ಕಳೆದ ಮೂರು ವರ್ಷಗಳಲ್ಲಿ ಅಲ್ಪಸಂಖ್ಯಾತರಿಂದ ಸ್ವೀಕರಿಸುವ ದೂರುಗಳ ಸಂಖ್ಯೆಯಲ್ಲಿ ಹೆಚ್ಚಳ

ಉ.ಪ್ರ., ದಿಲ್ಲಿಯಲ್ಲಿ ಗರಿಷ್ಠ ರಾಷ್ಟ್ರೀಯ ಅಲ್ಪಸಂಖ್ಯಾತ ಆಯೋಗದ ದತ್ತಾಂಶ ಬಹಿರಂಗ

Update: 2023-02-10 17:16 GMT

ಹೊಸದಿಲ್ಲಿ,ಫೆ.10: ರಾಷ್ಟ್ರೀಯ ಅಲ್ಪಸಂಖ್ಯಾತ ಆಯೋಗಕ್ಕೆ ಸತತ ಆರು ವರ್ಷಗಳಿಂದ ಉತ್ತರಪ್ರದೇಶ ಹಾಗೂ ದಿಲ್ಲಿಯಲ್ಲಿನ ಮುಸ್ಲಿಂ ಸಮುದಾಯದ ಸದಸ್ಯರಿಂದ ಅತ್ಯಧಿಕ ದೂರುಗಳು ಬರುತ್ತಿವೆ ಎಂದು ಕೇಂದ್ರ ಸರಕಾರ(Central Govt)ದ ದತ್ತಾಂಶಗಳಿಂದ ತಿಳಿದುಬಂದಿದೆ.

ದೇಶದ ಎಲ್ಲಾ ಅಲ್ಪಸಂಖ್ಯಾತ ಸಮುದಾಯಗಳನ್ನು ಒಟ್ಟುಗೂಡಿಸಿದರೂ ಈ ಎರಡು ರಾಜ್ಯಗಳಿಂದ ಗರಿಷ್ಠ ಸಂಖ್ಯೆಯ ಅಹವಾಲುಗಳು ಬಂದಿವೆ ಎಂದು ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯವು ಶುಕ್ರವಾರ ಲೋಕಸಭೆ(Lok Sabha)ಯಲ್ಲಿ ಪ್ರಶ್ನೆಯೊಂದಕ್ಕೆ ನೀಡಿದ ಉತ್ತರದಲ್ಲಿ ತಿಳಿಸಿದೆ.

ಕಳೆದ ಐದು ವರ್ಷಗಳ ಅಲ್ಪಸಂಖ್ಯಾತ ಆಯೋಗವು ವಿವಿಧ ರಾಜ್ಯಗಳಿಂದ ಧರ್ಮದ ಆಧಾರದಲ್ಲಿ ಸ್ವೀಕರಿಸಿದ ಒಟ್ಟು ದೂರುಗಳ ಬಗ್ಗೆ ವಿಡುದಲೈ ಚಿರುತಗಳ್ ಕಚ್ಚಿ ಪಕ್ಷದ ಸಂಸದ ಡಿ. ರವಿಕುಮಾರ್(D. Ravikumar) ಅವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಂದರ್ಭ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವೆ ಸ್ಮತಿ ಇರಾನಿ(Smriti Irani) ಅವರು ಈ ಅಂಕಿಂಶಗಳನ್ನು ಒದಗಿಸಿದರು.

ಕೇಂದ್ರ ಅಲ್ಪಸಂಖ್ಯಾತ ಆಯೋಗವು 2017-18ರಲ್ಲಿ ಒಟ್ಟು 1498 ದೂರುಗಳನ್ನು ಸ್ವೀಕರಿಸಿತ್ತು. 2018-19ರಲ್ಲಿ 1871, 2019-20ರಲ್ಲಿ 1670, 2020-21ರಲ್ಲಿ 1463, 2021-22ರಲ್ಲಿ 2076 ಹಾಗೂ 2022-23ನೇ ಸಾಲಿನ ಮೊದಲ 10 ತಿಂಗಳುಗಳಲ್ಲಿ 1984 ದೂರುಗಳು ಅದಕ್ಕೆ ಬಂದಿದ್ದವು.

ಕಳೆದ ಎರಡು ವಿತ್ತೀಯ ವರ್ಷಗಳಲ್ಲಿ ಅಲ್ಪಸಂಖ್ಯಾತ ಸಮುದಾಯಗಳಿಂದ ಆಯೋಗವು ಸ್ವೀಕರಿಸುತ್ತಿರುವ ದೂರುಗಳ ಸಂಖ್ಯೆಯಲ್ಲಿ ಏರಿಕೆಯಾಗುವುದನ್ನು ಈ ದತ್ತಾಂಶಗಳು ತೋರಿಸಿವೆ.

