ಪ್ರಧಾನಿ ಮೋದಿ ಎಂಎ ಪದವಿಗೆ ಸಂಬಂಧಿತ ಪ್ರಕರಣ: ತೀರ್ಪು ಕಾಯ್ದಿರಿಸಿದ ಗುಜರಾತ್ ಹೈಕೋರ್ಟ್
ಅಹ್ಮದಾಬಾದ್,ಫೆ.9: ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್(Arvind Kejriwal) ಅವರಿಗೆ ಪ್ರಧಾನಿ ನರೇಂದ್ರ ಮೋದಿ(Narendra Modi)ಯವರ ಎಂಎ(M.A) ಪದವಿಯ ಕುರಿತು ಮಾಹಿತಿಗಳನ್ನು ಒದಗಿಸುವಂತೆ ಕೇಂದ್ರೀಯ ಮಾಹಿತಿ ಆಯೋಗ (CIC)ದ ಆದೇಶದ ವಿರುದ್ಧ ಗುಜರಾತ ವಿವಿಯು ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದ ಪ್ರಕರಣದಲ್ಲಿ ತನ್ನ ತೀರ್ಪನ್ನು ಗುರುವಾರ ಗುಜರಾತ ಉಚ್ಚ ನ್ಯಾಯಾಲಯವು ಕಾಯ್ದಿರಿಸಿದೆ.
ನರೇಂದ್ರ ಮೋದಿಯವರ ವಿದ್ಯಾರ್ಹತೆಗಳ ವಿವರಗಳನ್ನು ಬಹಿರಂಗಗೊಳಿಸುವಂತೆ ಕೋರಿ ಕೇಜ್ರಿವಾಲ್ ಸಿಐಸಿಗೆ ಪತ್ರವನ್ನು ಬರೆದಿದ್ದರು. ಈ ವಿಷಯದಲ್ಲಿ ಯಾವುದೇ ಗೊಂದಲವನ್ನು ನಿವಾರಿಸಲು ಮೋದಿಯವರು ಪದವಿ ಗಳಿಸಿರುವುದನ್ನು ಸಾರ್ವಜನಿಕರ ಗಮನಕ್ಕೆ ತರುವುದು ಅಗತ್ಯವಾಗಿದೆ ಎಂದು ಕೇಜ್ರಿವಾಲ್ ಪತ್ರದಲ್ಲಿ ಬರೆದಿದ್ದರು.
ಪ್ರಕರಣದಲ್ಲಿ ಸಾಲಿಸಿಟರ್ ಜನರಲ್ ತುಷಾರ ಮೆಹ್ತಾ ಮತ್ತು ಕೇಜ್ರಿವಾಲ್ ಪರ ಹಿರಿಯ ನ್ಯಾಯವಾದಿ ಪರ್ಸಿ ಕವಿನಾ ಅವರ ವಾದಗಳನ್ನು ಆಲಿಸಿದ ಬಳಿಕ ಗುಜರಾತ ಉಚ್ಚ ನ್ಯಾಯಾಲಯವು ತನ್ನ ಆದೇಶವನ್ನು ಕಾಯ್ದಿರಿಸಿತು.
ಮೋದಿ ಅವರ ಪದವಿಯು ಸಾರ್ವಜನಿಕ ಡೊಮೇನ್‌ನಲ್ಲಿದೆ, ಆದರೆ ಯಾವುದೇ ಮೂರನೇ ವ್ಯಕ್ತಿಗೆ ಪದವಿಯನ್ನು ಬಹಿರಂಗಗೊಳಿಸಲು ಆರ್‌ಟಿಐ ಕಾಯ್ದೆಯಡಿ ಯಾವುದೇ ಬಾಧ್ಯತೆಯಿಲ್ಲ ಎಂದು ನ್ಯಾಯಾಲಯಕ್ಕೆ ತಿಳಿಸಿದ ಮೆಹ್ತಾ, ವಿಶೇಷವಾಗಿ ವಿಷಯದಲ್ಲಿ ಸಾರ್ವಜನಿಕ ಆಸಕ್ತಿ ಇಲ್ಲದಿದ್ದಾಗ ಪದವಿಗಳನ್ನು ಬಹಿರಂಗಗೊಳಿಸುವಂತೆ ವಿವಿಗಳ ಮೇಲೆ ಒತ್ತಡ ಹೇರುವಂತಿಲ್ಲ ಎಂದು ವಾದಿಸಿದರು. ಅಲ್ಲದೆ,ಆರ್‌ಟಿಐ ಕಾಯ್ದೆಯಡಿ ಖಾಸಗಿ ಸ್ವರೂಪದ ಮಾಹಿತಿಯು ಯಾವುದಾದರೂ ರೀತಿಯಲ್ಲಿ ಸಾರ್ವಜನಿಕ ಚಟುವಟಿಕೆಗೆ ಸಂಬಂಧಿಸಿದ್ದರೆ ಮಾತ್ರ ಅದನ್ನು ಬಹಿರಂಗಗೊಳಿಸಬಹುದು ಎಂದೂ ಅವರು ಪ್ರತಿಪಾದಿಸಿದರು.
ಈ ನಡುವೆ ಕವಿನಾ ಅವರು,ನಿರ್ದೇಶನವನ್ನು ಪ್ರಧಾನಿ ಕಚೇರಿಯ ಸಾರ್ವಜನಿಕ ಮಾಹಿತಿ ಅಧಿಕಾರಿಗೆ ಹೊರಡಿಸಲಾಗಿತ್ತು ಮತ್ತು ಅವರು ನಿರ್ದೇಶವನ್ನು ಪ್ರಶ್ನಿಸಿರಲಿಲ್ಲ. ಹೀಗಿರುವಾಗ ಗುಜರಾತ್ ವಿವಿಯು ನ್ಯಾಯಾಲಯದ ಮೆಟ್ಟಿಲನ್ನೇರಿದ್ದೇಕೆ ಎಂದು ಪ್ರಶ್ನಿಸಿದರು.
ಚುನಾಯಿತ ಅಭ್ಯರ್ಥಿಯ ಶೈಕ್ಷಣಿಕ ಅರ್ಹತೆಗಳನ್ನು ಬಹಿರಂಗಗೊಳಿಸುವುದು ಕಾನೂನಿನಡಿ ಕಡ್ಡಾಯವಾಗಿದೆ ಎಂದೂ ಕವಿನಾ ಹೇಳಿದರು.