ಭಾರತ್ ಜೋಡೋ ಒಂದು ಯಾತ್ರೆಯಲ್ಲ, ಸುಂದರ ಅನುಭವ

Update: 2023-02-09 18:31 GMT

ಕನ್ಯಾಕುಮಾರಿಯಿಂದ ಕಾಶ್ಮೀರದವೆರೆಗೆ ಒಂದು ಪಾದಯಾತ್ರೆ ಅಂದರೆ ಯಾರಿಗಾದರೂ ಊಹಿಸಲು ಸಾಧ್ಯವೇ? ಕಾಂಗ್ರೆಸ್ ನಾಯಕ ರಾಹುಲ್ ಅವರ ನೇತೃತ್ವದಲ್ಲಿ ಸುಮಾರು 4000 ಕಿ.ಮಿ. ದೂರ ನಡೆದು ಸಾಗಿದ್ದು ಭಾರತದಲ್ಲಿ ಒಂದು ದೊಡ್ಡ ಇತಿಹಾಸವಾದರೆ ಅದರಲ್ಲಿ ಒಬ್ಬ ಯಾತ್ರಿಯಾಗಿ ಭಾಗವಹಿಸಿದ ನನಗೆ ಅದು ಕಟ್ಟಿಕೊಟ್ಟದ್ದು ಮಾತ್ರ ಎಂದಿಗೂ ಮರೆಯಲಾಗದ ಒಂದು ಸುಂದರ ಅನುಭವ. ಸುಮಾರು ನೂರೈವತ್ತು ದಿನಗಳ ಪಾದಯಾತ್ರೆಯಲ್ಲಿ ಹೃದಯ ಸೆರೆಹಿಡಿದ ಅಮೂಲ್ಯ ಕ್ಷಣಗಳಲ್ಲಿ ಒಂದಷ್ಟು ಬಿಚ್ಚಿಡಲೇಬೇಕೆನ್ನುವ ತುಡಿತ. 

ಸೆಪ್ಟಂಬರ್ ಐದಕ್ಕೆ ಕನ್ಯಾಕುಮಾರಿ ತಲುಪಿ ಏಳರಂದು ತಮಿಳುನಾಡಿನ ಕನ್ಯಾಕುಮಾರಿಯಲ್ಲಿ ಉದ್ಘಾಟನೆಗೊಂಡ ಭಾರತ್ ಜೋಡೋ ಯಾತ್ರೆ ಕೇರಳ, ಕರ್ನಾಟಕ, ಆಂಧ್ರ, ತೆಲಂಗಾಣ, ಮಹಾರಾಷ್ಟ್ರ, ಮದ್ಯ ಪ್ರದೇಶ, ರಾಜಸ್ಥಾನ, ದೆಹಲಿ, ಹರಿಯಾಣ, ಪಂಜಾಬ್, ಹಿಮಾಚಲ ಪ್ರದೇಶ, ಉತ್ತರ ಪ್ರದೇಶ, ನಂತರ ಜಮ್ಮು ಕಾಶ್ಮೀರ ಹೀಗೆ ಒಂದೊಂದು ರಾಜ್ಯದಲ್ಲೂ ನೂರಾರು  ವಿಶೇಷತೆಗಳ ಸುಂದರ ಅನುಭವಗಳನ್ನು ನೀಡುತ್ತಾ ಸಾಗಿದಾಗ ಮಳೆಯಾಗಲಿ ಚಳಿಯಾಗಲಿ ಸುಡು ಬಿಸಿಲಾಗಲಿ ಯಾವುದನ್ನೂ ಲೆಕ್ಕಿಸದ ರಾಹುಲ್ ಗಾಂಧಿ ಅವರ ಹುರುಪು ನಮಗೆಲ್ಲ ಮಾದರಿಯಂತಿತ್ತು.

