ಬೆಲೆ ಏರಿಕೆಗೆ ಕಡಿವಾಣ ಕಸರತ್ತು: 16 ಲಕ್ಷ ಟನ್ ಗೋಧಿ ಬಿಡುಗಡೆ ಶೀಘ್ರ

Update: 2023-02-09 02:27 GMT

ಹೊಸದಿಲ್ಲಿ: ಮುಕ್ತ ಮಾರುಕಟ್ಟೆಯಲ್ಲಿ ಗೋಧಿ ಹಾಗೂ ಗೋಧಿಹಿಟ್ಟಿನ ಬೆಲೆ ಗಗನಕ್ಕೇರುತ್ತಿರುವುದನ್ನು ತಡೆಯುವ ಪ್ರಯತ್ನವಾಗಿ ಮುಂದಿನ ವಾರ ಸುಮಾರು 16 ಲಕ್ಷ ಟನ್ ಗೋಧಿಯನ್ನು ಕಡಿಮೆ ಮೀಸಲು ಬೆಲೆಯಲ್ಲಿ ಬಿಡುಗಡೆ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ.

ಜತೆಗೆ ನಫೆಡ್ ಹಾಗೂ ಕೇಂದ್ರೀಯ ಭಂಡಾರದಂಥ ಸಂಸ್ಥೆಗಳಿಗೆ ಕೂಡಾ ಗೋಧಿಯನ್ನು ಕಡಿಮೆ ಬೆಲೆಗೆ ನೀಡಿ, ಪ್ರಸ್ತುತ ಇರುವ ಗರಿಷ್ಠ ಮಾರಾಟ ದರವಾದ ರೂ. 29.5 ಕ್ಕಿಂತ ಕಡಿಮೆ ದರದಲ್ಲಿ ಗೋಧಿಹಿಟ್ಟು ಮಾರಾಟ ಮಾಡಲು ಅನುವು ಮಾಡಿಕೊಡಲಿದೆ.

ಭಾರತದ ಆಹಾರ ನಿಗಮ ಈಗಾಗಲೇ ಒಂಬತ್ತು ಲಕ್ಷ ಟನ್ ಗೋಧಿಯನ್ನು ಮುಕ್ತ ಮಾರುಕಟ್ಟೆಗೆ ಹರಾಜಿನ ಮೂಲಕ ಬಿಡುಗಡೆ ಮಡಿದೆ.

ಮುಂದಿನ ಕೆಲ ದಿನಗಳಲ್ಲಿ ಈ ಆಹಾರಧಾನ್ಯವನ್ನು ಮಾರಾಟ ಮಾಡುವ ಮೀಸಲು ಬೆಲೆಯ ಬಗ್ಗೆ ನಿರ್ಧಾರ ಕೈಗೊಳ್ಳಲಿದೆ. ಆದರೆ ಕನಿಷ್ಠ ಬೆಂಬಲ ಬೆಲೆಗಿಂತ ಕಡಿಮೆ ಬೆಲೆಯಲ್ಲಿ ಗೋಧಿ ಮಾರಾಟ ಮಾಡಿದರೆ ಅದು ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆ ಇದ್ದು, ವ್ಯಾಪಾರಿಗಳು ಕನಿಷ್ಠ ಬೆಂಬಲ ಬೆಲೆಯಲ್ಲಿ ಮತ್ತೆ ಸರ್ಕಾರಕ್ಕೆ ಗೋಧಿಯನ್ನು ಮರು ಮಾರಾಟ ಮಾಡುವ ಅಪಾಯವೂ ಇದೆ ಎಂದು ಉನ್ನತ ಮೂಲಗಳು ಹೇಳಿವೆ.

ಪ್ರಸಕ್ತ ಮಾರುಕಟ್ಟೆ ಸೀಸನ್‌ನಲ್ಲಿ ಮಧ್ಯಪ್ರದೇಶ, ಮಹಾರಾಷ್ಟ್ರ ಮತ್ತು ಗುಜರಾತ್‌ನಲ್ಲಿ ರೈತರು ಹೊಸದಾಗಿ ಬೆಳೆದ ಗೋಧಿಯನ್ನು ಮಾರುಕಟ್ಟೆಗೆ ತರಲಾರಂಭಿಸಿದ್ದಾರೆ. ಮಂಡಿಯಲ್ಲಿ ಕ್ವಿಂಟಲ್ ಗೋಧಿಗೆ 2400 ರಿಂದ 2450 ರೂಪಾಯಿ ದರ ಇದೆ. 2023-24ಕ್ಕೆ ಕನಿಷ್ಠಬೆಂಬಲ ಬೆಲೆ ರೂ. 2125 ಅಗಿರುತ್ತದೆ ಎಂದು ಮೂಲಗಳು ಸ್ಪಷ್ಟಪಡಿಸಿವೆ.

Similar News