ಅಮೆಝಾನ್ ಪಾರ್ಸೆಲ್‌ನಂತೆ ರಾಜ್ಯಪಾಲರ ನಿರ್ಗಮನ: ಉದ್ಧವ್ ಠಾಕ್ರೆ

Update: 2023-02-13 03:08 GMT

ಮುಂಬೈ/ ನಾಸಿಕ್: ಮಹಾರಾಷ್ಟ್ರ ರಾಜ್ಯಪಾಲ ಬಿ.ಎಸ್.ಕೋಶಿಯಾರಿ ಅವರ ನಿರ್ಗಮನ ಮಹಾರಾಷ್ಟ್ರಕ್ಕೆ ಸಂದ ಜಯ ಎಂದು ಶಿವನೇನೆ (ಯುಟಿಬಿ) ಮುಖಂಡ ಆದಿತ್ಯಠಾಕ್ರೆ ಬಣ್ಣಿಸಿದ್ದಾರೆ. ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, "ಶಿವಾಜಿ ಮಹಾರಾಜ್ ಅವರನ್ನು ಅವಮಾನಿಸಿದವರು ಅಮೆಝಾನ್‌ನಿಂದ ಬಂದ ಪಾರ್ಸೆಲ್‌ನಂತೆ ವಾಪಸ್ಸಾಗಿದ್ದಾರೆ" ಎಂದು ಲೇವಡಿ ಮಾಡಿದ್ದಾರೆ.

ಹೊಸ ರಾಜ್ಯಪಾಲ ಮೇಶ್ ಬಿಯಾಸ್ ಅವರ ವಿರುದ್ಧವೂ ಟೀಕಾಪ್ರಹಾರ ನಡೆಸಿರುವ ಶಿವಸೇನೆ ಸಂಸದ ಸಂಜಯ್ ರಾವತ್, "ರಮೇಶ್ ಬಿಯಾಸ್ ಅವರು ತಮ್ಮ ಹೆಸರಿನ ಜತೆಗೆ ಬಿಯಾಸ್ ಎಂಬ ಪದ ಹೊಂದಿದ್ದಾರೆಯೇ ಅಥವಾ ಬಯಾಸ್ (ಪಕ್ಷಪಾತ) ಹೊಂದಿದ್ದಾರೆಯೇ ಎನ್ನುವುದು ಗೊತ್ತಿಲ್ಲ" ಎಂದು ಹೇಳಿದ್ದಾರೆ. ಬಿಯಾಸ್ ರಾಜಭವನವನ್ನು ಹಿಂದಿನ ರಾಜ್ಯಪಾಲರಂತೆ ಬಿಜೆಪಿ ಕಚೇರಿಯಾಗಿ ಪರಿವರ್ತಿಸುವುದಿಲ್ಲ ಅಥವಾ ಬಿಜೆಪಿ ಕಾರ್ಯಕರ್ತನಾಗಿ ಕಾರ್ಯ ನಿರ್ವಹಿಸುವುದಿಲ್ಲ ಎಂಬ ನಿರೀಕ್ಷೆ ನಮ್ಮದು ಎಂದು ವಿವರಿಸಿದ್ದಾರೆ.

ತೀರಾ ವಿಳಂಬವಾಗಿಯಾದರೂ ಕೋಶಿಯಾರಿ ಅವರ ನಿರ್ಗಮನವಾಗಿದೆ. ರಾಜ್ಯಪಾಲರಾಗಿ ಅವರು ತೆಗೆದುಕೊಂಡ ನಿರ್ಧಾರಗಳ ಬಗ್ಗೆ ತನಿಖೆಯಾಗಬೇಕು ಎಂದು ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಬಣ್ಣಿಸಿದ್ದಾರೆ.

ಕೇಂದ್ರ ಸರ್ಕಾರ ಕೋಶಿಯಾರಿ ಅವರನ್ನು ವಜಾಗೊಳಿಸುವ ಬದಲು ಅವರ ರಾಜೀನಾಮೆ ಆಂಗೀಕರಿಸುವ ಮೂಲಕ ಅವರನ್ನು ಗೌರವಿಸಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ನಾನಾ ಪಟೋಲೆ ಹೇಳಿದ್ದಾರೆ.

ಛತ್ರಪತಿ ಶಿವಾಜಿ ಮಹಾರಾಜರ ವಂಶಸ್ಥರಾದ ರಾಜ್ಯಸಭಾ ಸಂಸದ ಉದಯರಾಜೆ ಬೋಸ್ಲೆ ಮತ್ತು ಮಾಜಿ ರಾಜ್ಯಸಭಾ ಸದಸ್ಯ ಸಂಭಾಜಿರಾಜೆ ಛತ್ರಪತಿ ಕೂಡಾ ಕೋಶಿಯಾರಿ ರಾಜೀನಾಮೆಯನ್ನು ಸ್ವಾಗತಿಸಿದ್ದಾರೆ. ರಾಜ್ಯದ ಐತಿಹಾಸಿಕ ವ್ಯಕ್ತಿಗಳನ್ನು ಟೀಕಿಸುವ ಮೂಲಕ ಇನ್ನಾದರೂ ವಿವಾದದಲ್ಲಿ ಸಿಲುಕಿಕೊಳ್ಳದಿರಲಿ ಎಂದು ಆಶಿಸಿದ್ದಾರೆ.

Similar News