ಆಂಧ್ರಪ್ರದೇಶ ರಾಜ್ಯಪಾಲರಾಗಿ ಸುಪ್ರೀಂಕೋರ್ಟ್ ಮಾಜಿ ನ್ಯಾಯಾಧೀಶ ಎಸ್.ಎ.ನಝೀರ್ ನೇಮಕ
ಅಯೋಧ್ಯೆ ತೀರ್ಪಿನ ಪೀಠದ ಸದಸ್ಯರಾಗಿದ್ದರು
ಹೊಸದಿಲ್ಲಿ,ಫೆ.12: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸರ್ವೋಚ್ಚ ನ್ಯಾಯಾಲಯದ ಮಾಜಿ ನ್ಯಾಯಾಧೀಶ,ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆಯ ಬೆಳುವಾಯಿ ಮೂಲದ ಎಸ್.ಅಬ್ದುಲ್ ನಝೀರ್ ಅವರನ್ನು ಆಂಧ್ರಪ್ರದೇಶದ ರಾಜ್ಯಪಾಲರಾಗಿ ರವಿವಾರ ನೇಮಕಗೊಳಿಸಿದ್ದಾರೆ.
ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶ ಹುದ್ದೆಯಿಂದ ಜ.4ರಂದು ನಿವೃತ್ತರಾಗಿದ್ದ ನ್ಯಾ.ನಝೀರ್ 2019ರಲ್ಲಿ ಅಯೋಧ್ಯೆ ಭೂವಿವಾದ ಪ್ರಕರಣದಲ್ಲಿ ಬಾಬರಿ ಮಸೀದಿಯ ವಿವಾದಿತ ನಿವೇಶನದಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಅವಕಾಶ ಕಲ್ಪಿಸಿದ್ದ ತೀರ್ಪನ್ನು ನೀಡಿದ್ದ ಐವರು ನ್ಯಾಯಾಧೀಶರ ಸಂವಿಧಾನ ಪೀಠದ ಭಾಗವಾಗಿದ್ದರು. ಅವರು ಜ.2ರಂದು ಕೇಂದ್ರದ 2016ರ ನೋಟು ನಿಷೇಧ ಕ್ರಮವನ್ನು ಎತ್ತಿ ಹಿಡಿದಿದ್ದ ಸರ್ವೋಚ್ಚ ನ್ಯಾಯಾಲಯದ ಪೀಠದ ಸದಸ್ಯರೂ ಆಗಿದ್ದರು.
ನ್ಯಾ.ನಝೀರ್ 2017ರಲ್ಲಿ ತ್ರಿವಳಿ ತಲಾಖ್ ಪದ್ಧತಿಯು ಅಸಾಂವಿಧಾನಿಕವಾಗಿದೆ ಎಂದು ತೀರ್ಪು ನೀಡಿದ್ದ ಸರ್ವೋಚ್ಚ ನ್ಯಾಯಾಲಯದ ಪೀಠದ ಭಾಗವಾಗಿದ್ದರೂ,ಅದು ಸಿಂಧುತ್ವವನ್ನು ಹೊಂದಿದೆ ಎಂಬ ಭಿನ್ನ ತೀರ್ಪನ್ನು ನೀಡಿದ್ದರು.
ಕಳೆದ ಆರು ವರ್ಷಗಳಲ್ಲಿ ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರೋರ್ವರು ರಾಜ್ಯಪಾಲರಾಗಿ ನೇಮಕಗೊಂಡಿರುವುದು ಇದೇ ಮೊದಲ ಬಾರಿಯಾಗಿದೆ.
ಇದಕ್ಕೂ ಮುನ್ನ 2014ರಲ್ಲಿ ಭಾರತದ ಮಾಜಿ ಮುಖ್ಯ ನ್ಯಾಯಾಧೀಶ ಪಿ.ಸದಾಶಿವಂ ಅವರು ಕೇರಳದ ರಾಜ್ಯಪಾಲರಾಗಿ ನೇಮಕಗೊಂಡಿದ್ದರು. 1992ರಲ್ಲಿ ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರಾಗಿ ನಿವೃತ್ತರಾಗಿದ್ದ ನ್ಯಾ.ಫಾತಿಮಾ ಬೀವಿ ಅವರನ್ನು 1997ರಲ್ಲಿ ತಮಿಳುನಾಡು ರಾಜ್ಯಪಾಲರಾಗಿ ನೇಮಕಗೊಳಿಸಲಾಗಿತ್ತು.
ಸರ್ವೋಚ್ಚ ನ್ಯಾಯಾಲಯದ ಇತರ ನ್ಯಾಯಾಧೀಶರೂ ಸರಕಾರಿ ಹುದ್ದೆಗಳನ್ನು ಹೊಂದಿದ್ದ ನಿದರ್ಶನಗಳಿವೆ. 2020ರಲ್ಲಿ ಭಾರತದ ಮಾಜಿ ಮುಖ್ಯ ನ್ಯಾಯಾಧೀಶ ರಂಜನ ಗೊಗೊಯ್ ಅವರನ್ನು ರಾಜ್ಯಸಭಾ ಸದಸ್ಯರನ್ನಾಗಿ ನಾಮಕರಣಗೊಳಿಸಲಾಗಿತ್ತು. 2019ರಲ್ಲಿ ನಿವೃತ್ತಗೊಳ್ಳುವ ಮುನ್ನ ನ್ಯಾ.ರಂಜನ್ ನೇತೃತ್ವದ ಪೀಠವು ಅಯೋಧ್ಯಾ ಭೂ ವಿವಾದ ಪ್ರಕರಣದ ತೀರ್ಪನ್ನು ಪ್ರಕಟಿಸಿತ್ತು.
ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ವಕಾಲತ್ತು ನಡೆಸುತ್ತಿದ್ದ ನಝೀರ್ 2003ರಲ್ಲಿ ಅಲ್ಲಿ ಹೆಚ್ಚುವರಿ ನ್ಯಾಯಾಧೀಶರಾಗಿ ನೇಮಕಗೊಂಡಿದ್ದರು ಮತ್ತು 2004ರಲ್ಲಿ ಕಾಯಂ ನ್ಯಾಯಾಧೀಶರಾಗಿದ್ದರು. 2017ರಲ್ಲಿ ಅವರು ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರಾಗಿ ಪದೋನ್ನತಿಗೊಂಡಿದ್ದರು.
ರವಿವಾರ ರಾಷ್ಟ್ರಪತಿಗಳು ಲಡಾಖ್ನ ಲೆಫ್ಟಿನಂಟ್ ಗವರ್ನರ್ ಆಗಿದ್ದ ರಾಧಾಕೃಷ್ಣ ಮಾಥುರ್ ರಾಜೀನಾಮೆಯನ್ನು ಸಲ್ಲಿಸಿದ್ದು,ಅವರ ಸ್ಥಾನದಲ್ಲಿ ಅರುಣಾಚಲ ಪ್ರದೇಶದ ರಾಜ್ಯಪಾಲರಾಗಿದ್ದ ಬ್ರಿಗೇಡಿಯರ್ (ನಿವೃತ್ತ) ಬಿ.ಡಿ.ಮಿಶ್ರಾ ಅವರನ್ನು ನೇಮಕಗೊಳಿಸಿದ್ದಾರೆ. ಲಡಾಖ್ಗೆ ರಾಜ್ಯ ಮತ್ತು ವಿಶೇಷ ಸ್ಥಾನಮಾನಕ್ಕಾಗಿ ಆಗ್ರಹಿಸಿ ನಡೆಯುತ್ತಿರುವ ಪ್ರತಿಭಟನೆಗಳ ನಡುವೆಯೇ ಮಿಶ್ರಾ ಅವರ ನೇಮಕವಾಗಿದೆ. ನ್ಯಾ.ನಝೀರ್ ಜೊತೆಗೆ ಲೆ.ಜ.ಕೆ.ಟಿ ಪರ್ನಾಯಕ್ರನ್ನು ಅರುಣಾಚಲ ಪ್ರದೇಶ,ಲಕ್ಷ್ಮಣ ಪ್ರಸಾದ ಆಚಾರ್ಯರನ್ನು ಸಿಕ್ಕಿಂ, ಸಿ.ಪಿ.ರಾಧಾಕೃಷ್ಣನ್ರನ್ನು ಜಾರ್ಖಂಡ್,ಶಿವಪ್ರತಾಪ ಶುಕ್ಲಾರನ್ನು ಹಿಮಾಚಲ ಪ್ರದೇಶ, ಗುಲಾಬಚಂದ್ ಕಟಾರಿಯಾರನ್ನು ಅಸ್ಸಾಂ ರಾಜ್ಯಪಾಲರನ್ನಾಗಿ ನೇಮಕಗೊಳಿಸಲಾಗಿದೆ. ಈ ಗಣ್ಯರು ಇದೇ ಮೊದಲ ಬಾರಿಗೆ ರಾಜ್ಯಪಾಲರಾಗಿ ಕರ್ತವ್ಯ ನಿರ್ವಹಿಸಲಿದ್ದಾರೆ.
ಬ್ರಿ(ನಿ).ಮಿಶ್ರಾ ಜೊತೆಗೆ ಆಂಧ್ರಪ್ರದೇಶದ ರಾಜ್ಯಪಾಲ ವಿಶ್ವಭೂಷಣ ಹರಿಚಂದನರನ್ನು ಛತ್ತೀಸ್ಗಡ,ಮಣಿಪುರ ರಾಜ್ಯಪಾಲ ಎಲ್.ಗಣೇಶನ್ರನ್ನು ನಾಗಾಲ್ಯಾಂಡ್,ಛತ್ತೀಸ್ಗಡದ ರಾಜ್ಯಪಾಲ ಅನುಸೂಯಿಯಾ ಉಯಿಕೆರನ್ನು ಮಣಿಪುರ, ಬಿಹಾರದ ರಾಜ್ಯಪಾಲ ಫಗು ಚೌಹಾಣರನ್ನು ಮೇಘಾಲಯ, ಹಿಮಾಚಲ ಪ್ರದೇಶದ ರಾಜ್ಯಪಾಲ ಆರ್.ವಿ.ಅರ್ಲೇಕರ್ರನ್ನು ಬಿಹಾರ ಮತ್ತು ಜಾರ್ಖಂಡ್ ರಾಜ್ಯಪಾಲ ರಮೇಶ ಬೈಸ್ರನ್ನು ಮಹಾರಾಷ್ಟ್ರ ರಾಜ್ಯಪಾಲರನ್ನಾಗಿ ವರ್ಗಾವಣೆ ಮಾಡಲಾಗಿದೆ.