ನನ್ನ ಭಾಷಣದ ಭಾಗಗಳನ್ನು ಸಂಸತ್ತಿನ ದಾಖಲೆಗಳಿಂದ ಏಕೆ ಅಳಿಸಲಾಗಿದೆ: ಮಲ್ಲಿಕಾರ್ಜುನ ಖರ್ಗೆ ಪ್ರಶ್ನೆ

Update: 2023-02-09 16:06 GMT

ಹೊಸದಿಲ್ಲಿ, ಫೆ. 9: ತನ್ನ ಕೆಲವು ಮಾತುಗಳನ್ನು ಸಂಸತ್‌ನ ಕಡತದಿಂದ ಅಳಿಸಿ ಹಾಕುವ ರಾಜ್ಯಸಭೆಯ ಸಭಾಪತಿ ಜಗದೀಪ್ ಧನ್ಕರ್‌ರ ನಿರ್ಧಾರಕ್ಕೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಗುರುವಾರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಕೈಗಾರಿಕೋದ್ಯಮಿ ಗೌತಮ್ ಅದಾನಿಯ ಸಂಪತ್ತಿನಲ್ಲಿ ಆಗಿರುವ ಅಗಾಧ ಏರಿಕೆಗೆ ಸರಕಾರದ ಕೃಪೆ ಕಾರಣವೇ ಎಂಬುದಾಗಿ ಬುಧವಾರ ರಾಜ್ಯಸಭೆಯಲ್ಲಿ ಮಾಡಿದ ಭಾಷಣದ ವೇಳೆ ಖರ್ಗೆ ಪ್ರಶ್ನಿಸಿದ್ದರು.

ಪ್ರಧಾನಿ ನರೇಂದ್ರ ಮೋದಿ ಅದಾನಿ ಗುಂಪಿನ ಪರವಾಗಿ ಕೆಲಸ ಮಾಡುತ್ತಿದ್ದಾರೆ ಎಂಬುದಾಗಿ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಲೋಕಸಭೆಯಲ್ಲಿ ಆರೋಪಿಸಿದ ಒಂದು ದಿನದ ಬಳಿಕ ಖರ್ಗೆ ರಾಜ್ಯಸಭೆಯಲ್ಲಿ ದಾಳಿ ನಡೆಸಿದ್ದರು.

ರಾಹುಲ್ ಗಾಂಧಿ ಭಾಷಣದಲ್ಲಿನ 18 ಹೇಳಿಕೆಗಳನ್ನು ಕಡತದಿಂದ ಅಳಿಸಲಾಗಿತ್ತು. ಅವುಗಳೆಲ್ಲವೂ ಅದಾನಿಗೆ ಸಂಬಂಧಿಸಿದ ಹೇಳಿಕೆಗಳಾಗಿದ್ದವು.

ನನ್ನ ಮಾತುಗಳನ್ನು ಕಡತದಿಂದ ತೆಗೆದುಹಾಕಲು, ನನ್ನ ಭಾಷಣದಲ್ಲಿ ಯಾವುದೇ ‘ಅಸಂಸದೀಯ ಅಥವಾ ಆರೋಪಿಸುವ’ ಯಾವುದೇ ಮಾತುಗಳನ್ನು ನಾನು ಆಡಿಲ್ಲ ಎಂದು ಗುರುವಾರ ಖರ್ಗೆ, ಧನ್ಕರ್‌ಗೆ ಹೇಳಿದರು.

ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಟ್ವೀಟ್ ಮಾಡಿ, ಖರ್ಗೆಯವರ ಮಾತುಗಳನ್ನು ತೆಗೆದುಹಾಕುವುದರ ಬದಲು ಧನ್ಕರ್‌ರ ಕೆಲವು ನಿರ್ದಿಷ್ಟ ಮಾತುಗಳನ್ನು ತೆಗೆದುಹಾಕಬೇಕಾಗಿತ್ತು ಎಂದು ಹೇಳಿದ್ದಾರೆ.

ಕೇಂದ್ರ ಸರಕಾರವು ಅದಾನಿ ಗುಂಪಿನ ಜೊತೆಗೆ ಶಾಮೀಲಾಗಿದೆ ಎಂಬುದಾಗಿ ರಾಹುಲ್ ಗಾಂಧಿ ಮತ್ತು ಖರ್ಗೆ ಆರೋಪಿಸಿದ ಬಳಿಕ, ರಾಷ್ಟ್ರಪತಿಯ ಭಾಷಣಕ್ಕೆ ವಂದನೆ ಸಲ್ಲಿಸುವ ನಿರ್ಣಯದ ಕುರಿತ ಚರ್ಚೆಯಲ್ಲಿ ಪ್ರಧಾನಿ ಮೋದಿ ಈ ಆರೋಪಗಳಿಗೆ ಪ್ರತಿಕ್ರಿಯೆ ನೀಡಬಹುದು ಎಂಬುದಾಗಿ ವ್ಯಾಪಕವಾಗಿ ಭಾವಿಸಲಾಗಿತ್ತು. ಆದರೆ, ಪ್ರಧಾನಿ ಬುಧವಾರ ಲೋಕಸಭೆಯಲ್ಲಿ ಒಂದು ಗಂಟೆಗೂ ಹೆಚ್ಚು ಕಾಲ ಮಾತನಾಡಿದರೂ, ಆರೋಪಗಳ ಬಗ್ಗೆ ಒಂದೇ ಒಂದು ಮಾತನ್ನು ಅವರು ಆಡಲಿಲ್ಲ.

ಮೋದಿ ಮೌನಕ್ಕೆ ರಾಹುಲ್ ಟೀಕೆ

ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ರಾಹುಲ್ ಗಾಂಧಿ, ಅದಾನಿ ವಿಷಯದಲ್ಲಿ ತಾನು ಕೇಳಿರುವ ಪ್ರಶ್ನೆಗಳಿಗೆ ಉತ್ತರವನ್ನು ನೀಡದಿರುವುದಕ್ಕಾಗಿ ಮೋದಿಯನ್ನು ಟೀಕಿಸಿದರು.

‘‘ನಾನು ಕ್ಲಿಷ್ಟ ಪ್ರಶ್ನೆಗಳನ್ನು ಕೇಳಿರಲಿಲ್ಲ. ಎಷ್ಟು ಸಲ ಅದಾನಿ ನಿಮ್ಮೆಂದಿಗೆ ಪ್ರಯಾಣಿಸಿದ್ದಾರೆ, ನೀವು ಅವರನ್ನು ಎಷ್ಟು ಸಲ ವಿದೇಶಗಳಲ್ಲಿ ಭೇಟಿಯಾಗಿದ್ದೀರಿ ಎಂದಷ್ಟೇ ನಾನು ಕೇಳಿರುವುದು. ಅವುಗಳು ಸರಳ ಪ್ರಶ್ನೆಗಳು. ಆದರೆ, ಅವುಗಳಿಗೆ ಉತ್ತರವೇ ಸಿಗಲಿಲ್ಲ’’ ಎಂದು ರಾಹುಲ್ ಗಾಂಧಿ ಹೇಳಿದರು.

Similar News