ಯಕ್ಷಗಾನಕ್ಕೆ ಸಂಬಂಧಿಸಿ ಡಾಟಾ ಬ್ಯಾಂಕ್: ಸಚಿವ ಸುನೀಲ್ ಕುಮಾರ್

ರಾಜ್ಯಮಟ್ಟದ ಸಮಗ್ರ ಯಕ್ಷಗಾನ ಸಮ್ಮೇಳನ ಸಮಾರೋಪ

Update: 2023-02-12 15:14 GMT

ಉಡುಪಿ: ಯಕ್ಷಗಾನ ಕಲಾವಿದರ ಪರಿಚಯ ಹಾಗೂ ಈ ಕಲಾ ಪ್ರಕಾರವನ್ನು ಮುಂದಿನ ಪೀಳಿಗೆಗೆ ತಿಳಿಸುವ ನಿಟ್ಟಿನಲ್ಲಿ ಯಕ್ಷಗಾನಕ್ಕೆ ಸಂಬಂಧ ಪಟ್ಟಂತೆ ಡಾಟಾ ಬ್ಯಾಂಕ್ ಮಾಡಬೇಕಾಗಿದೆ. ಈ ಹಿನ್ನೆಲೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇಂದಿನಿಂದಲೇ ಕಾರ್ಯಾರಂಭ ಮಾಡಲಿದೆ. ಮುಂದಿನ ದಿನಗಳಲ್ಲಿ ಸಂಗ್ರಹಯೋಗ್ಯವಾದ ದತ್ತಾಂಶವನ್ನು ತಯಾರಿಸಲು ಎಲ್ಲ ರೀತಿಯ ಸಿದ್ಧತೆ ಮಾಡಲಾಗುವುದು ಎಂದು ರಾಜ್ಯ ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ.ಸುನೀಲ್ ಕುಮಾರ್ ತಿಳಿಸಿದ್ದಾರೆ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಯಕ್ಷಗಾನ ಅಕಾಡೆಮಿ, ಉಡುಪಿ ಜಿಲ್ಲಾಡಳಿತ ವತಿಯಿಂದ ಉಡುಪಿಯ ಕುಂಜಿಬೆಟ್ಟು ಎಂಜಿಎಂ ಕಾಲೇಜು ಕ್ರೀಡಾಂಗಣದ ಮಲ್ಪೆ ಶಂಕರನಾರಾಯಣ ಸಾಮಗ ವೇದಿಕೆಯಲ್ಲಿ ರವಿವಾರ ನಡೆದ ರಾಜ್ಯಮಟ್ಟದ ಸಮಗ್ರ ಯಕ್ಷಗಾನ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಿ ಅವರು ಮಾತನಾಡುತ್ತಿದ್ದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಯಕ್ಷಗಾನ ಸೇರಿ ದಂತೆ ವಿವಿಧ ಕಲಾ ಪ್ರಕಾರಗಳನ್ನು ಗುರುತಿಸುವ ಕಾರ್ಯ ಇತ್ತೀಚೆಗೆ ದಿನಗಳಲ್ಲಿ ಪ್ರಾರಂಭಿಸಿದ್ದೇವೆ.  ಯಕ್ಷಗಾನಕ್ಕೆ ಸಂಬಂಧಿಸಿದ ಎಲ್ಲ ಚಿಂತನೆಗಳನ್ನು ಅನುಷ್ಠಾನಗೊಳಿಸಲು ಹಿರಿಯ ಮಾರ್ಗದರ್ಶನ ಮಾಡಬೇಕು. ವಿಶ್ವ ಯಕ್ಷಗಾನ ಸಮ್ಮೇಳನ ನಡೆಸುವ ಸಮ್ಮೇಳನದ ನಿರ್ಣಯಕ್ಕೆ ನಮ್ಮ ಸರಕಾರ ಖಂಡಿತ ಬದ್ಧವಾಗಿದೆ. ಅದಕ್ಕೆ ಬೇಕಾದ ವ್ಯವಸ್ಥೆಯನ್ನು ಮುಂದಿನ ವರ್ಷ ಮಾಡಲಾಗುವುದು ಎಂದರು.

ಈ ಸಂದರ್ಭದಲ್ಲಿ ಸಮ್ಮೇಳನಾಧ್ಯಕ್ಷ ಡಾ.ಎಂ.ಪ್ರಭಾಕರ ಜೋಷಿ ಹಾಗೂ ಸುಚೇತಾ ಪ್ರಭಾಕರ ಜೋಷಿ ದಂಪತಿ ಯನ್ನು ಸನ್ಮಾನಿಸಲಾಯಿತು. ಯಕ್ಷಗಾನ ಸಬಲೀಕರಣ ಆಗಬೇಕು. ಅದಕ್ಕಿಂತ ಮೊದಲು ಕಲಾವಿದರ ಸಬಲೀಕರಣ ಆಗಬೇಕಾಗಿರುವುದು ಅಗತ್ಯ. ಕಲಾ ನೀತಿಯನ್ನು ಸರಕಾರ ಮುಂದಿನ ಎರಡು ವರ್ಷಗಳಲ್ಲಿ ಜಾರಿಗೆ ತರಬೇಕು ಎಂದು ಹೇಳಿದರು.

