ಹಿಂಡನ್‌ಬರ್ಗ್ ವರದಿ: ಅದಾನಿ ಗ್ರೂಪ್ ವಿರುದ್ಧ ತನಿಖೆಗೆ ಕೋರಿ ಸುಪ್ರೀಂ ಮೆಟ್ಟಿಲೇರಿದ ಕಾಂಗ್ರೆಸ್ ನಾಯಕಿ
ಹೊಸದಿಲ್ಲಿ, ಫೆ.14: ಅಮೆರಿಕದ ಹೂಡಿಕೆ ಸಂಸ್ಥೆ ಹಿಂಡನ್‌ಬರ್ಗ್ ರೀಸರ್ಚ್ ನ ವರದಿಯ ಹಿನ್ನೆಲೆಯಲ್ಲಿ ಅದಾನಿ ಗ್ರೂಪ್ ವಿರುದ್ಧ ತನಿಖೆಯನ್ನು ಕೋರಿ ಮಧ್ಯಪ್ರದೇಶ ಮಹಿಳಾ ಕಾಂಗ್ರೆಸ್ನ ಪ್ರಧಾನ ಕಾರ್ಯದರ್ಶಿ ಡಾ.ಜಯಾ ಠಾಕೂರ್ ಅವರು ಮಂಗಳವಾರ ಸರ್ವೋಚ್ಚ ನ್ಯಾಯಾಲಯದಲ್ಲಿ ರಿಟ್ ಅರ್ಜಿಯನ್ನು ಸಲ್ಲಿಸಿದ್ದಾರೆ. ಅದಾನಿ ಗ್ರೂಪ್ ತನ್ನ ಕಂಪನಿಗಳ ಶೇರುಗಳ ಮೌಲ್ಯವನ್ನು ಕೃತಕವಾಗಿ ಹೆಚ್ಚಿಸಿದೆ ಮತ್ತು ಲೆಕ್ಕಪತ್ರಗಳ ವಂಚನೆಯಲ್ಲಿ ತೊಡಗಿಕೊಂಡಿದೆ ಎಂದು ಹಿಂಡನ್‌ಬರ್ಗ್ ತನ್ನ ವರದಿಯಲ್ಲಿ ಆರೋಪಿಸಿದೆ.
ಅದಾನಿ ಎಂಟರ್‌ಪ್ರೈಸಸ್‌ನ ಪ್ರತಿ ಶೇರಿನ ಮೌಲ್ಯ ಸೆಕೆಂಡರಿ ಮಾರುಕಟ್ಟೆಯಲ್ಲಿ ಸುಮಾರು 1,800 ರೂ.ಗಳಿದ್ದಾಗ ಕಂಪನಿಯ ಎಫ್ಪಿಒದಲ್ಲಿ ಪ್ರತಿ ಶೇರಿಗೆ 3,200 ರೂ.ಬೆಲೆಯಲ್ಲಿ ಸಾರ್ವಜನಿಕ ಹಣದ ಬೃಹತ್ ಮೊತ್ತವನ್ನು ಹೂಡಿಕೆ ಮಾಡಿದ್ದಕ್ಕಾಗಿ ಎಲ್ಐಸಿ ಮತ್ತು ಎಸ್ಬಿಐ ಪಾತ್ರದ ಬಗ್ಗೆಯೂ ತನಿಖೆ ನಡೆಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.
ಅದಾನಿ ಮತ್ತು ಅವರ ಸಹವರ್ತಿಗಳು ಲಕ್ಷಾಂತರ ಕೋಟಿ ರೂ. ಸಾರ್ವಜನಿಕ ಹಣವನ್ನು ವಂಚಿಸಿದ್ದಾರೆ ಎಂದು ತನ್ನ ಅರ್ಜಿಯಲ್ಲಿ ಆರೋಪಿಸಿರುವ ಠಾಕೂರ್, ಸರ್ವೋಚ್ಚ ನ್ಯಾಯಾಲಯದ ಹಾಲಿ ನ್ಯಾಯಾಧೀಶರ ಮೇಲ್ವಿಚಾರಣೆ ಮತ್ತು ನಿಗಾದಡಿ ಸಿಬಿಐ, ಈ.ಡಿ., ಡಿಆರ್ಐ, ಸೆಬಿ, ಆರ್ಬಿಐ, ಎಸ್ಎಫ್ಐಒ ದಂತಹ ತನಿಖಾ ಸಂಸ್ಥೆಗಳ ಮೂಲಕ ತನಿಖೆಯನ್ನು ನಡೆಸಬೇಕು ಎಂದು ಕೋರಿದ್ದಾರೆ.
