×
Ad

ಆಂಧ್ರಪ್ರದೇಶದಲ್ಲಿ ಮೃತಪಟ್ಟ ಪತ್ನಿಯನ್ನು ಹೊತ್ತುಕೊಂಡು ಕಿ.ಮೀ.ಗಟ್ಟಲೆ ನಡೆದ ಒಡಿಶಾ ವ್ಯಕ್ತಿ

Update: 2023-02-09 17:11 IST

ನಬ್ರಂಗ್‌ಪುರ್ (ಒಡಿಶಾ): ನೆರೆಯ ಆಂಧ್ರಪ್ರದೇಶದ ಆಸ್ಪತ್ರೆಯಿಂದ ಆಟೋ ರಿಕ್ಷಾದಲ್ಲಿ ಮರಳುವಾಗ ಮೃತಪಟ್ಟಿದ್ದ ತನ್ನ ಪತ್ನಿಯನ್ನು ಒಡಿಶಾದ ಕೋರಾಪುಟ್ ಜಿಲ್ಲೆಯ 35 ವರ್ಷದ ವ್ಯಕ್ತಿಯೊಬ್ಬ ಹೆಗಲ ಮೇಲೆ ಹೊತ್ತುಕೊಂಡು ಹಲವಾರು ಕಿಮೀ ನಡೆದಿರುವ ಘಟನೆ ವರದಿಯಾಗಿದೆ.

ಪತ್ನಿಯನ್ನು ಹೆಗಲ ಮೇಲೆ ಹೊತ್ತುಕೊಂಡು ನಡೆಯುತ್ತಿದ್ದ ಸಮುಲು ಪಂಗಿ ಎಂಬ ವ್ಯಕ್ತಿಯನ್ನು ಪೊಟ್ಟಂಗಿ ಬ್ಲಾಕ್‌ನ ಸೊರದಾ ಗ್ರಾಮದಲ್ಲಿ ಕಂಡ ಪೊಲೀಸರು, ಆತನ ಪತ್ನಿಯ ದೇಹವನ್ನು ಕೊಂಡೊಯ್ಯಲು ಆ್ಯಂಬುಲೆನ್ಸ್ ವ್ಯವಸ್ಥೆ ಮಾಡಿದ್ದಾರೆ.

ಅನಾರೋಗ್ಯಕ್ಕೀಡಾಗಿದ್ದ ತನ್ನ ಪತ್ನಿಯನ್ನು ಪಂಗಿ ಆಂಧ್ರಪ್ರದೇಶದ ವಿಶಾಖಪಟ್ಟಣಂ ಜಿಲ್ಲೆಯ ಸಂಗಿವಲಸ ಪಟ್ಟಣದ ಆಸ್ಪತ್ರೆಯೊಂದಕ್ಕೆ ದಾಖಲಿಸಿದ್ದರು. ಆದರೆ, ಆಕೆ ಚಿಕಿತ್ಸೆಗೆ ಸ್ಪಂದಿಸುತ್ತಿಲ್ಲವಾದ್ದರಿಂದ ಅಲ್ಲಿಂದ ನೂರು ಕಿಮೀ ದೂರವಿರುವ ಮನೆಗೆ ಕರೆದೊಯ್ಯುವಂತೆ ವೈದ್ಯರು ಸಲಹೆ ನೀಡಿದ್ದಾರೆ.

"ನನ್ನ ಪತ್ನಿಯನ್ನು ಮನೆಗೆ ಕರೆದೊಯ್ಯಲು ಆಟೋ ರಿಕ್ಷಾವನ್ನು ಬಾಡಿಗೆಗೆ ಹಿಡಿದೆ. ಆದರೆ, ಆಕೆ ಮಾರ್ಗಮಧ್ಯದಲ್ಲಿ ವಿಝಿಯನಗರಂ ಬಳಿ ಮೃತಪಟ್ಟಳು. ಹೀಗಾಗಿ ಪ್ರಯಾಣವನ್ನು ಮುಂದುವರಿಸಲು ನಿರಾಕರಿಸಿದ ಆಟೋ ರಿಕ್ಷಾ ಚಾಲಕ, ನಮ್ಮನ್ನು ಚೆಲ್ಲೂರ್ ರಿಂಗ್ ರೋಡ್ ಬಳಿ ಬಿಟ್ಟು ತೆರಳಿದ" ಎಂದು ಪಂಗಿ ತಿಳಿಸಿದ್ದಾರೆ.