ಕಳೆದ ಮೂರು ವರ್ಷಗಳಲ್ಲಿ ಹೆಚ್ಚಿನ ದೂರುಗಳು ಉತ್ತರಪ್ರದೇಶ ಹಾಗೂ ದಿಲ್ಲಿಯಿಂದ ಬಂದಿದ್ದವು. ಕಳೆದ ಎರಡು ವರ್ಷಗಳಲ್ಲಿ ಮಹಾರಾಷ್ಟ್ರದಿಂದಲೂ ಬರುತ್ತಿರುವ ದೂರುಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ ಎಂದರು.

2020-21ರ ಸಾಲಿನಲ್ಲಿ ಅಲ್ಪಸಂಖ್ಯಾತ ಆಯೋಗಕ್ಕೆ ದೇಶಾದ್ಯಂತದಿಂದ 732 ದೂರುಗಳು ಬಂದಿದ್ದವು. ಅವುಗಳಲ್ಲಿ ಅರ್ಧಾಂಶದಷ್ಟು ದೂರುಗಳು ಉತ್ತರಪ್ರದೇಶದಿಂದಲೇ ಸಲ್ಲಿಕೆಯಾಗಿವೆ.ದಿಲ್ಲಿಯಿಂದ 106 ಹಾಗೂ ಮಹಾರಾಷ್ಟ್ರದಿಂದ 60 ದೂರುಗಳು ಸಲ್ಲಿಸಲ್ಪಟ್ಟಿವೆ.

2021-22ರಲ್ಲಿ ಉತ್ತರಪ್ರದೇಶದಿಂದ 745, ದಿಲ್ಲಿಯಿಂದ 227 ಹಾಗೂ ಮಹಾರಾಷ್ಟ್ರದಿಂದ 140 ದೂರುಗಳು ಬಂದಿವೆ. ಪ್ರಸಕ್ತ ಹಣಕಾಸು ವರ್ಷ(2022-23)ದ ಮೊದಲ 10 ತಿಂಗಳುಗಳಲ್ಲಿ ಉತ್ತರಪ್ರದೇಶದಿಂದ 780, ದಿಲ್ಲಿಯಿಂದ 204 ಹಾಗೂ ಮಹಾರಾಷ್ಟ್ರದಿಂದ 119 ದೂರುಗಳು ಬಂದಿರುವುದಾಗಿ ಸದನಕ್ಕೆ ತಿಳಿಸಲಾಯಿತು.

ಮುಸ್ಲಿಂ ಸಮುದಾಯದಿಂದ 2020-21ರಲ್ಲಿ  1,105, 2021-22ರಲ್ಲಿ 1420 ದೂರುಗಳು ಬಂದಿವೆ. ಪ್ರಸಕ್ತ ಹಣಕಾಸು ವರ್ಷದ ಜನವರಿ 31ರವರೆಗೆ 128 ದೂರುಗಳು ಮುಸ್ಲಿಂ ಸಮುದಾಯದ ಸದಸ್ಯರಿಂದ ಆಯೋಗಕ್ಕೆ ಸಲ್ಲಿಕೆಯಾಗಿವೆ ಎಂದು ದತ್ತಾಂಶಗಳು ತಿಳಿಸಿವೆ.

ಕ್ರೈಸ್ತ ಸಮುದಾಯದ ಸದಸ್ಯರು 2020-21ರಲ್ಲಿ 103, 2021-22ರಲ್ಲಿ 137 ದೂರುಗಳನ್ನು ನೀಡಿದ್ದಾರೆ. ಈ ವರ್ಷದ ಜನವರಿಗೆ 107 ದೂರುಗಳು ಅವರಿಂದ ಬಂದಿವೆ ಎಂದು ದತ್ತಾಂಶಗಳು ತೋರಿಸಿವೆ.

ಪ್ರಸಕ್ತ ಹಣಕಾಸು ವರ್ಷದ ಮೊದಲ ಹತ್ತು ತಿಂಗಳುಗಳಲ್ಲಿ ಕ್ರೈಸ್ತರಿಂದ 107 ದೂರು ಬಂದಿವೆ. ಉತ್ತರಪ್ರದೇಶದಿಂದ 21 ಹಾಗೂ ತಮಿಳುನಾಡಿನಿಂದ 10 ದೂರುಗಳು ಸಲ್ಲಿಕೆಯಾಗಿವೆ.

2020-21ರಲ್ಲಿ ಸಿಖ್ಖರು 99 ದೂರುಗಳು ನೀಡಿದ್ದಾರೆ. 2021-22ರಲ್ಲಿ ಆ ಸಮುದಾಯದವರಿಂದ 222 ದೂರುಗಳು ಬಂದಿದ್ದು, ಹಿಂದಿನ ಸಾಲಿಗಿಂತ 120 ಶೇಕಡ ಏರಿಕೆಯಾಗಿದೆ. ಪ್ರಸಕ್ತ ವಿತ್ತ ವರ್ಷದಲ್ಲಿ ಸಿಖ್ಖ್ ಸಮುದಾಯದವರಿಂದ ಈವರೆಗೆ 270 ದೂರುಗಳು ಬಂದಿವೆ.

Similar News