ಫೆ.11ರಂದು ಉಡುಪಿಯಲ್ಲಿ ‘ಪೈಗಾಮೆ ತೌಹೀದ್’ ಸಮ್ಮೇಳನ

Update: 2023-02-08 13:10 GMT

ಉಡುಪಿ: ಜಮೀಯತ್ ಎ ಅಹ್ಲೆ ಹದೀಸ್ ಉಡುಪಿ ಜಿಲ್ಲಾ ವಿಭಾಗ ಕರ್ನಾಟಕ-ಗೋವಾ ವತಿಯಿಂದ ಪೈಗಾಮೆ ತೌಹೀದ್(ಏಕ ದೇವತ್ವ ಸಂದೇಶ)ಸಮ್ಮೇಳನವನ್ನು ಫೆ.11ರಂದು ಬೆಳಗ್ಗೆ 9.30ರಿಂದ ಸಂಜೆ 6.30ರವರೆಗೆ ಆಯೋಜಿಸಲಾಗಿದೆ ಎಂದು ಜಮೀಯತ್ ಎ ಅಹ್ಲೆ ಹದೀಸ್‌ನ ಕಾರ್ಯದರ್ಶಿ ಯಾಸೆರ್ ಅಕ್ರಮ್ ತಿಳಿಸಿದ್ದಾರೆ.

ಉಡುಪಿಯಲ್ಲಿಂದ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಧಾರ್ಮಿಕತೆ ಹೆಸರಿನಲ್ಲಿ ಅವಹೇಳನ, ಸಾಮಾಜಿಕ ಅಶಾಂತಿ ಸೃಷ್ಟಿಸುವುದರಿಂದ ಮನುಕುಲ ನೆಮ್ಮದಿಯಿಂದ ಬದುಕಲು ಸಾಧ್ಯವಿಲ್ಲ. ಜಮೀಯತ್ ಎ ಅಹ್ಲೆ ಹದೀಸ್  ಹಿಂದ್ ಭಾರತದಲ್ಲಿ ಇಸ್ಲಾಂನ ನೈಜ ಸಂದೇಶವಾದ ತೌಹೀದ್ ಸಂದೇಶದೊಂದಿಗೆ ಭಯೋತ್ಪಾದನೆಯ ವಿರುದ್ಧ ಧ್ವನಿ ಎತ್ತಿ ಶಾಂತಿ ಸುವ್ಯವಸ್ಥೆ ಕಾಪಾಡುವುದಕ್ಕೆ ಹಾಗೂ ಶೈಕ್ಷಣಿಕ, ಸಾಮಾಜಿಕ ರಂಗದಲ್ಲಿ ನಿರಂತರ ಶ್ರಮಿಸುತ್ತಿದೆ. ಇದೇ ಧ್ಯೇಯವಾಕ್ಯದೊಂದಿಗೆ ಈ ಸಮ್ಮೇಳನವನ್ನು ಆಯೋಜಿಸಲಾಗಿದೆ ಎಂದರು.

ಸಮ್ಮೇಳನದಲ್ಲಿ ಯುಎಇ ಶಾರ್ಜಾದ ಅಂತಾರಾಷ್ಟ್ರೀಯ ವಿದ್ವಾಂಸ ಶೇಖ್ ಝಫರುಲ್ ಹಸನ್ ಮದನಿ, ಮುಂಬೈಯ ಶೇಕ್ ಅಬು ರಿಝ್ವಾನ್ ಮೊಹಮ್ಮದಿ, ಹೈದರಬಾದ್‌ನ ಶೇಕ್ ಯಾಸೆರ್ ಅಲ್ ಜಾಬ್ರಿ ಮದನಿ, ಮುಂಬೈಯ ಶೇಕ್ ಇನಾಯತುಲ್ಲಾಹ್ ಮದನಿ, ಬೆಂಗಳೂರು ಶೇಕ್ ಎಜಾಝ್ ನದ್ವಿ, ಶೇಕ್ ಸನಾಉಲ್ಲಾಹ್ ಉಮ್ರಿ ನಝೀರಿ ಧಾರ್ಮಿಕ ಪ್ರವಚನ ನೀಡಲಿರುವರು ಎಂದು ಅವರು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಜಮೀಯತ್ ಎ ಅಹ್ಲೆ ಹದೀಸ್ ಅಧ್ಯಕ್ಷ ಅತೀಫ್ ಹುಸೇನ್, ಕುಂಜಿಬೆಟ್ಟು ಮಸ್ಜಿದ್ ಎಉಸ್ಮಾನ್ ಬಿನ್ ಅಫಾನ್‌ನ ಇಮಾಮ್ ಶೇಕ್ ಇಕ್ರಾಮುಲ್ ಹಖ್ ಸಲಫಿ, ಹೂಡೆ ಮಸ್ಜಿದ್ ಎ ಮುಆವಿಯಾ ಅಧ್ಯಕ್ಷ ಸೈಫುಲ್ಲಾ ಕುದೂರ್, ಉಪಾಧ್ಯಕ್ಷ ಅಕ್ಬರ್ ಎಚ್.ಹೂಡೆ ಉಪಸ್ಥಿತರಿದ್ದರು.

Similar News