ಮೊದಲ ಹಂತದ ದಿಲ್ಲಿ-ಮುಂಬೈ ಎಕ್ಸ್‌ಪ್ರೆಸ್ ವೇ ಉದ್ಘಾಟಿಸಿದ ಪ್ರಧಾನಿ
ಹೊಸದಿಲ್ಲಿ,ಮಾ.12: ಮಹತ್ವಾಕಾಂಕ್ಷೆಯ 1,400 ಕಿ.ಮೀ. ವಿಸ್ತೀರ್ಣದ ದಿಲ್ಲಿ-ಮುಂಬೈ ಎಕ್ಸ್ಪ್ರೆಸ್ವೇ ಹೆದ್ದಾರಿ ಯೋಜನೆಯ ಮೊದಲ ಹಂತವನ್ನು ಪ್ರಧಾನಿ ನರೇಂದ್ರ ಮೋದಿ ರಾಜಸ್ಥಾನದ ದೌಸಾದಲ್ಲಿ ರವಿವಾರ ಉದ್ಘಾಟಿಸಿದರು. ಮೊದಲ ಹಂತದಲ್ಲಿ ನಿರ್ಮಾಣವಾಗಿರುವ 246 ಕಿ.ಮೀ. ವಿಸ್ತೀರ್ಣದ ದಿಲ್ಲಿ-ದೌಸಾ-ಲಾಲ್ಸೊಟ್ ಎಕ್ಸ್‌ಪ್ರೆಸ್ ವೇ ದಿಲ್ಲಿಯಿಂದ ಜೈಪುರದ ನಡುವಿನ ಪ್ರಯಾಣದ ಅವಧಿಯನ್ನು ಐದು ತಾಸುಗಳಿಂದ ಮೂರುವರೆ ತಾಸುಗಳಿಗೆ ಇಳಿಸಲಿದೆ. ಅಲ್ಲದೆ ಸಮಗ್ರ ಪ್ರದೇಶದ ಆರ್ಥಿಕ ಅಭಿವೃದ್ಧಿಗೂ ಉತ್ತೇಜನ ದೊರೆಯುವ ನಿರೀಕ್ಷೆಯಿದೆ .
ದೌಸಾದ ಧನಾವರ್ ಗ್ರಾಮದಲ್ಲಿ ಮೊದಲ ಹಂತದ ಎಕ್ಸ್ಪ್ರೆಸ್ವೇ ಉದ್ಘಾಟನೆಯ ಬಳಿಕ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ, ಮೂಲಸೌಕರ್ಯಗಳ ಮೇಲಿನ ಹೂಡಿಕೆಯು ಇನ್ನಷ್ಟು ಹೂಡಿಕೆಗಳನ್ನು ತಂದುಕೊಡುತ್ತದೆ ಎಂಬುದು ಅಧ್ಯಯನಗಳು ತೋರಿಸಿಕೊಟ್ಟಿವೆ ಎಂದರು.
‘‘ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ನಮ್ಮ ಮಂತ್ರವಾಗಿದ್ದು, ಅದನ್ನು ಅನುಸರಿಸುವ ಮೂಲಕ ಸಮರ್ಥ ಭಾರತವನ್ನು ರೂಪಿಸಲಿದ್ದೇವೆ .ಈ ಎಕ್ಸ್‌ಪ್ರೆಸ್ ವೇ ಅಭಿವೃದ್ಧಿಹೊಂದುತ್ತಿರುವ ಭಾರತದ ಭವ್ಯ ಚಿತ್ರಣವನ್ನು ನೀಡುತ್ತಿದೆ’’ ಎಂದು ಪ್ರಧಾನಿ ತಿಳಿಸಿದರು.
ಸರಕಾರವು ಹೆದ್ದಾರಿ ಯೋಜನೆಗಳು, ಬಂದರುಗಳು, ರೈಲ್ವೆ, ಆಪ್ಟಿಕಲ್ ಫೈಬರ್ಗಳಿಗೆ ಹೂಡಿಕೆ ಮಾಡುತ್ತಿವೆ ಹಾಗೂ ವೈದ್ಯಕೀಯ ಕಾಲೇಜ್ಗಳನ್ನು ತೆರೆಯುತ್ತಿದೆ. ಇವು ವ್ಯಾಪಾರಿಗಳು, ಸಣ್ಣ ಅಂಗಡಿಗಳ ಮಾಲಕರು ಹಾಗೂ ಕೈಗಾರಿಕೆಗಳಿಗೆ ಶಕ್ತಿಯನ್ನು ತುಂಬುತ್ತವೆ .ಎಕ್ಸ್‌ಪ್ರೆಸ್ ವೇನ ಸುತ್ತಮುತ್ತ ಗ್ರಾಮೀಣ ‘ಹಟ್ಟಿ’ಗಳನ್ನು ಅಭಿವೃದ್ಧಿಪಡಿಸಲಾಗುವುದು. ಅಲ್ಲಿ ಸ್ಥಳೀಯ ಕರಕುಶಲಕರ್ಮಿಗಳು ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಬಹುದಾಗಿದೆ ಎಂದವರು ತಿಳಿಸಿದರು.
ನೂತನ ಎಕ್ಸ್‌ಪ್ರೆಸ್ ವೇನಿಂದಾಗಿ ಸಾರಿಸ್ಕಾ, ಕಿಯೊಲಾದೆವೊ ಹಾಗೂ ರಣಥಂಬೋರ್ ರಾಷ್ಟ್ರೀಯ ಉದ್ಯಾನವನಗಳು ಹಾಗೂ ಜೈಪುರ ಹಾಗೂ ಅಜ್ಮೀರ್ನಂತಹ ನಗರಗಳಿಗೆ ಪ್ರಯೋಜನವಾಗಲಿದೆ ಎಂದು ಪ್ರಧಾನಿ ಹೇಳಿದರು. ಈಗಾಗಲೇ ರಾಜಸ್ತಾನವು ಪ್ರವಾಸೋದ್ಯಮಕ್ಕೆ ಹೆಸರಾಗಿದೆ. ಈ ನೂತನ ಮೂಲಸೌಕರ್ಯಯೋಜನೆಯಿಂದಾಗಿ ಈ ರಾಜ್ಯದ ಪ್ರವಾಸೋದ್ಯಮ ವಲಯದ ಆಕರ್ಷಣೆ ಇನ್ನಷ್ಟು ಹೆಚ್ಚಾಗಲಿದೆ ಎಂದರು ಮೋದಿ ಹೇಳಿದರು.