ಬೇರೆ ದಾರಿ ಕಾಣದ ಪಂಗಿ, ಅಲ್ಲಿಂದ ಇನ್ನೂ 80 ಕಿಮೀ ದೂರವಿದ್ದ ತನ್ನ ಮನೆಗೆ ಪತ್ನಿಯ ಮೃತದೇಹವನ್ನು ಹೆಗಲ ಮೇಲೆ ಹೊತ್ತುಕೊಂಡು ಹೆಜ್ಜೆ ಹಾಕಿದ್ದಾರೆ. ಸ್ಥಳೀಯರು ನೀಡಿದ ಮುನ್ಸೂಚನೆಯ ಮೇರೆಗೆ ಗ್ರಾಮಾಂತರ ಸರ್ಕಲ್ ಇನ್ಸ್‌ಪೆಕ್ಟರ್ ಟಿ.ವಿ. ತಿರುಪತಿ ರಾವ್ ಹಾಗೂ ಸಬ್ ಇನ್ಸ್‌ಪೆಕ್ಟರ್ ಕಿರಣ್ ಕುಮಾರ್ ಅವರನ್ನು ಮಾರ್ಗಮಧ್ಯೆ ತಡೆದಿದ್ದಾರೆ.

ಮೊದಲಿಗೆ ಭಾಷೆಯ ಸಮಸ್ಯೆಯಿಂದ ಪಂಗಿ ಏನು ಹೇಳುತ್ತಿದ್ದಾನೆ ಎಂಬುದು ಪೊಲೀಸರಿಗೆ ಅರ್ಥವಾಗಿಲ್ಲ. ಅದೇ ಹೊತ್ತಿನಲ್ಲಿ ಅಲ್ಲಿ ಒಡಿಶಾ ಭಾಷೆ ಗೊತ್ತಿರುವ ವ್ಯಕ್ತಿ ಸಾಗಿ ಹೋಗುತ್ತಿರುವುದನ್ನು ಪೊಲೀಸರು ಕಂಡಿದ್ದಾರೆ. ಆತನಿಂದ ಏನು ನಡೆದಿದೆ ಎಂದು ತಿಳಿದುಕೊಂಡ ಪೊಲೀಸರು, ಪಂಗಿ ಮತ್ತು ಆತನ ಪತ್ನಿಯ ಮೃತದೇಹವನ್ನು ಆತನ ಗ್ರಾಮಕ್ಕೆ ಸಾಗಿಸಲು ಆ್ಯಂಬುಲೆನ್ಸ್ ವ್ಯವಸ್ಥೆ ಮಾಡಿದ್ದಾರೆ.

ಈ ನೆರವಿಗಾಗಿ ಪಂಗಿ ಪೊಲೀಸರಿಗೆ ಧನ್ಯವಾದ ಸಲ್ಲಿಸಿದ್ದರೆ, ಸ್ಥಳೀಯರು ಪೊಲೀಸರ ಸಮಯಪ್ರಜ್ಞೆಯನ್ನು ಅಭಿನಂದಿಸಿದ್ದಾರೆ.

ಇದಕ್ಕೂ ಮುನ್ನ, 2016ರಲ್ಲಿ ಕೂಡಾ ಆಸ್ಪತ್ರೆಯೊಂದು ಶವ ಸಾಗಣೆ ವಾಹನ ನೀಡಲು ನಿರಾಕರಿಸಿದ್ದರಿಂದಾಗಿ ದನ ಮಹ್ಜಿ ಎಂಬ ಒಡಿಶಾ ವ್ಯಕ್ತಿ 12 ಕಿಮೀಯಷ್ಟು ದೂರ ಪತ್ನಿಯ ಮೃತದೇಹವನ್ನು ಹೆಗಲ ಮೇಲೆ ಹೊತ್ತುಕೊಂಡು ನಡೆದಿದ್ದ. ಈ ಘಟನೆಯು ಅಂತಾರಾಷ್ಟ್ರೀಯ ಮಾಧ್ಯಮಗಳಲ್ಲಿ ಮುಖಪುಟ ಸುದ್ದಿಯಾಗಿ, ಒಡಿಶಾ ಸರ್ಕಾರಕ್ಕೆ ತೀವ್ರ ಮುಜುಗರ ಉಂಟು ಮಾಡಿತ್ತು.

ಇದನ್ನು ಓದಿ: ಚಿತೆ ಸಿದ್ಧಪಡಿಸಿ ನಂತರ ಅದಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಕೇರಳದ ವ್ಯಕ್ತಿ

Similar News