ಇನ್ನು ಮುಂದೆ ರೈತರ ವಿರುದ್ಧ ಮಾತನಾಡಿದರೆ ಕಪ್ಪುಬಾವುಟ ಪ್ರದರ್ಶನ: ಸಂಸದ ತೇಜಸ್ವಿ ಸೂರ್ಯಗೆ ರೈತ ಸಂಘಟನೆಗಳ ಎಚ್ಚರಿಕೆ
ಮಂಗಳೂರು: ಸಂಸದ ಹಾಗೂ ಬಿಜೆಪಿ ರಾಷ್ಟ್ರೀಯ ಯುವ ಮೋರ್ಚಾದ ಅಧ್ಯಕ್ಷ ತೇಜಸ್ವಿ ಸೂರ್ಯ ಇನ್ನು ಮುಂದೆ ರೈತರ ವಿರುದ್ಧವಾಗಿ ಮಾತನಾಡಿದರೆ ಅವರು ಜಿಲ್ಲೆಗೆ ಬಂದಾಗ ಕಪ್ಪುಬಾವುಟವನ್ನು ಪ್ರದರ್ಶಿಸಲಾಗುವುದು ಎಂದು ರಾಜ್ಯ ರೈತ ಸಂಘದ ಪ್ರಧಾನ ಕಾರ್ಯದರ್ಶಿ ರವಿಕಿರಣ್ ಪುಣಚ ಎಚ್ಚರಿಕೆ ನೀಡಿದ್ದಾರೆ.
ಶುಕ್ರವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ರೈತರ ಸಾಲ ಮನ್ನಾ ಮಾಡಿದರೆ ದೇಶಕ್ಕೆ ನಷ್ಟ ಎಂದು ಸೂರ್ಯ ಇತ್ತೀಚೆಗೆ ಮಂಗಳೂರಿಗೆ ಬಂದಾಗ ನೀಡಿರುವ ಹೇಳಿಕೆಯನ್ನು ಖಂಡಿಸಿದರಲ್ಲದೆ ತೇಜಸ್ವಿಯ ಈ ಹೇಳಿಕೆಯು ಬಾಲಿಷತನದಿಂದ ಕೂಡಿದೆ. ಅವರಿಗೆ ರಾಜಕೀಯದಲ್ಲಿ ಉತ್ತಮ ಭವಿಷ್ಯವಿರುವುದಾಗಿ ಭಾವಿಸಲಾಗಿತ್ತು. ಆದರೆ ಅವರು ನೀಡಿರುವ ಹೇಳಿಕೆಯನ್ನು ಗಮನಿಸಿದಾಗ ಅವರು ಸಣ್ಣ ಮನಸ್ಸಿನ ಮನುಷ್ಯ ಎಂಬುದು ಸಾಬೀತಾಗಿದೆ ಎಂದರು.
ಭಾರತವು ಕೃಷಿ ಪ್ರಧಾನ ದೇಶವಾಗಿದೆ. ಶೇ.67ರಷ್ಟು ಮಂದಿ ಕೃಷಿಯನ್ನು ನಂಬಿ ಜೀವನ ಸಾಗಿಸುತ್ತಿದ್ದಾರೆ. ದೇಶದ ತೆರಿಗೆಗೆ ಶೇ.55ರಷ್ಟು ಕೃಷಿಯಿಂದಲೇ ಬರುತ್ತದೆ. ಇದು ಚೀನಾ, ಜಪಾನ್ ಅಲ್ಲ. ಭಾರತ ಎಂಬುದನ್ನು ತೇಜಸ್ವಿ ಸೂರ್ಯ ಮರೆತಂತಿದೆ. ದೇಶದ ತೆರಿಗೆಯ ವಿಚಾರದ ಬಗ್ಗೆಗಿನ ಮಾಹಿತಿಯು ಸಂಸತ್ತಿನಲ್ಲೇ ಇರುವ ಸಾವಿರಗಟ್ಟಲೆ ಪುಸ್ತಕದಲ್ಲಿದೆ. ಅದನ್ನು ಓದಿದ ಬಳಿಕ ರೈತರ ಬಗ್ಗೆ ಮಾತನಾಡಿ ಎಂದು ರವಿಕಿರಣ್ ಪುಣಚ ಹೇಳಿದರು.
ಫೆ.16: ಬೆಂಗಳೂರು ಚಲೋ: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಫೆ.16ರಂದು ಬೆಂಗಳೂರು ಚಲೋ ಕಾರ್ಯಕ್ರಮ ನಡೆಯಲಿದೆ. ದ.ಕ.ಜಿಲ್ಲೆಯಿಂದ ಸುಮಾರು 500 ರೈತರು ಇದರಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಪ್ರಾಂತ ರೈತ ಸಂಘದ ಮುಖಂಡ ಯಾದವ ಶೆಟ್ಟಿ ಹೇಳಿದರು.
ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರದ ರೈತ ವಿರೋಧಿ ಕಾನೂನಿನ ವಿರುದ್ಧ ರೈತರು ನಡೆಸಿದ ಪ್ರತಿಭಟನೆಯಲ್ಲಿ 715 ಮಂದಿ ಪ್ರಾಣ ಕಳಕೊಂಡಿದ್ದಾರೆ. ಈ ಕಾಯ್ದೆಯಿಂದ ರೈತರ ಆದಾಯ ದುಪ್ಪಟ್ಟು ಆಗಲಿಲ್ಲ. ಬದಲಾಗಿ ಬಂಡವಾಳಶಾಹಿಗಳ ಹಿತ ಕಾಪಾಡಲಾಗಿದೆ. ದೇಶದ ಬೆನ್ನೆಲುಬಾಗಿದ್ದ ರೈತರನ್ನು ಹತ್ತಿಕ್ಕಲು ಗೋಹತ್ಯೆ ಸಹಿತ ಕರಾಳ ಮಸೂದೆಗಳನ್ನು ಜಾರಿಗೊಳಿಸಲಾಗಿದೆ. ಇದರ ವಿರುದ್ಧ ಸಂಘಟಿತ ಹೋರಾಟ ಮಾಡಲಾಗುವುದು ಎಂದು ಯಾದವ ಶೆಟ್ಟಿ ಎಚ್ಚರಿಸಿದರು.
ಸುದ್ದಿಗೋಷ್ಠಿಯಲ್ಲಿ ರೈತ ಸಂಘಟನೆಗಳ ಮುಖಂಡರಾದ ದೇವದಾಸ್ ಬಜ್ಪೆ, ರಾಮಣ್ಣ ವಿಟ್ಲ, ಆದಿತ್ಯ ನಾರಾಯಣ ಪೊಲ್ಲಾಜೆ, ಸುರೇಂದ್ರ ಕೋರ್ಯ ಉಪಸ್ಥಿತರಿದ್ದರು.