ರಾಜ್ಯ ಸ್ಥಾನಮಾನಕ್ಕಾಗಿ ಪ್ರತಿಭಟನೆ ನಡೆಸುತ್ತಿರುವ ಲಡಾಖ್‌ಗೆ ನೂತನ ಲೆಫ್ಟಿನೆಂಟ್ ಗವರ್ನರ್ ನೇಮಿಸಿದ ಕೇಂದ್ರ
ಶ್ರೀನಗರ: ರಾಜ್ಯ ಸ್ಥಾನಮಾನ ಹಾಗೂ ಸಂವಿಧಾನದ ಆರನೇ ಶೆಡ್ಯೂಲ್ ಅಡಿಯಲ್ಲಿ ವಿಶೇಷ ಸ್ಥಾನಮಾನಕ್ಕೆ ಒತ್ತಾಯಿಸಿ ಲಡಾಖಿ ಜನರು ನಡೆಸುತ್ತಿರುವ ಆಂದೋಲನದ ನಡುವೆ ಕೇಂದ್ರ ಸರಕಾರವು ಇಂದು ಲಡಾಖ್ ಕೇಂದ್ರಾಡಳಿತ ಪ್ರದೇಶಕ್ಕೆ ಹೊಸ ಲೆಫ್ಟಿನೆಂಟ್ ಗವರ್ನರ್ ಅವರನ್ನು ನೇಮಕ ಮಾಡಿದೆ.
ಭಾರತೀಯ ಸೇನೆಯ ಮಾಜಿ ಬ್ರಿಗೇಡಿಯರ್ ಹಾಗೂ ಪ್ರಸ್ತುತ ಅರುಣಾಚಲ ಪ್ರದೇಶದ ರಾಜ್ಯಪಾಲರಾದ ಬಿ.ಡಿ. ಮಿಶ್ರಾ ಅವರನ್ನು ಲಡಾಖ್‌ನ ಎಲ್‌ಜಿಯಾಗಿ ನೇಮಿಸಲಾಗಿದೆ.
ಶನಿವಾರ, ಲೆಫ್ಟಿನೆಂಟ್ ಗವರ್ನರ್ ರಾಧಾ ಕೃಷ್ಣ ಮಾಥುರ್ ತಮ್ಮ ಸಿಬ್ಬಂದಿಗೆ ವಿದಾಯ ಹೇಳಿದ ನಂತರ ಲೇಹ್‌ನಲ್ಲಿರುವ ತಮ್ಮ ಕಚೇರಿಯನ್ನು ಸದ್ದಿಲ್ಲದೆ ತೊರೆದಿದ್ದರು.
ಮೂಲಗಳ ಪ್ರಕಾರ, ಶನಿವಾರದಂದು ಮಾಥೂರ್ ಅವರು ತಮ್ಮ ಬ್ಯಾಗ್‌ಗಳನ್ನು ಪ್ಯಾಕ್ ಮಾಡಿದ್ದರು. ತಮ್ಮ ಹಠಾತ್ ನಿರ್ಧಾರಕ್ಕೆ ಯಾವುದೇ ಕಾರಣವನ್ನು ಉಲ್ಲೇಖಿಸದೆ ತಾನು ಹೊರಡುವುದಾಗಿ ಸಿಬ್ಬಂದಿಗೆ ತಿಳಿಸಿದರು.
ಮಾಥುರ್ ಅವರನ್ನು ಕೇಂದ್ರವು ರಾಜೀನಾಮೆ ನೀಡುವಂತೆ ಕೇಳಿಕೊಂಡಿದೆಯೇ ಅಥವಾ ಲಡಾಖಿ ಜನರು ಆಂದೋಲನ ನಡೆಸುತ್ತಿರುವುದರಿಂದ ಅವರು ಹುದ್ದೆ ತ್ಯಜಿಸಲು ನಿರ್ಧರಿಸಿದ್ದಾರೆಯೇ ಎಂಬುದು ಸ್ಪಷ್ಟವಾಗಿಲ್ಲ
ಆಗಸ್ಟ್ 2019 ರಲ್ಲಿ ಜಮ್ಮು –ಕಾಶ್ಮೀರದ ರಾಜ್ಯ ಸ್ಥಾನಮಾನ ರದ್ದುಪಡಿಸಿ ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಂಗಡಿಸಿದ ನಂತರ ಮಾಜಿ ರಕ್ಷಣಾ ಕಾರ್ಯದರ್ಶಿಯಾಗಿದ್ದ ಮಾಥುರ್ ಲಡಾಖ್‌ನ ಮೊದಲ ಲೆಫ್ಟಿನೆಂಟ್ ಗವರ್ನರ್ ಆಗಿ ನೇಮಕಗೊಂಡರು. ಲೆಫ್ಟಿನೆಂಟ್ ಗವರ್ನರ್ ಆಗಿ ಮೂರು ವರ್ಷಗಳ ಸುದೀರ್ಘ ಅಧಿಕಾರಾವಧಿಯಲ್ಲಿ 69 ವರ್ಷದ ಮಾಥುರ್ ಅವರು ಲೇಹ್‌ಗಿಂತ ದಿಲ್ಲಿಯಲ್ಲಿ ಹೆಚ್ಚು ಸಮಯವನ್ನು ಕಳೆದಿದ್ದರು.