×
Ad

ಹೂಡಿಕೆದಾರರ ರಕ್ಷಣೆಗೆ ಪರಿಣತರ ಸಮಿತಿ ರಚಿಸಲು ಸುಪ್ರೀಂಕೋರ್ಟ್ ಸಲಹೆ

Update: 2023-02-10 22:30 IST

ಹೊಸದಿಲ್ಲಿ, ಫೆ. 10: ಅದಾನಿ ಗುಂಪು ವಂಚನೆಯಲ್ಲಿ ತೊಡಗಿದೆ ಎಂಬ ಆರೋಪಗಳ ಪರಿಣಾಮಗಳನ್ನು ಅಂದಾಜಿಸಲು ಓರ್ವ ನ್ಯಾಯಾಧೀಶ ಸೇರಿದಂತೆ ಪರಿಣತರ ಸಮಿತಿಯೊಂದನ್ನು ರಚಿಸುವ ಸಲಹೆಯನ್ನು ಶುಕ್ರವಾರ ಸುಪ್ರೀಂಕೋರ್ಟ್(Supreme Court) ನೀಡಿದೆ.

ಅಮೆರಿಕದ ಹಿಂಡನ್‌ಬರ್ಗ್‌ರಿಸಚ್ ವರದಿಯ ಪರಿಣಾಮವಾಗಿ ಅದಾನಿ(Adani) ಕಂಪೆನಿಗಳಲ್ಲಿ ಹೂಡಿಕೆ ಮಾಡಿರುವವರು ಕೋಟ್ಯಾಂತರ ರೂಪಾಯಿಗಳನ್ನು ಕಳೆದುಕೊಂಡಿದ್ದಾರೆ.

ಈ ವಿಷಯದಲ್ಲಿ ಸುಪ್ರೀಂಕೋರ್ಟ್ ಮಧ್ಯಪ್ರವೇಶಿಸಬೇಕು ಎಂದು ಕೋರಿ ಸಲ್ಲಿಸಲಾಗಿರುವ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಾಧೀಶ ಡಿ.ವೈ. ಚಂದ್ರಚೂಡ್(D.Y. Chandrachud), ನಾವು ಮಧ್ಯಪ್ರವೇಶಿಸಿ ಇಂಥ ಬಿಕ್ಕಟ್ಟು ಪುನರಾವರ್ತನೆಯಾಗದಂತೆ ಖಾತರಿಪಡಿಸುವ ವ್ಯವಸ್ಥೆಯೊಂದನ್ನು ರೂಪಿಸಬೇಕೇ? ನಾವು ನೀತಿ ವಿಷಯಗಳಲ್ಲಿ ಮಧ್ಯಪ್ರವೇಶಿಸಲು ಬಯಸುವುದಿಲ್ಲ. ಇದನ್ನು ಸರಕಾರ ನಿರ್ಧರಿಸಬೇಕಾಗಿದೆ ಎಂದು ಹೇಳಿದರು.

ಸರಕಾರ ಬಯಸುವುದಾದರೆ, ಸಮಗ್ರ ಪರಿಸ್ಥಿತಿಯ ಬಗ್ಗೆ ಅವಲೋಕನ ನಡೆಸಲು ಪರಿಣತ ಸಮಿತಿಯೊಂದನ್ನು ರಚಿಸುವ ಸಲಹೆಯನ್ನು ನಾವು ನೀಡಿದ್ದೇವೆ. ಈ ಸಮಿತಿಯಲ್ಲಿ ಓರ್ವ ನ್ಯಾಯಾಧೀಶ ಮತ್ತು ವಿಷಯ ತಜ್ಞರನ್ನು ಸೇರಿಸಿಕೊಳ್ಳಬಹುದಾಗಿದೆ ಎಂದು ಮುಖ್ಯ ನ್ಯಾಯಾಧೀಶರು ಹೇಳಿದರು.

ನಿಗಾ ಇಡಲು ಬೇಕಾದ ಎಲ್ಲವನ್ನೂ ಸೆಬಿ (ಭಾರತೀಯ ಶೇರುಗಳು ಮತ್ತು ವಿನಿಮಯ ಮಂಡಳಿ) ಮಾಡುತ್ತಿದೆ ಎಂದು ಸಾಲಿಸಿಟರ್ ಜನರಲ್ ಹೇಳುತ್ತಾರೆ. ನಾವು ಯಾವುದೇ ನಿಯಂತ್ರಣ ವ್ಯವಸ್ಥೆಯ ಮೇಲೆ ಆರೋಪ ಮಾಡುತ್ತಿಲ್ಲ. ಈ ವಿಷಯದಲ್ಲಿ ನಾವು ಮಾತುಕತೆ ನಡೆಸುತ್ತಿದ್ದೇವೆ ಎಂದು ನ್ಯಾ. ಚಂದ್ರಚೂಡ್ ಹೇಳಿದರು.

ಸೆಬಿ, ಹಣಕಾಸು ಮತ್ತು ಇತರ ಸಚಿವಾಲಯಗಳೊಂದಿಗೆ ಸಮಾಲೋಚನೆ ನಡೆಸಿದ ಬಳಿಕ ಪ್ರಸ್ತಾವದೊಂದಿಗೆ ನಾನು ಸೋಮವಾರ ಮರಳುತ್ತೇನೆ ಎಂದು ಸಾಲಿಸಿಟರ್ ಜನರಲ್‌ ತುಷಾರ್ ಮೆಹ್ತಾ ಹೇಳಿದರು.

Similar News