ಟಾಟಾ ಗ್ರೂಪ್‌ನ ಏರ್‌ಏಶ್ಯಾ ಇಂಡಿಯಾಕ್ಕೆ 20 ಲಕ್ಷ ರೂ.ದಂಡ ವಿಧಿಸಿದ ಡಿಜಿಸಿಎ
ಮುಂಬೈ,ಫೆ.11: ಪೈಲಟ್‌ಗಳ ತರಬೇತಿಗೆ ಸಂಬಂಧಿಸಿದ ಕೆಲವು ನಿಯಮಗಳ ಉಲ್ಲಂಘನೆಗಾಗಿ ನಾಗರಿಕ ವಾಯುಯಾನ ಮಹಾ ನಿರ್ದೇಶನಾಲಯ (DGCA)ವು ಟಾಟಾ ಸಮೂಹ(Tata Group)ದ ಒಡೆತನದ ಅಗ್ಗದ ದರಗಳ ವಿಮಾನಯಾನ ಸಂಸ್ಥೆ ಏರ್‌ಏಶ್ಯಾ ಇಂಡಿಯಾ(AirAsia India)ಕ್ಕೆ ಶನಿವಾರ 20 ಲ.ರೂ.ಗಳ ದಂಡವನ್ನು ವಿಧಿಸಿದೆ.
ವಿಮಾನಯಾನ ಸಂಸ್ಥೆಯ ತರಬೇತಿ ಮುಖ್ಯಸ್ಥರನ್ನು ಮೂರು ತಿಂಗಳ ಅವಧಿಗೆ ಹುದ್ದೆಯಿಂದ ವಜಾಗೊಳಿಸುವಂತೆಯೂ ಆದೇಶಿಸಿರುವ ಡಿಜಿಸಿಎ, ನಿಯೋಜಿತ ಪರೀಕ್ಷಕರಿಗೂ ತಲಾ ಮೂರು ಲ.ರೂ.ಗಳ ದಂಡವನ್ನು ವಿಧಿಸಿದೆ ಎಂದು ಹೇಳಿಕೆಯು ತಿಳಿಸಿದೆ.
ಇದು ಕಳೆದ ಒಂದು ತಿಂಗಳಲ್ಲಿ ಟಾಟಾ ಸಮೂಹದ ವಿಮಾನಯಾನ ಸಂಸ್ಥೆಯ ವಿರುದ್ಧ ಡಿಜಿಸಿಎ ಕೈಗೊಂಡಿರುವ ಮೂರನೇ ಕಾನೂನಾತ್ಮಕ ಕ್ರಮವಾಗಿದೆ. ಇದಕ್ಕೂ ಮುನ್ನ ಅದು ಏರ್‌ಏಶ್ಯಾ ಇಂಡಿಯಾ,ತರಬೇತಿ ಮುಖ್ಯಸ್ಥರು ಮತ್ತು ನಿಯೋಜಿತ ಪರೀಕ್ಷಕರಿಗೆ ಶೋಕಾಸ್ ನೋಟಿಸ್‌ಗಳನ್ನು ಹೊರಡಿಸಿತ್ತು.
ತಾನು ಡಿಜಿಸಿಎ ಆದೇಶವನ್ನು ಪುನರ್‌ಪರಿಶೀಲಿಸುತ್ತಿದ್ದು,ಅದರ ವಿರುದ್ಧ ಮೇಲ್ಮನವಿ ಸಲ್ಲಿಸಲು ಚಿಂತನೆ ನಡೆಸುತ್ತಿದ್ದೇನೆ ಎಂದು ಹೇಳಿಕೆಯಲ್ಲಿ ತಿಳಿಸಿರುವ ಏರ್‌ಏಶ್ಯಾ ಇಂಡಿಯಾ, 2022,ನವಂಬರ್‌ನಲ್ಲಿ ಮೂಲ ನೆಲೆಯಲ್ಲಿ ತಪಾಸಣೆಯ ಬಳಿಕ ಡಿಜಿಸಿಎ ಪೈಲಟ್‌ಗಳ ತರಬೇತಿ ಚಟುವಟಿಕೆಗಳಲ್ಲಿ ಲೋಪವನ್ನು ಗುರುತಿಸಿತ್ತು. ಡಿಜಿಸಿಎ ಸಮನ್ವಯದಲ್ಲಿ ತಕ್ಷಣ ತಿದ್ದುಪಡಿ ಕ್ರಮವನ್ನು ತೆಗೆದುಕೊಳ್ಳಲಾಗಿತ್ತು ಮತ್ತು ಲೋಪವನ್ನು ನಿವಾರಿಸಲು ಹೆಚ್ಚುವರಿ ಸಿಮ್ಯುಲೇಟರ್ ತರಬೇತಿ ಅವಧಿಗಳನ್ನು ಜಾರಿಗೊಳಿಸಲಾಗಿತ್ತು ಎಂದು ಹೇಳಿದೆ.
‘ನಮ್ಮ ವಿಮಾನಗಳ ಕಾರ್ಯಾಚರಣೆಗೆ ಅಗತ್ಯವಾದ ಸುರಕ್ಷತಾ ಕ್ರಮಗಳಲ್ಲಿ ಯಾವುದೇ ವ್ಯತ್ಯಾಸವುಂಟಾಗಿಲ್ಲ ಎಂದು ನಾವು ಪುನರುಚ್ಚರಿಸುತ್ತೇವೆ ’ಎಂದೂ ಅದು ತನ್ನ ಹೇಳಿಕೆಯಲ್ಲಿ ತಿಳಿಸಿದೆ.