ಅಮೂಲ್ ಡೇರಿ: ಎರಡು ಉನ್ನತ ಹುದ್ದೆಗಳು ಬಿಜೆಪಿ ತೆಕ್ಕೆಗೆ
ವಡೋದರ/ ಆನಂದ್: ಅಮೂಲ್ ಡೇರಿ(Amul Dairy) ಎಂದೇ ಪ್ರಸಿದ್ಧವಾಗಿರುವ ಕೈರಾ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಎರಡೂ ಉನ್ನತ ಹುದ್ದೆಗಳು ಇದೀಗ ಬಿಜೆಪಿ ಪಾಲಾಗಿವೆ. ಸುಧೀರ್ಘ ಅವಧಿಗೆ ಅಧ್ಯಕ್ಷರಾಗಿದ್ದ ರಾಮ್‌ಸಿನ್ಹ ಪರ್ಮಾರ್ ಮತ್ತು ಉಪಾಧ್ಯಕ್ಷ ರಾಜೇಂದ್ರಸಿಂಗ್ ಪರ್ಮಾರ್ ಮಂಗಳವಾರ ನಡೆದ ಆಡಳಿತ ಮಂಡಳಿ ಚುನಾವಣೆಯಲ್ಲಿ ಪರಾಭವಗೊಂಡಿದ್ದು, ಈ ಮೂಲಕ ಇವರ ಹದಿನೇಳು ವರ್ಷದ ಅಧಿಕಾರ ಕೊನೆಗೊಂಡಿದೆ.
ರಾಮ್‌ಸಿನ್ಹ ಅವರ ಹುದ್ದೆಗೆ ಖೇಡಾ ಬಿಜೆಪಿ ಜಿಲ್ಲಾಧ್ಯಕ್ಷ ವಿಪುಲ್ ಪಟೇಲ್ ಆಯ್ಕೆಯಾಗಿದ್ದಾರೆ. ರಾಮ್‌ಸಿನ್ಹ ಅವರು ಭಾರತದ ಅತ್ಯಂತ ಹಾಲು ಸಹಕಾರ ಸಂಘದ ಅಧ್ಯಕ್ಷರಾಗಿ ಎರಡು ದಶಕಗಳ ಕಾಲ ಆಡಳಿತ ನಡೆಸಿದ್ದರು. ಕಾಂಗ್ರೆಸ್‌ನ ಮಾಜಿ ಶಾಸಕ ರಾಜೇಂದ್ರಸಿನ್ಹ ಅವರು ಕಂತಿ ಸೋಧಾ ಪರ್ಮಾರ್ ಅವರ ಎದುರು ಪರಾಭವಗೊಂಡಿದ್ದಾರೆ. ಕಂತಿ ಸೋಧಾ ಕೂಡಾ ಮಾಜಿ ಕಾಂಗ್ರೆಸ್ ಶಾಸಕರಾಗಿದ್ದು, ಇತ್ತೀಚೆಗೆ ಬಿಜೆಪಿ ಸೇರಿದ್ದರು.
ರಾಜೇಂದ್ರ ಸಿಂಗ್ ಅವರ ಸೋಲು ಕಾಂಗ್ರೆಸ್‌ಗೆ ತೀವ್ರ ಹಿನ್ನಡೆ ಎಂದು ವಿಶ್ಲೇಷಿಸಲಾಗುತ್ತಿದೆ. ಗುಜರಾತ್ ಹೈನುಗಾರಿಕೆ ಸಹಕಾರ ವಲಯದಲ್ಲಿ ಅಮೂಲ್ ಡೈರಿ ಕಾಂಗ್ರೆಸ್‌ನ ಭದ್ರಕೋಟೆಯಾಗಿತ್ತು. ಆದರೆ ಗುಜರಾತ್ ಕೋ ಆಪರೇಟಿವ್ ಮಿಲ್ಕ್ ಮಾರ್ಕೆಟಿಂಗ್ ಫೆಡರೇಷನ್‌ನ ಸದಸ್ಯತ್ವ ಹೊಂದಿರುವ 17 ಸಂಘಗಳಲ್ಲಿ ಇದೀಗ ಬಿಜೆಪಿ ಮೇಲುಗೈ ಸಾಧಿಸಿದೆ.
ಆನಂದ್‌ನಲ್ಲಿ ಕೇಂದ್ರ ಕಚೇರಿ ಹೊಂದಿರುವ ಅಮೂಲ್ ಡೈರಿಯಲ್ಲಿ ಕಾಂಗ್ರೆಸ್ ಬೆಂಬಲಿತ ಐದು ಮಂದಿ ಸದಸ್ಯರು ಬಿಜೆಪಿ ಬೆಂಬಲಿತ ಅಭ್ಯರ್ಥಿಗಳ ವಿರುದ್ಧ ಸೋಲು ಅನುಭವಿಸಿದ್ದಾರೆ. ಕಳೆದ ತಿಂಗಳು ಸೋಧಾ ಪರ್ಮಾರ್ ಬಿಜೆಪಿ ಸೇರಿದ್ದಾರೆ. ಕಾಂಗ್ರೆಸ್ 2020ರ ಚುನಾವಣೆಯಲ್ಲಿ 11 ಸ್ಥಾನಗಳ ಪೈಕಿ ಎಂಟನ್ನು ಗೆದ್ದುಕೊಂಡಿತ್ತು.