ಕನ್ಯಾಕುಮಾರಿಯಿಂದ ಯಾತ್ರೆ ಶುರುವಾಗುವಾಗ ಸುಮಾರು ನಲ್ವತ್ತು ಡಿಗ್ರಿಯ ಸುಡು ಬಿಸಿಲಿನ ವಾತಾವರಣವಿತ್ತು. ನಂತರ ಕೇರಳಕ್ಕೆ ದಾಪುಗಾಲಿಟ್ಟ ಮೊದಲ ದಿನವೇ ವಿಪರೀತ ಮಳೆ ನಮ್ಮನ್ನು ಸ್ವಾಗತಿಸಿತ್ತು. ಅಲ್ಲಿ ಅಸಂಖ್ಯಾತ ಭಾರತ್ ಯಾತ್ರಿಗಳು ಅದೇ ಮಳೆಯಲ್ಲಿ ನೆನೆಯುತ್ತಾ ಹೆಜ್ಜೆ ಹಾಕುವುದನ್ನು ನೋಡುವುದೇ ಒಂದು ಅಚ್ಚರಿಯಾಗಿತ್ತು. ಕರ್ನಾಟಕ್ಕೆ ಹೆಜ್ಜೆಯಿಟ್ಟ ಮರುದಿನ ಬಹಳ ಬಿರುಸಾದ ಮಳೆಗೆ ರಾಹುಲ್ ಅವರ ಹುರುಪಿನ ಭಾಷಣದ ದೇಶದಾದ್ಯಂತ ವೈರಲ್ ಆಗಿಬಿಟ್ಟಿತ್ತು. ನಂತರ ರಾಯಚೂರಿನ ಬಿಸಿಲಿನ ಝಳ, ದಿನಗಳ ಬಳಿಕ ಮದ್ಯ ಪ್ರದೇಶ  ತಲುಪುತ್ತಲೇ ವಿಪರೀತ ಚಳಿ ನಮ್ಮೊಂದಿಗಿತ್ತು. ಮಹಾರಾಷ್ಟ್ರದಲ್ಲಿ ಮತ್ತಷ್ಟು ಹೆಚ್ಚಿದ ಚಳಿ ರಾಜಸ್ಥಾನದಲ್ಲಿ ವಿಪರೀತ ಮಟ್ಟ ತಲುಪಿತ್ತು. ನಂತರ ನಮಗೆ ಸಿಕ್ಕಿದ್ದು ದಟ್ಟ ಹಿಮದ ಸವಾಲು. ಎಲ್ಲೆಂದರಲ್ಲಿ ಬೀಳುವ ಹಿಮದ ಅಟ್ಟಹಾಸ ಭಾರತ್ ಯಾತ್ರೆಗೆ ಬಹಳ ದೊಡ್ಡ ಸವಾಲಾಗಿತ್ತು. ಆದರೆ ಎಲ್ಲವನ್ನೂ ಪ್ರಕೃತಿಯ ಕೊಡುಗೆಯಂತೆ ಭಾವಿಸಿದ ಸಂತನಂತಿರುವ ರಾಹುಲ್ ಅವರ ಅತ್ಯುತ್ಸಾಹದ ಸೆಳೆತ ನಮ್ಮನ್ನು ಗುರಿಯಿಂದ ಕದಲದಂತೆ ಮಾಡಿ ಬಿಟ್ಟಿತ್ತು. ಕೊನೆಯಲ್ಲಿ ಸಿಕ್ಕ ಹಿಮ ಮಳೆಯ ಅನುಭವ ಒಂದು ರೋಚಕ ಸನ್ನಿವೇಶ.

ನಾನು ರಾಹುಲ್ ಅವರ ಸುರಕ್ಷತಾ ತಂಡದಲ್ಲಿದ್ದ ನನಗೆ ರಾಜಸ್ಥಾನ ತಲುಪುವ ಹೊತ್ತು ಬಿದ್ದು ಕೈ ಬೆರಳು ಮುರಿದು ಹೋಯಿತು. ಪರಿಣಾಮ ಹತ್ತು ದಿನಗಳ ಕಾಲ ವಿಶ್ರಾಂತಿಯಲ್ಲಿರಬೇಕಾಯಿತು. ನಂತರ ಭಾರತ್ ಜೋಡೋ ವನ್ನು ಕೂಡಿಕೊಂಡ ನನಗೆ ಈ ಭಾರತ್ ಜೋಡೋ ಯಾತ್ರೆಯ ನಿಜವಾದ ಉದ್ದೇಶ ಅರ್ಥವಾಯಿತು. ಯಾತ್ರೆಯ ಯಾವುದೇ ಸ್ಥರದಲ್ಲೂ ಬರೀ ಪ್ರೀತಿಯ ಹೊರತು ಎಲ್ಲೂ ದ್ವೇಷದ ಹನಿಯೂ ಕಾಣ ಸಿಗಲಿಲ್ಲ. ಭಾರತದ ಪ್ರತಿ ಊರು ಕೇರಿ ಕಣ ಕಣದಲ್ಲಿ ಬಂದುತ್ವ ಶಾಂತಿ ಸಹಭಾಳ್ವೆ ಇಂದಿಗೂ ಜೀವಂತವಾಗಿದೆ ಅನ್ನುವುದು ಸ್ಪಷ್ಟವಾಯಿತು.

