ಮನೆಗೆಲಸದ ಬಾಲಕಿಗೆ ಹಿಂಸೆ ನೀಡಿದ ದಂಪತಿ ಕೆಲಸಗಳಿಂದ ವಜಾ

Update: 2023-02-11 16:35 GMT

ಹೊಸದಿಲ್ಲಿ, ಫೆ. 11: ಅಪ್ರಾಪ್ತ ವಯಸ್ಸಿನ ಮನೆಗೆಲಸದ ಬಾಲಕಿಗೆ ಹಲ್ಲೆ ನಡೆಸಿ ಹಿಂಸೆ ನೀಡಿರುವ ಆರೋಪವನ್ನು ಎದುರಿಸುತ್ತಿರುವ ಗುರುಗ್ರಾಮದ ದಂಪತಿಯನ್ನು ಅವರ ಕೆಲಸಗಳಿಂದ ವಜಾಗೊಳಿಸಲಾಗಿದೆ.

ಮನೀಶ್ ಖಟ್ಟರ್(Manish Khattar) ಮತ್ತು ಆತನ ಹೆಂಡತಿ ಕಮಲ್‌ಜೀತ್ ಕೌರ್(Kamaljeet Kaur) ತಮ್ಮ ಮಗಳನ್ನು ನೋಡಿಕೊಳ್ಳಲು ಐದು ತಿಂಗಳ ಹಿಂದೆ ಬಾಲಕಿಯನ್ನು ಕೆಲಸಕ್ಕೆ ನೇಮಿಸಿಕೊಂಡಿದ್ದರು. ಬಾಲಕಿಯನ್ನು ಫೆಬ್ರವರಿ 7ರಂದು ಪೊಲೀಸರು ರಕ್ಷಿಸಿದ್ದರು. ಬಾಲಕಿಗೆ ಹಿಂಸೆ ನೀಡಿರುವ ಆರೋಪದಲ್ಲಿ ದಂಪತಿಯನ್ನು ಪೊಲೀಸರು ಬಳಿಕ ಬಂಧಿಸಿದ್ದಾರೆ.

ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯವನ್ನೂ ಎಸಗಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮನೀಶ್ ಖಟ್ಟರ್ ಕೆಲಸ ಮಾಡುತ್ತಿರುವ ಮ್ಯಾಕ್ಸ್ ಲೈಫ್ ಇನ್ಶೂರೆನ್ಸ್ ಕಂಪೆನಿಯು ಆತನನ್ನು ಗುರುವಾರ ವಜಾಗೊಳಿಸಿದೆ.

ಕಮಲ್‌ಜೀತ್ ಕೌರ್ ಕೆಲಸ ಮಾಡುತ್ತಿರುವ ಸಾರ್ವಜನಿಕ ಸಂಪರ್ಕಗಳ ಕಂಪೆನಿ ಮೀಡಿಯ ಮಂತ್ರ ಕೂಡ ತನ್ನ ಉದ್ಯೋಗಿಯನ್ನು ವಜಾಗೊಳಿಸಿದೆ.

Similar News