ಶಾರ್ಟ್-ಸೆಲ್ಲಿಂಗ್ ಮೂಲಕ ಶೇರು ಮಾರುಕಟ್ಟೆಗಳ ಕುಸಿತಕ್ಕೆ ಕಾರಣವಾಗಿರುವುದಕ್ಕಾಗಿ ಹಿಂಡನ್ಬರ್ಗ್ ರೀಸರ್ಚ್ ವಿರುದ್ಧ ತನಿಖೆಯನ್ನು ಕೋರಿ ಸಲ್ಲಿಸಲಾಗಿರುವ ಎರಡು ಇತರ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಸರ್ವೋಚ್ಚ ನ್ಯಾಯಾಲಯವು ಸದ್ಯ ಪರಿಶೀಲಿಸುತ್ತಿದೆ ಎನ್ನುವುದನ್ನು ಇಲ್ಲಿ ಗಮನಿಸಬಹುದು.
ಠಾಕೂರ್ ಮಂಗಳವಾರ ಸಲ್ಲಿಸಿರುವ ಅರ್ಜಿಯಲ್ಲಿ ಅದಾನಿ ಗ್ರೂಪ್ನ ವಿರುದ್ಧ ದುರ್ವವ್ಯಹಾರದ ಹಲವಾರು ಆರೋಪಗಳನ್ನು ಮಾಡಲಾಗಿದೆ. ವಿವಿಧ ತೆರಿಗೆ ಸ್ವರ್ಗಗಳಲ್ಲಿ ತಾವು ಸ್ಥಾಪಿಸಿರುವ ಹಲವಾರು ವಿದೇಶಿ ಮುಖವಾಡ ಕಂಪನಿಗಳನ್ನು ಬಳಸಿಕೊಂಡು ಗೌತಮ ಅದಾನಿ,ಅವರ ಸೋದರ ಮತ್ತು ಸಹವರ್ತಿಗಳು ಬೃಹತ್ ಪ್ರಮಾಣದ ಅಕ್ರಮ ವರ್ಗಾವಣೆಯಲ್ಲಿ ತೊಡಗಿಕೊಂಡಿದ್ದಾರೆ ಎನ್ನವುದನ್ನು ಹಿಂಡನ್ಬರ್ಗ್ ವರದಿಯು ಬಹಿರಂಗಗೊಳಿಸಿದೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ.
ಅದಾನಿ ಗ್ರೂಪ್ ಕಂಪನಿಗಳಲ್ಲಿ ಹೂಡಿಕೆಗಳನ್ನು ಮಾಡುವ ಮೂಲಕ ಎಲ್ಐಸಿ ಮತ್ತು ಎಸ್ಬಿಐ ಹೂಡಿಕೆದಾರರು ಮತ್ತು ಜನಸಾಮಾನ್ಯರತ್ತ ತಮ್ಮ ಕರ್ತವ್ಯಗಳನ್ನು ನಿರ್ವಹಿಸಲು ವಿಫಲಗೊಂಡಿವೆಯೇ ಎಂಬ ಬಗ್ಗೆಯೂ ತನಿಖೆ ಅಗತ್ಯವಾಗಿದೆ ಎಂದು ಅರ್ಜಿಯಲ್ಲಿ ತಿಳಿಸಿರುವ ಠಾಕೂರ್, ತಾನು ಸ್ವತಃ ಎಲ್ಐಸಿಯಲ್ಲಿ ಕೆಲವು ಹೂಡಿಕೆಗಳನ್ನು ಮತ್ತು ಎಸ್ಬಿಐನಲ್ಲಿ ಖಾತೆಯೊಂದನ್ನು ಹೊಂದಿರುವುದಾಗಿ ಹೇಳಿದ್ದಾರೆ.
ಅದಾನಿ ಒಡೆತನದ ಗುಜರಾತಿನ ಮುಂದ್ರಾ ಬಂದರಿನಲ್ಲಿ ಹಲವಾರು ಸಲ ಬೃಹತ್ ಪ್ರಮಾಣದಲ್ಲಿ ಮಾದಕ ದ್ರವ್ಯಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಆದರೂ ಎನ್ಸಿಬಿ ಸೇರಿದಂತೆ ಯಾವುದೇ ತನಿಖಾ ಸಂಸ್ಥೆಯು ಅದಾನಿ ಪೋರ್ಟ್ಸ್ ಲಿ.ನ ಪಾತ್ರದ ಕುರಿತು ವಿಚಾರಣೆ ನಡೆಸಲು ಮುತುವರ್ಜಿ ವಹಿಸಲಿಲ್ಲ ಎಂದು ಠಾಕೂರ್ ತನ್ನ ಅರ್ಜಿಯಲ್ಲಿ ಆರೋಪಿಸಿದ್ದಾರೆ.