ಮುಂಬೈ-ಅಹ್ಮದಾಬಾದ್ ಬುಲೆಟ್ ರೈಲು ಯೋಜನೆ: ಭೂಸ್ವಾಧೀನ ಪ್ರಶ್ನಿಸಿದ್ದ ಅರ್ಜಿಗೆ ಬಾಂಬೆ ಹೈಕೋರ್ಟ್ ತಿರಸ್ಕಾರ
ಮುಂಬೈ,ಫೆ.9: ಮುಂಬೈ-ಅಹ್ಮದಾಬಾದ್ ಬುಲೆಟ್ ರೈಲು ಯೋಜನೆಗಾಗಿ ಭೂಸ್ವಾಧೀನವನ್ನು ಪ್ರಶ್ನಿಸಿದ್ದ ಅರ್ಜಿಯನ್ನು ಗುರುವಾರ ತಿರಸ್ಕರಿಸಿದ ಬಾಂಬೆ ಉಚ್ಚ ನ್ಯಾಯಾಲಯವು,ಈ ಯೋಜನೆಯು ರಾಷ್ಟ್ರೀಯ ಮಹತ್ವದ್ದಾಗಿದೆ ಎಂದು ಬಣ್ಣಿಸಿದೆ.
ಮುಂಬೈನ ವಿಕ್ರೋಲಿಯಲ್ಲಿನ ತನ್ನ ಭೂಮಿಯನ್ನು ಮಹಾರಾಷ್ಟ್ರ ಸರಕಾರ ಮತ್ತು ನ್ಯಾಷನಲ್ ಹೈ ಸ್ಪೀಡ್ ರೇಲ್ ಕಾರ್ಪೊರೇಷನ್ (ಎನ್‌ಎಚ್‌ಎಸ್‌ಆರ್‌ಸಿ) ಸ್ವಾಧೀನ ಪಡಿಸಿಕೊಂಡಿದ್ದನ್ನು ಪ್ರಶ್ನಿಸಿ ಗಾಡ್ರೆಜ್ ಆ್ಯಂಡ್ ಬಾಯ್ಸೆ ಕಂಪನಿಯು ಅರ್ಜಿಯನ್ನು ಸಲ್ಲಿಸಿತ್ತು.
ಮುಂಬೈ ಉಪನಗರ ಜಿಲ್ಲೆಯ ಜಿಲ್ಲಾಧಿಕಾರಿಗಳು 9.69 ಎಕರೆ ಭೂಮಿಯ ಸ್ವಾಧೀನಕ್ಕಾಗಿ 264 ಕೋ.ರೂ.ಗಳನ್ನು ಕಂಪನಿಗೆ ಪಾವತಿಸಿದ್ದರು.
2019ರಲ್ಲಿ ಆರಂಭಗೊಂಡಿದ್ದ ಭೂಸ್ವಾಧೀನ ಪ್ರಕ್ರಿಯೆಯು ಮುಂದಿನ ವರ್ಷ ಸ್ಥಗಿತಗೊಂಡಿತ್ತು,ಹೀಗಾಗಿ ಪರಿಹಾರ ನೀಡಿಕೆಯು ಆರಂಭದಿಂದಲೂ ಅನೂರ್ಜಿತವಾಗಿತ್ತು ಎಂದು ತನ್ನ ಅರ್ಜಿಯಲ್ಲಿ ವಾದಿಸಿದ್ದ ಕಂಪನಿಯು,ತನಗೆ ನೀಡಲಾಗಿರುವ ಪರಿಹಾರವು ಆರಂಭದಲ್ಲಿ ತಿಳಿಸಲಾಗಿದ್ದ 572 ಕೋ.ರೂ.ಗಿಂತ ಬಹಳ ಕಡಿಮೆಯಾಗಿದೆ ಎಂದು ತಿಳಿಸಿತ್ತು. ಆದರೆ,ಪರಿಹಾರದಲ್ಲಿ ಯಾವುದೇ ಅಕ್ರಮ ನಡೆದಿಲ್ಲ ಎಂದು ಹೇಳಿದ ನ್ಯಾಯಮೂರ್ತಿಗಳಾದ ಆರ್.ಡಿ.ಧನುಕಾ ಮತ್ತು ಎಂ.ಎಂ.ಸಾಠಯೆ ಅವರ ಪೀಠವು,ಯೋಜನೆಯು ರಾಷ್ಟ್ರೀಯ ಮಹತ್ವ ಮತ್ತು ಸಾರ್ವಜನಿಕ ಹಿತಾಸಕ್ತಿಯದಾಗಿದೆ. ಯಾವುದೇ ಹಸ್ತಕ್ಷೇಪ ಅಗತ್ಯವಿಲ್ಲ ಎಂದು ತಿಳಿಸಿತು.