ಕೋಮುವಾದದ ಅಟ್ಟಹಾಸಕ್ಕೆ ಬಂಧುತ್ವ ಬಹುತ್ವ ದೇಶದ ಶಾಂತಿ ಸಮಾನತೆ ಬಲಿಯಾಗುತ್ತಿರುವ ಈ ದುರಿತ ಕಾಲದಲ್ಲಿ ಮಾದ್ಯಮಗಳು, ಜಾಲತಾಣಗಳು, ತೋರಿಸುವ ಹಾಗೆ ನಮ್ಮ ದೇಶ ಈಗಲೂ ಇಲ್ಲ ಅನ್ನುವುದು ಮನದಟ್ಟಾಯಿತು. ಕಾಶ್ಮೀರದ ವಿಚಾರ ಹೇಳುವುದಾದರೆ ಈ ಮಣ್ಣಿನ ಸ್ವರ್ಗದಂತಿರುವ ಬಹಳ ಒಳ್ಳೆಯ ವ್ಯಕ್ತಿತ್ವಗಳಿರುವ ಕಾಶ್ಮೀರ ಎನ್ನುವ ಸ್ವರ್ಗ  ಜಾತಿ ಮತದ ಭೇದವಿಲ್ಲದೆ ಬಹಳ ಒಗ್ಗಟ್ಟಿನಿಂದ ಬದುಕುತ್ತಿರುವುದು ತಿಳಿದು ಮನಸ್ಸು ತುಂಬಿತು. ಯಾತ್ರೆಯುದ್ದಕ್ಕೂ ರಾಹುಲ್ ಅವರು ಮಕ್ಕಳಿಂದ ಹಿಡಿದು ಹಿರಿಯರ ತನಕ ಎಲ್ಲರನ್ನೂ ಬಹಳ ಪ್ರೀತಿಯಿಂದ ಭಾರತೀಯರನ್ನು ಭರಸೆಳೆದು ತಬ್ಬಿಕೊಂಡು ಸಾಗಿದ್ದು ನಿಜಕ್ಕೂ ರಾಹುಲ್ ಅವರ ಮಾನವ ಪ್ರೇಮವನ್ನು ಸಾಬೀತುಮಾಡಿದೆ. ಯಾವುದೇ ನಾಟಕೀಯತೆಯಿಲ್ಲದೆ ರಾಹುಲ್ ಅವರ ಮೇರು ವ್ಯಕ್ತಿತ್ವ ನನಗೆ ಬಹಳ ಆಪ್ತವಾಗಿ ಕಂಡಿತು. ರಾಹುಲ್ ಅವರನ್ನು ಬಹಳ ಹತ್ತಿರದಿಂದ ನೋಡಿ ಗಮನಿಸುವ ಸಂಭ್ರಮ ಸುಮಾರು ತೊಂಬತ್ತು ದಿನಗಳು ನನ್ನದಾಗಿತ್ತು. ನನ್ನನ್ನು ಪಿ.ಕೆ. ಅನ್ನುತ್ತಾ ಸಂಭೋದಿಸುತ್ತಿರುವ ರಾಹುಲ್ ಅವರ ನಿಸ್ವಾರ್ಥ ನಡೆ ನನ್ನಲ್ಲೂ ಕೂಡ ಬಹಳಷ್ಟು ಬದಲಾವಣೆಗಳನ್ನು ತಂದಿದೆ. 

ಬೇರೆ ಬೇರೆ ರಾಜ್ಯಗಳಲ್ಲಿ ಆಯಾಯ ಊರಿನ ಸಂಸ್ಕೃತಿ ವೈಭವ ಆಹಾರ ಪದ್ದತಿ ಭಾಷಾ ವಿಭಿನ್ನತೆ ನನ್ನನ್ನು ಬಹಳವೇ ಸೆಳೆಯಿತು.  ಭಾರತವೊಂದು ಭ್ರಹ್ಮಾಂಡವೆಂದ ಕವಿ ವಾಣಿಯ ನಿಜ ಪ್ರಸ್ತುತಿಯಂತಿತ್ತು ಈ ಭಾರತ್ ಜೋಡೋ ಯಾತ್ರೆ ಎನ್ನುವುದಲ್ಲಿ ಎರಡು ಮಾತಿಲ್ಲ!

Similar News