×
Ad

ದುಷ್ಕರ್ಮಿಗಳಿಂದ ಮನೆಮುಂದೆಯೇ ಜೆಡಿಯು ಗಯಾ ಜಿಲ್ಲಾ ಉಪಾಧ್ಯಕ್ಷ ಹತ್ಯೆ

Update: 2023-02-12 10:37 IST

ಗಯಾ: ಅಪರಿಚಿತ ದುಷ್ಕರ್ಮಿಗಳು ಸಂಯುಕ್ತ ಜನತಾದಳದ ಗಯಾ ಜಿಲ್ಲಾ ಉಪಾಧ್ಯಕ್ಷ ಸುನೀಲ್ ಸಿಂಗ್ (52) ಅವರನ್ನು ಬರೋಹಾ ಬಿಘಾದಲ್ಲಿರುವ ಅವರ ಮನೆ ಮುಂದೆ ಗುಂಡಿಟ್ಟು ಹತ್ಯೆ ಮಾಡಿದ್ದಾರೆ. ಐದು ಬಾರಿ ಅವರಿಗೆ ಗುಂಡು ಹೊಡೆಯಲಾಗಿದೆ. ಹುಟ್ಟುಹಬ್ಬದ ಪಾರ್ಟಿ ಮುಗಿಸಿ ಮನೆಗೆ ವಾಪಸ್ಸಾಗಿ ಮನೆ ಪ್ರವೇಶಿಸುವ ಸಂದರ್ಭ ಅವರತ್ತ ಗುಂಡು ಹಾರಿಸಲಾಗಿದೆ.

"ಕೆಲ ಮಂದಿಯನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ. ವಝೀರ್‌ಗಂಜ್ ಡಿಎಸ್ಪಿ ಅಜಯ್ ಕುಮಾರ್ ಸಿಂಗ್ ನೇತೃತ್ವದಲ್ಲಿ ತನಿಖೆಗಾಗಿ ವಿಶೇಷ ತನಿಖಾ ತಂಡ ರಚಿಸಲಾಗಿದೆ ಎಂದು ಎಸ್‌ಎಸ್‌ಪಿ ಅಭಿಷೇಕ್ ಭಾರ್ತಿ ಹೇಳಿದ್ದಾರೆ. ಈ ಅಪರಾಧ ಕೃತ್ಯಕ್ಕೆ ಕೆಲ ವೈಯಕ್ತಿಕ ವ್ಯಾಜ್ಯ ಕಾರಣ ಎಂದು ಮೇಲ್ನೋಟಕ್ಕೆ ಕಂಡುಬಂದಿದೆ. ಆದಾಗ್ಯೂ ಘಟನೆ ಬಗ್ಗೆ ವಿವಿಧ ಆಯಾಮಗಳಿಂದ ತನಿಖೆ ನಡೆಸಲಾಗುತ್ತಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಪಕ್ಷದ ಮಾಜಿ ಬ್ಲಾಕ್ ಅಧ್ಯಕ್ಷ ಸುರೇಶ್ ರಾವ್ ಎಂಬುವವರ ಮೊಮ್ಮಗಳ ಬರ್ತ್‌ಡೇ ಪಾರ್ಟಿಗೆ ಸುನೀಲ್ ಸಿಂಗ್ ಶುಕ್ರವಾರ ರಾತ್ರಿ ಮಗ ಪುಷ್ಪರಾಜ್ ಜತೆಗೆ ತೆರಳಿದ್ದರು. ಮಗನನ್ನು ಮೊದಲೇ ವಾಪಾಸ್ಸು ಕಳುಹಿಸಿದ್ದರು ಎಂದು ಮೃತ ಮುಖಂಡನ ಪತ್ನಿ ಜ್ಯೋತಿ ಸಿಂಗ್ ಹೇಳಿದ್ದಾರೆ.

ರಾತ್ರಿ 10ರ ಸುಮಾರಿಗೆ ಗೇಟು ತೆರೆಯುವಂತೆ ಕರೆ ಮಾಡಿದ್ದರು. ಗೇಟು ತೆರೆಯುತ್ತಿದ್ದಂತೆ ದುಷ್ಕರ್ಮಿಗಳು ಹಿಂದಿನಿಂದ ಗುಂಡು ಹಾರಿಸಿ ಪರಾರಿಯಾದರು ಎಂದು ವಿವರ ನೀಡಿದ್ದಾರೆ. ಗುಂಡೇಟಿನಿಂದ ತೀವ್ರವಾಗಿ ಗಾಯಗೊಂಡ ಅವರನ್ನು ಅನುರಾಘ್ ನಾರಾಯಣ ಮಗಧ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಒಯ್ಯಲಾಯಿತಾದರೂ ಅವರು ಮೃತಪಟ್ಟರು ಎಂದು ಪೊಲೀಸರು ಹೇಳಿದ್ದಾರೆ.

Similar News