ಇದು ‘ಅಮೃತಕಾಲ’ವಲ್ಲ,‘ವಿಷಕಾಲ’: ಸಿಪಿಎಂ
ಅಮರಪುರ (ತ್ರಿಪುರಾ),ಫೆ.9: ಬಿಜೆಪಿ(BJP)ಯ ‘ಅಮೃತಕಾಲ’ ಘೋಷಣೆಯ ವಿರುದ್ಧ ಗುರುವಾರ ತೀವ್ರ ದಾಳಿ ನಡೆಸಿದ ಸಿಪಿಎಂ(CPM),ಕೇಸರಿ ಪಕ್ಷದ ಅಧಿಕಾರಾವಧಿಯನ್ನು ‘ವಿಷಕಾಲ’ ಎಂದು ಬಣ್ಣಿಸಬೇಕು ಎಂದು ಹೇಳಿದೆ.
ಬಿಜೆಪಿಯು ದೇಶದ ಸಂವಿಧಾನದ ಮೇಲೆ ದಾಳಿಯನ್ನಾರಂಭಿಸಿದೆ, ಜೊತೆಗೆ ಧರ್ಮವನ್ನು ರಾಜಕೀಯ ಲಾಭದ ಸಾಧನವನ್ನಾಗಿ ಬಳಸಿಕೊಳ್ಳಲು ಪ್ರಯತ್ನಿಸುತ್ತಿದೆ ಎಂದೂ ಅದು ಆರೋಪಿಸಿದೆ.
‘ತನ್ನ ಸರಕಾರವು ಬಡವರಿಗೆ ಉಚಿತ ಪಡಿತರವನ್ನು ನೀಡುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ(Narendra Modi)ಯವರು ಹೇಳಿದ್ದಾರೆ,ಆದರೆ ಈ ವರ್ಷದ ಬಜೆಟ್‌ನಲ್ಲಿ ಆಹಾರ ಸಬ್ಸಿಡಿಯನ್ನು 90,000 ಕೋ.ರೂ.ಗಳಷ್ಟು ಕಡಿತಗೊಳಿಸಿರುವುದು ನಮ್ಮ ಗಮನಕ್ಕೆ ಬಂದಿದೆ. ಇದು ಅಮೃತಕಾಲವಲ್ಲ,ಇದು ವಿಷಕಾಲ ’ಎಂದು ಇಲ್ಲಿ ಚುನಾವಣಾ ರ್ಯಾಲಿಯೊಂದರಲ್ಲಿ ಮಾತನಾಡಿದ ಸಿಪಿಎಂ ಪಾಲಿಟ್ ಬ್ಯೂರೊ ಸದಸ್ಯೆ ಬೃಂದಾ ಕಾರಾಟ್(Brinda Karat) ಹೇಳಿದರು.
60 ಸದಸ್ಯ ಬಲದ ತ್ರಿಪುರಾ ವಿಧಾನ ಸಭೆಗೆ ಫೆ.16ರಂದು ನಡೆಯಲಿರುವ ಚುನಾವಣೆಯಲ್ಲಿ ಸಿಪಿಎಂ ಬಿಜೆಪಿಯ ಪ್ರಮುಖ ಎದುರಾಳಿಯಾಗಿದೆ.
‘ಬಿಜೆಪಿ ಧರ್ಮದ ಕುರಿತು ರಾಜಕೀಯದಲ್ಲಿ ತೊಡಗಿಕೊಂಡಿದೆ. ಅದರ ಹಿಂದುತ್ವ ಸಿದ್ಧಾಂತಕ್ಕೂ ಹಿಂದು ಧರ್ಮಕ್ಕೂ ಯಾವುದೇ ಸಂಬಂಧವಿಲ್ಲ. ಅದು ಚುನಾವಣಾ ಲಾಭಗಳಿಗಾಗಿ ನಮ್ಮ ಜನರ ನಡುವೆ ಒಡಕನ್ನು ಸೃಷ್ಟಿಸಲು ಸಾಧನವಾಗಿದೆ ’ ಎಂದು ಹೇಳಿದ ಕಾರಾಟ್,ಬಿಜೆಪಿಯು ಸಾಂಸ್ಥಿಕ ಸಂಸ್ಥೆಗಳನ್ನು ನಾಶಗೊಳಿಸುವ ಮೂಲಕ ಸಂವಿಧಾನದ ಮೇಲೆ ಬುಲ್ಡೋಜರ್‌ನ್ನು ಓಡಿಸಿದೆ ಎಂದರು.
ಬಿಜೆಪಿಯು ದೇಶದ ಸಾಂವಿಧಾನಿಕ ಬುನಾದಿಯನ್ನು ಹಾಳುಗೆಡವುತ್ತಿದೆ ಎಂದು ಆರೋಪಿಸಿದ ಕಾರಾಟ್,ಅದು ಅನಾಮಿಕ ಚುನಾವಣಾ ಬಾಂಡ್‌ಗಳ ಮೂಲಕ ಕೋಟ್ಯಂತರ ರೂಪಾಯಿಗಳನ್ನು ಸಂಗ್ರಹಿಸುತ್ತಿದೆ. ಬೃಹತ್ ಕೈಗಾರಿಕಾ ಸಂಸ್ಥೆಗಳು ಭಾರೀ ಹಣವನ್ನು ಚುನಾವಣಾ ಬಾಂಡ್‌ಗಳಲ್ಲಿ ವಿನಿಯೋಗಿಸುತ್ತಿವೆ ಮತ್ತು ಈ ಹಣವನ್ನು ಚುನಾವಣಾ ಉದ್ದೇಶಕ್ಕಾಗಿ ಬಳಸಲಾಗುತ್ತಿದೆ ಎಂದರು.