನ್ನಷ್ಟು ಹೆಚ್ಚಬಹುದು.

2021-22ರಲ್ಲಿ ಮುಚ್ಚಲ್ಪಟ್ಟ ಎಂಎಸ್ಎಂಇಗಳ ಸಂಖ್ಯೆ 6,222 ಆಗಿತ್ತು. ಅದಕ್ಕೂ ಮುನ್ನ ಈ ಸಂಖ್ಯೆ 2020-21 ರಲ್ಲಿ 175 ಮತ್ತು 2019-20ರಲ್ಲಿ 400 ಆಗಿತ್ತು.
ರಾಜ್ಯಸಭೆಯಲ್ಲಿ ಪ್ರಶ್ನೆಯೊಂದಕ್ಕೆ ನೀಡಿದ ಉತ್ತರದಲ್ಲಿ ಕೇಂದ್ರ ಸರಕಾರವು ಈ ಮಾಹಿತಿಗಳನ್ನು ಒದಗಿಸಿದೆ.

ಅಂಕಿಅಂಶಗಳ ಪ್ರಕಾರ ಹೊಸದಾಗಿ ಆರಂಭಗೊಳ್ಳುತ್ತಿರುವ ಮತ್ತು ಮುಚ್ಚುತ್ತಿರುವ ಉದ್ಯಮಗಳ ನಡುವಿನ ಅನುಪಾತ ತೀವ್ರವಾಗಿ ಹದಗೆಡುತ್ತಿದೆ. 2020-21ರಲ್ಲಿ ಮುಚ್ಚಲ್ಪಟ್ಟ ಪ್ರತಿ ಎಎಸ್ಎಂಇಗೆ ಬದಲಾಗಿ 11,000ಕ್ಕೂ ಅಧಿಕ ಹೊಸ ಉದ್ಯಮಗಳು ಆರಂಭಗೊಂಡಿದ್ದವು. 2021-22ರಲ್ಲಿ ಇದು 349ಕ್ಕೆ ಇಳಿಕೆಯಾಗಿತ್ತು ಮತ್ತು ಪ್ರಸಕ್ತ ವರ್ಷದಲ್ಲಿ ಮುಚ್ಚಲ್ಪಟ್ಟ ಪ್ರತಿ ಎಂಎಎಸ್ಇಗೆ ಬದಲಾಗಿ 167 ಹೊಸ ಉದ್ಯಮಗಳು ಆರಂಭಗೊಂಡಿವೆ. ಆರ್ಥಿಕ ತಜ್ಞರು ದೇಶದಲ್ಲಿಯ ಎಂಎಸ್ಎಂಇಗಳ ಸ್ವಾಸ್ಥದ ಬಗ್ಗೆ ಕೆಲವು ಸಮಯದಿಂದ ಕಳವಳಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ವಿಶೇಷವಾಗಿ ನೋಟು ನಿಷೇಧ ಮತ್ತು ಅಸಮರ್ಪಕವಾಗಿ ಜಾರಿಗೊಂಡ ಜಿಎಸ್ಟಿಯ ಅವಳಿ ಆಘಾತಗಳು ಹಾಗೂ ನಂತರದ ಕೋವಿಡ್ ಸಾಂಕ್ರಾಮಿಕ ಮತ್ತು ಲಾಕ್ಡೌನ್ಗಳ ಬಳಿಕ ಒಟ್ಟಾರೆ ಆರ್ಥಿಕತೆ ಮತ್ತು ನಿರುದ್ಯೋಗ ಸಮಸ್ಯೆಯ ಕುರಿತು ಕಳವಳಗಳು ಸೃಷ್ಟಿಯಾಗಿವೆ.

ಆರ್ಥಿಕತೆಯಲ್ಲಿ ಶೇ.30ರಷ್ಟು ಮತ್ತು ಉದ್ಯೋಗಗಳಲ್ಲಿ ಪ್ರಾಯಶಃ ಶೇ.40ರಷ್ಟು ಪಾಲನ್ನು ಹೊಂದಿರುವ ಎಂಎಸ್ಎಂಇ ಕ್ಷೇತ್ರದ ಸ್ಥಿತಿಯು ಅತ್ಯಂತ ಆತಂಕಕಾರಿ ಮತ್ತು ಪ್ರಮುಖ ಸಮಸ್ಯೆಯಾಗಿದ್ದು,ಇದನ್ನು ಸೂಕ್ತವಾಗಿ ನಿಭಾಯಿಸುವ ಅಗತ್ಯವಿದೆ. ಸಾಂಕ್ರಾಮಿಕದ ಸಂದರ್ಭದಲ್ಲಿ ಮುಚ್ಚಲ್ಪಟ್ಟ ಶೇ.20ರಷ್ಟು ಎಂಎಸ್ಎಂಇಗಳ ಬದಲು ಹೊಸ ಉದ್ಯಮಗಳನ್ನು ಸೃಷ್ಟಿಸಲಾಗಿದೆಯೇ ಎನ್ನುವುದನ್ನು ಬಹಳಷ್ಟು ಅವಲಂಬಿಸಿದೆ ಎಂದು ಭಾರತದ ಮಾಜಿ ಮುಖ್ಯ ಸಂಖ್ಯಾಶಾಸ್ತ್ರಜ್ಞ ಪ್ರಣವ ಸೇನ್ ಅವರು ಇತ್ತೀಚಿಗೆ ಸಂದರ್ಶನವೊಂದರಲ್ಲಿ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.

Similar News