ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚು ಹಣ ಮೀಸಲಿರಿಸುವುದರಿಂದ ಏನೂ ಸಾಧಿಸಲಾಗದು: ವಿತ್ತ ಕಾರ್ಯದರ್ಶಿ ಸೋಮನಾಥನ್‌

Update: 2023-02-09 08:48 GMT

ಹೊಸದಿಲ್ಲಿ: ಶಿಕ್ಷಣ ಕ್ಷೇತ್ರಕ್ಕೆ ಸರ್ಕಾರ ಹೆಚ್ಚು ಹಣ ಮೀಸಲಿರಿಸಿದರೂ ಭಾರತದಲ್ಲಿ ಶಿಕ್ಷಣದ ಗುಣಮಟ್ಟ ಸುಧಾರಿಸದು ಎಂಬರ್ಥ ನೀಡುವ ಹೇಳಿಕೆಯನ್ನು ವಿತ್ತ ಕಾರ್ಯದರ್ಶಿ ಟಿ ವಿ ಸೋಮನಾಥನ್‌ ಅವರು ಈ ವರ್ಷದ ಬಜೆಟ್‌  ಪ್ರಸ್ತಾವನೆಗಳ ಕುರಿತಂತೆ  ಆಂಗ್ಲ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ನೀಡಿದ್ದಾರೆ.

ಭಾರತದಲ್ಲಿ ಸಾಕಷ್ಟು ಶಾಲಾ  ಶಿಕ್ಷಕರಿದ್ದಾರೆ ಎಂದೂ ಸೋಮನಾಥನ್‌ ಹೇಳಿಕೊಂಡರು. "ಶಿಕ್ಷಣದಲ್ಲಿ ಪ್ರಮಾಣ (ಕ್ವಾಂಟಿಟಿ) ಮುಖ್ಯವಲ್ಲ, ಗುಣಮಟ್ಟ (ಕ್ವಾಲಿಟಿ) ಮುಖ್ಯ. ಶಿಕ್ಷಕರು ಕರ್ತವ್ಯಕ್ಕೆ ಹಾಜರಾಗುತ್ತಾರೆಯೇ? ಚೆನ್ನಾಗಿ ಕಲಿಸುತ್ತಾರೆಯೇ? ಮಕ್ಕಳು ಹೋಂವರ್ಕ್‌ ಪೂರ್ಣಗೊಳಿಸಿದ್ದಾರೆಯೇ ಎಂದು ನೋಡುತ್ತಾರೆಯೇ? ವಿದ್ಯಾರ್ಥಿ ಚೆನ್ನಾಗಿ ಕಲಿತಿದ್ದಾನೆಯೇ ಅಥವಾ ಇಲ್ಲವೇ ಎಂದು ನೋಡದೆ ಪಾಸ್‌ ಮಾಡುತ್ತಾರೆಯೇ? ಇಲ್ಲಿ ಹಣದ ಪ್ರಶ್ನೆ ಬರುವುದಿಲ್ಲ., ಆದ್ದರಿಂದ ಹೆಚ್ಚು ಹಣವನ್ನು ಶಿಕ್ಷಣ ಕ್ಷೇತ್ರಕ್ಕೆ ಒದಗಿಸುವುದರಿಂದ ಏನೂ ಸಾಧಿಸಲಾಗದು," ಎಂದು ಅವರು ಹೇಳಿದ್ದಾರೆ.

ಉನ್ನತ ಶಿಕ್ಷಣ ಕ್ಷೇತ್ರಕ್ಕೂ ಇದೇ ಮಾತನ್ನು ಅನ್ವಯಿಸಿದ ವಿತ್ತ ಕಾರ್ಯದರ್ಶಿ, "ಹೆಚ್ಚು ಹಣಕಾಸು ಅನುದಾನ ಒದಗಿಸಿದಲ್ಲಿ, ನಾವು ಏನಾದರೂ ಈ ಕ್ಷೇತ್ರಕ್ಕೆ ಮಾಡುತ್ತಿದ್ದೇವೆ ಎಂಬ ಭಾವನೆ ಶಿಕ್ಷಣ ಕ್ಷೇತ್ರದವರಲ್ಲಿ ಮೂಡಿಸುತ್ತದೆ ಅಷ್ಟೇ.  ವಿಶ್ವವಿದ್ಯಾಲಯಗಳನ್ನು ರಾಜಕಾರಣದಿಂದ ದೂರವಿರಿಸುವುದು ನಿಜವಾಗಿ ಅಗತ್ಯವಿದೆ," ಎಂದು ಅವರು ಹೇಳಿದರು.

ಕಳೆದೆರಡು ವರ್ಷಗಳಿಗೆ ಹೋಲಿಸಿದಾಗ ಈ ವರ್ಷ ಸರ್ಕಾರ ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿನ ಹಣ ಮೀಸಲಿರಿಸಿದೆ. ಸರ್ಕಾರ "ಸರಿಯಾದ ಸ್ಥಳಗಳಿಗೆ" ಹಣ ಒದಗಿಸಿದೆ ಎಂದೂ ಅವರು ಹೇಳಿದರು.

Similar News