ನೂತನ ಆದಾಯ ತೆರಿಗೆ ಪದ್ದತಿಯಿಂದ ಮಧ್ಯಮವರ್ಗದಲ್ಲಿ ಹೆಚ್ಚು ಹಣ ಉಳಿಯಲಿದೆ: ನಿರ್ಮಲಾ ಸೀತಾರಾಮನ್

Update: 2023-02-11 17:20 GMT

ಹೊಸದಿಲ್ಲಿ,ಫೆ.11: 2023-24ನೇ ಸಾಲಿನ ಬಜೆಟ್‌ನಲ್ಲಿ ಘೋಷಿಸಲಾದ ನೂತನ ತೆರಿಗೆ ಪದ್ಧತಿಯು ಮಧ್ಯಮವರ್ಗಕ್ಕೆ ಹೆಚ್ಚು ಪ್ರಯೋಜನಕಾರಿಯಾಗಲಿದ್ದು, ಅವರ ಕೈಯಲ್ಲಿ ಹೆಚ್ಚು ಹಣ ಉಳಿಯುವಂತೆ ಮಾಡಲಿದೆಯೆಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ತಿಳಿಸಿದ್ದಾರೆ.

ಭಾರತೀಯ ರಿಸರ್ವ್ ಬ್ಯಾಂಕ್‌ನ ಕೇಂದ್ರೀಯ ಮಂಡಳಿಯ ಲ್ಲಿ ಸಾಂಪ್ರದಾಯಿಕ ಬಜೆಟೋತ್ತರ ಭಾಷಣ ಮಾಡಿದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಅವರು ಸರಕಾರಿ ಯೋಜನೆಗಳಲ್ಲಿ ಹೂಡಿಕೆ ಮಾಡುವಂತೆ ವ್ಯಕ್ತಿಗಳನ್ನು ಪ್ರೇರೇಪಿಸುವ ಅಗತ್ಯವಿಲ್ಲ. ಆದರೆ ಹೂಡಿಕೆಗೆ ಕುರಿತಂತೆ ವೈಯಕ್ತಿಕ ನಿರ್ಧಾರವನ್ನು ಕೈಗೊಳ್ಳಲು ಇದು ಅವರಿಗೆ ಅವಕಾಶವನ್ನು ನೀಡಲಿದೆ ಎಂದರು.

ಮುಂದಿನ ಹಣಕಾಸು ವರ್ಷ (2023-24)ದಿಂದ ಜಾರಿಗೆ ಬರಲಿರುವ ನೂತನ ತೆರಿಗೆ ನೀತಿಯ ಪ್ರಕಾರ 7 ಲಕ್ಷದವರೆಗಿನ ವಾರ್ಷಿಕ ಆದಾಯಕ್ಕೆ ಯಾವುದೇ ತೆರಿಗೆಯನ್ನು ವಿಧಿಸಲಾಗುವುದಿಲ್ಲ.

ಆದಾನಿ ಸಮೂಹದ ಬಿಕ್ಕಟ್ಟಿಗೆ ಸಂಬಂಧಿಸಿ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ‘‘ ಭಾರತೀಯ ನಿಯಂತ್ರಕರು (ಸೆಬಿ ಇತ್ಯಾದಿ) ತಮ್ಮ ಕ್ಷೇತ್ರದಲ್ಲಿ ಅತ್ಯಂತ ಅನುಭವಿಗಳು ಹಾಗೂ ಪರಿಣಿತರಾಗಿದ್ದಾರೆ. ಈ ವಿಷಯದ ಬಗ್ಗೆ ನಿಯಂತ್ರಕರು ಪರಿಶೀಲನೆ ನಡೆಸುತ್ತಿದ್ದಾರೆ. ಈಗ ಮಾತ್ರವಲ್ಲ ಅವರು ಯಾವಾಗಲೂ ಜಾಗೃತರಾಗಿಯೇ ಇರುತ್ತಾರೆ’’ ಎಂದು ಹೇಳಿದರು.

ಕ್ರಿಪ್ಟೊ ಕರೆನ್ಸಿಗಳನ್ನು ನಿಯಂತ್ರಿಸುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಸಾಮಾನ್ಯ ಕಾರ್ಯಚೌಕಟ್ಟನ್ನು ವಿನ್ಯಾಸಗೊಳಿಸಲು ಭಾರತವು ಜಿ20 ರಾಷ್ಟ್ರಗಳ ಜೊತೆ ಚರ್ಚೆ ನಡೆಸುತ್ತಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಹಾಜರಿದ್ದ ಆರ್‌ಬಿಐ(RBI) ಗವರ್ನರ್ ಶಕ್ತಿಕಾಂತದಾಸ್ ಅವರು ಬೆಲೆ ಏರಿಕೆ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸುತ್ತಾ , 2023-24ರ ಸಾಲಿನಲ್ಲಿ ಚಿಲ್ಲರೆ ಹಣದುಬ್ಬರ ದರವು ಶೇ.5.3ರಷ್ಟು ಆಗುವ ನಿರೀಕ್ಷೆಯಿದೆ ಎಂದರು. ಆದರೆ ಒಂದು ವೇಳೆ ಕಚ್ಚಾ ತೈಲ ದರಗಳು ಸೌಮ್ಯರೂಪದಲ್ಲಿದ್ದಲ್ಲಿ ಹಣದುಬ್ಬರದಲ್ಲಿ ಇಳಿಕೆಯಾಗಲಿದೆ ಎಂದರು.

ಸಾಲದರ ನಿಗದಿಗೆ ಸಂಬಂಧಿಸಿದಂತೆ ಮಾರುಕಟ್ಟೆ ಸ್ಪರ್ಧೆಯು ಸಾಲ ಬಡ್ಡಿದರ ಹಾಗೂ ಠೇವಣಿ ಬಡ್ಡಿದರವನ್ನು ನಿರ್ಧರಿಸಲಿದೆ ಎಂದು ಶಕ್ತಿಕಾಂತ್ ದಾಸ್ ತಿಳಿಸಿದರು.

Similar News