ಎಲೆಕ್ಟ್ರಾನಿಕ್ ಮಾಧ್ಯಮಗಳು ಇಂದು ಯಕ್ಷಗಾನಕ್ಕೆ ಬಹಳ ದೊಡ್ಡ ಸವಾಲು ಆಗಿ ಪರಿಣಮಿಸಿದೆ. ಯಕ್ಷಗಾನಕ್ಕೆ ಪ್ರಸ್ತುತ ಸಾಕಷ್ಟು ಅವಕಾಶ ಹಾಗೂ ಅನುಕೂಲವೂ ಇದೆ. ಅಲ್ಲದೆ ವಿಸ್ತಾರದ ಜೊತೆಗೆ ಚಲನ ಮತ್ತು ಕಂಪನವನ್ನು ಕೂಡ ಅನುಭವಿಸುತ್ತಿದೆ. ಈ ನಿಟ್ಟಿನಲ್ಲಿ ಸರಕಾರ ಗಂಭೀರವಾಗಿ ಚಿಂತನೆ ಮಾಡ ಬೇಕಾಗಿದೆ ಎಂದು ಅವರು ಅಭಿಪ್ರಾಯ ಪಟ್ಟರು.

ಕಾಸರಗೋಡು ಎಡನೀರು ಮಠದ ಶ್ರೀಸಚ್ಚಿದಾನಂದ ಭಾರತೀ ಮಹಾಸ್ವಾಮಿ ಆಶೀರ್ವಚನ ನೀಡಿದರು. ಅಧ್ಯಕ್ಷತೆಯನ್ನು ಉಡುಪಿ ಶಾಸಕ ಹಾಗೂ ಸ್ವಾಗತ ಸಮಿತಿ ಅಧ್ಯಕ್ಷ ರಘುಪತಿ ಭಟ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ.ಮೋಹನ್ ಆಳ್ವ, ಕಲ್ಕೂರ ಪ್ರತಿಷ್ಠಾನ ದ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಉಡುಪಿ ಯಕ್ಷಗಾನ ಕೇಂದ್ರದ ಆಡಳಿತಾಧಿಕಾರಿ ಡಾ.ಬಿ.ಜಗದೀಶ್ ಶೆಟ್ಟಿ, ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ.ಗಂಗಾಧರ ರಾವ್, ಮಹಾಲಕ್ಷ್ಮಿ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ ಯಶ್ಪಾಲ್ ಸುವರ್ಣ ಭಾಗವಹಿಸಿದ್ದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕಗಳಾದ ವಿ.ಎನ್. ಮಲ್ಲಿಕಾರ್ಜುನ ಸ್ವಾಮಿ, ಅಶೋಕ್ ಚಲವಾದಿ, ಯಕ್ಷಗಾನ ಅಕಾಡೆಮಿ ರಿಜಿಸ್ಟ್ರಾರ್ ಎಸ್.ಎಚ್.ಶಿವರುದ್ರಪ್ಪ, ಉಡುಪಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ, ಸಲಹಾ ಸಮಿತಿ ಸದಸ್ಯರಾದ ಸುರೇಂದ್ರ ಪಣಿಯೂರು, ಕದ್ರಿ ನವನೀತ ಶೆಟ್ಟಿ, ಪಟ್ಲ ಸತೀಶ್ ಶೆಟ್ಟಿ, ಕೆ.ಎಂ. ಶೇಖರ್, ಡಾ.ಚಿಕ್ಕಣ್ಣ ಯಣ್ಣೆಕಟ್ಟೆ, ಭುವನಪ್ರಸಾದ್ ಹೆಗ್ಡೆ ಉಪಸ್ಥಿತರಿದ್ದರು.

ಸಮ್ಮೇಳನ ಸಮಿತಿಯ ಕಾರ್ಯಾಧ್ಯಕ್ಷ ಡಾ.ಜಿ.ಎಲ್.ಹೆಗಡೆ ಕುಮಟ ಸ್ವಾಗತಿಸಿದರು. ಸಮಿತಿ ಪ್ರಧಾನ ಸಂಚಾಲಕ ಪಳ್ಳಿ ಕಿಶನ್ ಹೆಗ್ಡೆ ನಿರ್ಣಯವನ್ನು ವಾಚಿಸಿದರು. ಮುರಲಿ ಕಡೆಕಾರ್ ಕಾರ್ಯಕ್ರಮ ನಿರೂಪಿಸಿದರು.

‘ಭಾರತೀಯ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಕಾರ್ಯವೇ ಈ ಯಕ್ಷಗಾನ ಸಮ್ಮೇಳನ. ಎಲ್ಲೆಲ್ಲಿ ನಮಗೆ ಅವಕಾಶಗಳು ಸಿಗುತ್ತವೆಯೋ ಆ ಎಲ್ಲ ಸಂದರ್ಭಗಳಲ್ಲಿ ರಾಷ್ಟ್ರೀಯ, ಹಿಂದುತ್ವ ಹಾಗೂ ಭಾರತೀಯ ಸಂಸ್ಕೃತಿಯ ವಿಚಾರಗಳನ್ನು ಆಡಳಿತದಲ್ಲಿ ದೊಡ್ಡ ಪ್ರಮಾಣದಲ್ಲಿ ಜಾರಿಗೆ ತರುವ ಕಾರ್ಯವನ್ನು ಮಾಡಿಕೊಂಡು ಬಂದಿದ್ದೇವೆ. ಅದರ ಭಾಗವಾಗಿಯೇ ಪರಶುರಾಮ ಥೀಮ್ ಪಾರ್ಕ್, ಕೋಟಿ ಕಂಠ ಗಾಯನ ಹಾಗೂ ಯಕ್ಷಗಾನ ಸಮ್ಮೇಳನಗಳನ್ನು ಮಾಡಲಾಗಿದೆ.
-ಸುನೀಲ್ ಕುಮಾರ್, ಸಚಿವರು

Similar News