ಒಂದು ಸಿದ್ಧಾಂತ, ಒಬ್ಬ ವ್ಯಕ್ತಿ ದೇಶ ಕಟ್ಟಲು ಅಥವಾ ಒಡೆಯಲು ಸಾಧ್ಯವಿಲ್ಲ: ಮೋಹನ್ ಭಾಗ್ವತ್

Update: 2023-02-15 02:02 GMT

ನಾಗ್ಪುರ: ವಿಶ್ವದಲ್ಲಿ "ಉತ್ತಮ ದೇಶಗಳು" ಬಹುಮುಖಿ ಚಿಂತನೆಗಳನ್ನು ಹೊಂದಿದ್ದು, ಒಂದು ಸಿದ್ಧಾಂತ ಅಥವಾ ಒಬ್ಬ ವ್ಯಕ್ತಿಯಿಂದ ದೇಶ ಕಟ್ಟಲು ಅಥವಾ ಒಡೆಯಲು ಸಾಧ್ಯವಿಲ್ಲ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರೆಸ್ಸೆಸ್) ಮುಖ್ಯಸ್ಥ ಮೋಹನ್ ಭಾಗ್ವತ್ ಅಭಿಪ್ರಾಯಪಟ್ಟಿದ್ದಾರೆ.

ನಾಗ್ಪುರದಲ್ಲಿ ನಡೆದ ಸಮಾರಂಭವೊಂದರಲ್ಲಿ ಮಾತನಾಡಿದ ಅವರು, "ಒಬ್ಬ ವ್ಯಕ್ತಿ, ಒಂದು ಚಿಂತನೆ, ಒಂದು ಗುಂಪು, ಒಂದು ಸಿದ್ಧಾಂತ, ದೇಶವನ್ನು ಕಟ್ಟಲು ಅಥವಾ ಒಡೆಯಲು ಸಾಧ್ಯವಿಲ್ಲ. ವಿಶ್ವದ ಎಲ್ಲ ಒಳ್ಳೆಯ ದೇಶಗಳು ಎಲ್ಲ ಬಗೆಯ ಯೋಚನೆಗಳನ್ನು ಹೊಂದಿವೆ. ಅವರಲ್ಲಿ ಎಲ್ಲ ಬಗೆಯ ವ್ಯವಸ್ಥೆಗಳೂ ಇವೆ; ಅವರು ಬಹುಮುಖಿ ವ್ಯವಸ್ಥೆಗಳ ಮೂಲಕ ಬೆಳೆಯುತ್ತಿದ್ದಾರೆ" ಎಂದು ವಿಶ್ಲೇಷಿಸಿದರು.

ನಾಗ್ಪುರದ ಹಿಂದಿನ ರಾಜಕುಟುಂಬವಾದ ಬೋಸ್ಲೆ ಕುಟುಂಬದ ಬಗ್ಗೆ ಮಾತನಾಡಿದ ಅವರು, ಅರೆಸ್ಸೆಸ್ ಸಂಸ್ಥಾಪಕ ಕೆ.ಬಿ.ಹೆಡಗೇವಾರ್ ಅವರ ಕಾಲದಿಂದಲೇ ಈ ಕುಟುಂಬ ಆರೆಸ್ಸೆಸ್ ಜತೆಗೆ ನಂಟು ಹೊಂದಿದೆ. ಛತ್ರಪತಿ ಶಿವಾಜಿ ಸ್ವರಾಜ್ಯವನ್ನು ಕಟ್ಟಿ, ದಕ್ಷಿಣ ಭಾರತವನ್ನು ಆ ಕಾಲದ ದೌರ್ಜನ್ಯಗಳಿಂದ ಮುಕ್ತಗೊಳಿಸಿದರೆ, ಪೂರ್ವ ಮತ್ತು ಉತ್ತರ ಭಾರತವನ್ನು ನಾಗ್ಪುರ ಬೋಸ್ಲೆ ಕುಟುಂಬ ದೌರ್ಜನ್ಯಗಳಿಂದ ಮುಕ್ತಗೊಳಿಸಿತು ಎಂದು ಭಾಗ್ವತ್ ಬಣ್ಣಿಸಿದರು.

Similar News