ಕೇರಳದಲ್ಲಿ ‘ಕುಸ್ತಿ’, ತ್ರಿಪುರಾದಲ್ಲಿ ‘ದೋಸ್ತಿ’: ಕಾಂಗ್ರೆಸ್-ಸಿಪಿಎಂ ಮೈತ್ರಿಗೆ ಮೋದಿ ಟೀಕೆ

Update: 2023-02-11 16:47 GMT

ರಾಧಾಕಿಶೋರಪುರ,ಫೆ.11: ವಿಧಾನಸಭಾ ಚುನಾವಣೆಗೆ ಸಜ್ಜಾಗಿರುವ ತ್ರಿಪುರಾದಲ್ಲಿ ಕಾಂಗ್ರೆಸ್-ಸಿಪಿಎಂ(Congress-CPM) ಮೈತ್ರಿಕೂಟದ ವಿರುದ್ಧ ಶನಿವಾರ ವಾಗ್ದಾಳಿ ನಡೆಸಿದ ಪ್ರಧಾನಿ ನರೇಂದ್ರ ಮೋದಿ(Narendra Modi)ಯವರು, ಉಭಯ ಪಕ್ಷಗಳು ಕೇರಳದಲ್ಲಿ ‘ಕುಸ್ತಿ’ಯಾಡುತ್ತಿವೆ ಮತ್ತು ತ್ರಿಪುರಾದಲ್ಲಿ ‘ದೋಸ್ತಿ’ಮಾಡಿಕೊಂಡಿವೆ ಎಂದು ಹೇಳಿದರು.

ಸ್ಥಳೀಯ ಪಕ್ಷ ತಿಪ್ರಾ ಮೊಹ್ತಾವನ್ನು ಪರೋಕ್ಷವಾಗಿ ಪ್ರಸ್ತಾಪಿಸಿದ ಮೋದಿ,ಕೆಲವು ಇತರ ಪಕ್ಷಗಳೂ ಪ್ರತಿಪಕ್ಷ ಮೈತ್ರಿಕೂಟಕ್ಕೆ ಹಿಂದಿನಿಂದ ನೆರವಾಗುತ್ತಿವೆ,ಆದರೆ ಅದಕ್ಕೆ ಬೀಳುವ ಯಾವುದೇ ಮತ ತ್ರಿಪುರಾವನ್ನು ಹಲವಾರು ವರ್ಷಗಳಷ್ಟು ಹಿಂದಕ್ಕೊಯ್ಯುತ್ತದೆ ಎಂದರು.

ದುರಾಡಳಿತದ ಹಳೆಯ ಆಟಗಾರರು ‘ಚಂದಾ (ದೇಣಿಗೆ)’ಗಾಗಿ ಪರಸ್ಪರ ಕೈಗಳನ್ನು ಜೋಡಿಸಿದ್ದಾರೆ. ಕೇರಳದಲ್ಲಿ ಕುಸ್ತಿಯಾಡುತ್ತಿರುವವರು ತ್ರಿಪುರಾದಲ್ಲಿ ದೋಸ್ತಿ ಮಾಡಿಕೊಂಡಿದ್ದಾರೆ ಎಂದು ಗೋಮತಿ ಜಿಲ್ಲೆಯ ರಾಧಾಕಿಶೋರಪುರದಲ್ಲಿ ಚುನಾವಣಾ ರ್ಯಾಲಿಯಲ್ಲಿ ಮಾತನಾಡುತ್ತಿದ್ದ ಮೋದಿ ಟೀಕಿಸಿದರು.

ಇದಕ್ಕೂ ಮುನ್ನ ಧಲಾಯಿ ಜಿಲ್ಲೆಯ ಅಂಬಾಸಾದಲ್ಲಿ ಇನ್ನೊಂದು ಚುನಾವಣಾ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಅವರು,‘ಎಡರಂಗ ಮತ್ತು ಕಾಂಗ್ರೆಸ್ ಸರಕಾರಗಳು ಬುಡಕಟ್ಟು ಜನರಲ್ಲಿ ಒಡಕನ್ನು ಸೃಷ್ಟಿಸಿದ್ದವು, ಆದರೆ ಬಿಜೆಪಿಯು ಬ್ರೂಗಳು ಸೇರಿದಂತೆ ಅವರ ಸಮಸ್ಯೆಗಳನ್ನು ಬಗೆಹರಿಸಲು ಶ್ರಮಿಸಿದೆ. ಬಿಜೆಪಿಯು ಭಾರತದಾದ್ಯಂತ ಬುಡಕಟ್ಟು ಜನರ ಏಳಿಗೆಗಾಗಿ ಕೆಲಸ ಮಾಡುತ್ತಿದೆ. ಮಿಜೋರಾಮ್‌ನಿಂದ ನಿರ್ವಸಿತಗೊಂಡಿದ್ದ 37,000ಕ್ಕೂ ಅಧಿಕ ಬ್ರೂಗಳಿಗೆ ನಾವು ತ್ರಿಪುರಾದಲ್ಲಿ ಪುನರ್ವಸತಿ ಕಲ್ಪಿಸಿದ್ದೇವೆ.

ನಮ್ಮ ಸರಕಾರವು ಉನ್ನತ ಶಿಕ್ಷಣದಲ್ಲಿ ಬುಡಕಟ್ಟು ಭಾಷೆ ಕೋಕ್‌ಬೊರೋಕ್ ಅನ್ನು ಜಾರಿಗೆ ತಂದಿದೆ. ಕೇಂದ್ರ ಬಜೆಟ್‌ನಲ್ಲಿ ಬುಡಕಟ್ಟು ಪ್ರದೇಶಗಳ ಅಭಿವೃದ್ಧಿಗಾಗಿ ಒಂದು ಲ.ಕೋ.ರೂ.ಗಳನ್ನು ಹಂಚಿಕೆ ಮಾಡಲಾಗಿದೆ ’ಎಂದು ತಿಳಿಸಿದರು.

ಕೋವಿಡ್ ವಿರುದ್ಧದ ಹೋರಾಟವನ್ನು ಪ್ರಸ್ತಾಪಿಸಿದ ಮೋದಿ,ಎಡರಂಗದ ಆಡಳಿತದ ರಾಜ್ಯವೊಂದರಲ್ಲಿ ಕೊರೋನ ವೈರಸ್‌ನಿಂದ ಹಲವಾರು ಜನರು ಸಂಕಷ್ಟಕ್ಕೆ ಗುರಿಯಾಗಿದ್ದರು ಮತ್ತು ಸಾವನ್ನಪ್ಪಿದ್ದಾರೆ. ಆದರೆ ಬಿಜೆಪಿಯು ಜನರ ಜೀವಗಳ ರಕ್ಷಣೆಗಾಗಿ ಶ್ರಮಿಸಿದ್ದರಿಂದ ತ್ರಿಪುರಾ ಸುರಕ್ಷಿತವಾಗಿತ್ತು ಎಂದರು.

Similar News