×
Ad

ಬಿಹಾರದಲ್ಲಿ ಮತ್ತೆ ಜೆಡಿಯುಗೆ ಬಿಜೆಪಿ ಗಾಳ? ನಿತೀಶ್‌ಗೆ ಕರೆ ಮಾಡಿದ ಅಮಿತ್ ಶಾ

Update: 2023-02-15 08:20 IST

ಪಾಟ್ನಾ: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೋಮವಾರ ರಾತ್ರಿ ತಮಗೆ ಕರೆ ಮಾಡಿ ಹೊಸ ರಾಜ್ಯಪಾಲರ ನೇಮಕದ ಬಗ್ಗೆ ಮಾಹಿತಿ ನೀಡಿದ್ದರು ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಮಂಗಳವಾರ ಬಹಿರಂಗಪಡಿಸಿದ್ದಾರೆ. ಇದು ಹಲವು ರಾಜಕೀಯ ಊಹಾಪೋಹಗಳಿಗೆ ಕಾರಣವಾಗಿದ್ದು, ಆರು ತಿಂಗಳಿಂದ ಬೇರ್ಪಟ್ಟಿರುವ ಬಿಜೆಪಿ ತನ್ನ ಹಿಂದಿನ ಮಿತ್ರಪಕ್ಷದತ್ತ ಮತ್ತೆ ಒಲವು ತೋರುತ್ತಿದೆಯೇ ಎಂಬ ಚರ್ಚೆಗಳು ಆರಂಭವಾಗಿವೆ.

2022ರ ಆಗಸ್ಟ್‌ನಲ್ಲಿ ನಿತೀಶ್ ಅವರು ಬಿಜೆಪಿ ಜತೆಗಿನ ಸಖ್ಯ ಕಡಿದುಕೊಂಡು ಕಾಂಗ್ರೆಸ್- ಆರ್‌ಜೆಡಿ ಮೈತ್ರಿಕೂಟ ಸೇರುವ ಮುನ್ನ ನಿತೀಶ್-ಶಾ ದೂರವಾಣಿಯಲ್ಲಿ ಪರಸ್ಪರ ಮಾತನಾಡಿದ್ದರು. ಈ ಸಂಭಾಷಣೆಯಲ್ಲಿ ನಿತೀಶ್ ಕುಮಾರ್ ಅವರು, ಶಾ ಅವರಿಗೆ ಆತಂಕಪಡುವಂಥದ್ದು ಏನೂ ಇಲ್ಲ ಎಂದು ಭರವಸೆ ನೀಡಿ ಮರುದಿನವೇ ಎನ್‌ಡಿಎ ತೆಕ್ಕೆಯಿಂದ ನಿರ್ಗಮಿಸಿದ್ದರು.

ಸಮಾಧಾನ್ ಯಾತ್ರೆ ವೇಳೆ ಮಾಧ್ಯಮದ ಜತೆ ಮಾತನಾಡಿದ ನಿತೀಶ್, ಅಮಿತ್ ಶಾ ಅವರ ಕರೆಯನ್ನು ಬಹಿರಂಗಪಡಿಸಿದರು. ಇದರಲ್ಲಿ ಭಿನ್ನವಾಗಿ ಅರ್ಥೈಸುವಂಥದ್ದು ಏನೂ ಇಲ್ಲ ಎಂಬುದನ್ನು ಮನವರಿಕೆ ಮಾಡುವುದು ಜೆಡಿಯು ಸಹೋದ್ಯೋಗಿಗಳಿಗೆ ಬಿಟ್ಟದ್ದು ಎಂದು ಅವರು ನುಡಿದರು. "ಇದು ಕೇವಲ ಶಿಷ್ಟಾಚಾರದ ಕರೆ... ನಿತೀಶ್ ಸದಾ ಮೈತ್ರಿ ಧರ್ಮ ಪಾಲಿಸುತ್ತಾ ಬಂದಿದ್ದಾರೆ. ಯಾರೊಂದಿಗೆ ಮೈತ್ರಿ ಹೊಂದಿದ್ದಾರೆಯೋ ಅವರ ಜತೆ ಸಂಪೂರ್ಣ ಪ್ರಾಮಾಣಿಕತೆಯಿಂದ ಇದ್ದಾರೆ" ಎಂದು ಜೆಡಿಯು ವಕ್ತಾರ ರಣಬೀರ್ ನಂದನ್ ಹೇಳಿದ್ದಾರೆ.

ಬಿಜೆಪಿ ಮುಕ್ತ ಭಾರತಕ್ಕೆ ಏಳು ಪಕ್ಷಗಳ ಮಹಾ ಮೈತ್ರಿ ರೂಪಿಸಲು ನಿತೀಶ್ ಕುಮಾರ್ ಬದ್ಧರಾಗಿದ್ದಾರೆ ಎಂದು ಆರ್‌ಜೆಡಿ ಹೇಳಿಕೊಂಡಿದೆ.

ಆದಾಗ್ಯೂ "ರಾಜ್ಯ ಸರ್ಕಾರದ ಜತೆ ಸಂಘರ್ಷಕ್ಕೆ ಯಾವುದೇ ಕಾರಣಗಳಿಲ್ಲ" ಎಂದು ನೂತನ ರಾಜ್ಯಪಾಲ ರಾಜೇಂದ್ರ ಅರ್ಲೇಕರ್ ಅವರು ಹೇಳಿಕೆ ನೀಡಿರುವುದನ್ನು ಬಿಜೆಪಿಯ ಮರುಮೈತ್ರಿ ಮುನ್ಸೂಚನೆ ಎಂದು ವಿಶ್ಲೇಷಿಸಲಾಗುತ್ತಿದೆ.

Similar News