ಬುಲೆಟ್ ರೈಲು ಅಂತಹ ಮೊದಲ ಯೋಜನೆಯಾಗಿದೆ ಮತ್ತು ಖಾಸಗಿ ಹಿತಾಸಕ್ತಿಗಿಂತ ಸಾಮೂಹಿಕ ಹಿತಾಸಕ್ತಿಯು ಮೇಲಿನದ್ದಾಗಿದೆ ಎಂದೂ ಪೀಠವು ಹೇಳಿತು.
ಕಂಪನಿಯು ಸರ್ವೋಚ್ಚ ನ್ಯಾಯಾಲಯದಲ್ಲಿ ಮೇಲ್ಮನವಿಯನ್ನು ಸಲ್ಲಿಸಲು ಎರಡು ವಾರಗಳ ಕಾಲ ತನ್ನ ಆದೇಶವನ್ನು ತಡೆಹಿಡಿಯುವಂತೆ ಗಾಡ್ರೆಜ್ ಆ್ಯಂಡ್ ಬಾಯ್ಸೆ ಪರ ಹಿರಿಯ ವಕೀಲ ನವ್ರೋಝ್ ಸೀರ್ವಾಯಿ ಆಗ್ರಹಿಸಿದರಾದರೂ ನ್ಯಾಯಾಲಯವು ಅದನ್ನು ತಿರಸ್ಕರಿಸಿತು.
ರಾಜ್ಯ ಸರಕಾರದ ಪರ ಅಡ್ವೋಕೇಟ್ ಜನರಲ್ ಅಶುತೋಷ ಕುಂಭಕೋಣಿ ಅವರು,ವಿಕ್ರೋಲಿಯಲ್ಲಿನ ಭೂಮಿಯನ್ನು ಹೊರತುಪಡಿಸಿ ಯೋಜನೆಗಾಗಿ ಭೂಸ್ವಾಧೀನವು ಪೂರ್ಣಗೊಂಡಿದೆ. ಸದ್ರಿ ಭೂಮಿಯ ಮೇಲೆ ಹಕ್ಕುಸ್ವಾಮ್ಯವನ್ನು ಮಂಡಿಸಿ ರಾಜ್ಯ ಸರಕಾರವು ಮೊಕದ್ದಮೆಯನ್ನು ದಾಖಲಿಸಿದೆ ಮತ್ತು ಅದು ಸರಕಾರದ ಪರವಾಗಿ ಇತ್ಯರ್ಥಗೊಂಡರೆ ಪರಿಹಾರವನ್ನು ಮರುಪಾವತಿಸುವಂತೆ ಕೋರಲಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು.
508 ಕಿ.ಮೀ.ಉದ್ದದ ಮುಂಬೈ-ಅಹ್ಮದಾಬಾದ್ ಬುಲೆಟ್ ರೈಲು ಯೋಜನೆಯು ಅಂದಾಜು 1.1 ಲ.ಕೋ.ರೂ.ವೆಚ್ಚದ್ದಾಗಿದ್ದು, ಜಪಾನ್ ಇಂಟರ್‌ನ್ಯಾಷನಲ್ ಕೋಆಪರೇಷನ್ ಏಜೆನ್ಸಿಯು 88,000 ಕೋ.ರೂ.ಗಳನ್ನು ಒದಗಿಸಲಿದೆ.