ಮಾಜಿ CJI ರಂಜನ್ ಗೊಗೊಯಿಯಿಂದ ರಾಜ್ಯಸಭೆಯಲ್ಲಿ ಚಟುವಟಿಕೆ ಕೊರತೆ, ಕಳಪೆ ಹಾಜರಾತಿ: ವರದಿ
ಹೊಸದಿಲ್ಲಿ: ಮುಖ್ಯ ನ್ಯಾಯಾಧೀಶರಾಗಿ ನಿವೃತ್ತರಾದ ನಂತರ ರಾಜ್ಯಸಭೆ ಸದಸ್ಯರಾಗಿ ನೇಮಕಗೊಂಡಿರುವ ನ್ಯಾ. ರಂಜನ್ ಗೊಗೊಯಿ, ಈವರೆಗೆ ರಾಜ್ಯಸಭೆಯಲ್ಲಿ ಶೂನ್ಯ ಪ್ರಶ್ನೆ ಕೇಳಿದ್ದಾರೆ ಎಂಬ ಸಂಗತಿ ರಾಜ್ಯಸಭೆಯ ಅಧಿಕೃತ ಅಂತರ್ಜಾಲದಲ್ಲಿನ ದತ್ತಾಂಶದಿಂದ ಬಹಿರಂಗಗೊಂಡಿದೆ. ಅಲ್ಲದೆ ಈವರೆಗೆ ಅವರು ಯಾವುದೇ ಖಾಸಗಿ ಮಸೂದೆಯನ್ನು ಮಂಡಿಸಿಲ್ಲ. ಅಂತರ್ಜಾಲ ತಾಣದ "My Participation" ವಿಭಾಗದಲ್ಲಿ ರಂಜನ್ ಗೊಗೊಯಿ ಅವರ ಯಾವುದೇ ಧ್ವನಿಮುದ್ರಿಕೆ ಅಥವಾ ದೃಶ್ಯಕ್ಕೆ ಹುಡುಕಾಟ ನಡೆಸಿದರೆ, "ಯಾವುದೇ ದಾಖಲೆ ದೊರೆಯುವುದಿಲ್ಲ" ಎಂದು ಪ್ರದರ್ಶನವಾಗುತ್ತಿದೆ ಎಂದು indianexpress.com ವರದಿ ಮಾಡಿದೆ.
ಇದರೊಂದಿಗೆ, ರಂಜನ್ ಗೊಗೊಯಿ ಅವರ ವಿದೇಶಾಂಗ ವ್ಯವಹಾರಗಳ ಸ್ಥಾಯಿ ಸಮಿತಿಯ ಸದಸ್ಯರಾಗಿದ್ದಾರೆ ಎಂಬ ಸಂಗತಿಯನ್ನು ಅಂತರ್ಜಾಲ ತಾಣ ಪ್ರದರ್ಶಿಸುತ್ತಿದೆ. ಈ ಕುರಿತು ಶೋಧನೆ ನಡೆಸಿರುವ ಪಿಆರ್‌ಎಸ್ ಸಂಸದೀಯ ಸಂಶೋಧನಾ ಸಂಸ್ಥೆಯು, ರಂಜನ್ ಗೊಗೊಯಿ ಅವರ ಈವರೆಗಿನ ರಾಜ್ಯಸಭಾ ಹಾಜರಾತಿ ಶೇ. 30 ಮಾತ್ರ ಎಂಬ ಅಂಶವನ್ನು ಬಯಲು ಮಾಡಿದೆ. ಹೀಗಿದ್ದೂ, ಸಂಸತ್ತಿನಲ್ಲಿ ಸದಸ್ಯರು ಹಾಜರಾತಿ ಪುಸ್ತಕಕ್ಕೆ ಸಹಿ ಮಾಡುವ ಮೂಲಕ ಸದನಕ್ಕೆ ಹಾಜರಾಗುತ್ತಾರೆ. ಹೀಗಾಗಿ, ಸದಸ್ಯರು ಸದನಕ್ಕೆ ಹಾಜರಾದ ಯಾವುದಾದರೂ ದಿನ ಹಾಜರಾತಿ ಪುಸ್ತಕಕ್ಕೆ ಸಹಿ ಮಾಡದಿರುವ ಸಾಧ್ಯತೆಯೂ ಇದೆ.
ಇದಕ್ಕೂ ಮುನ್ನ ನಿವೃತ್ತಿಯಾದ ನಾಲ್ಕು ತಿಂಗಳ ನಂತರ ಮಾರ್ಚ್ 19, 2020ರಂದು ನ್ಯಾ. ರಂಜನ್ ಗೊಗೊಯಿ ಅವರು ರಾಜ್ಯಸಭಾ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿದ ದಿನ ರಾಜ್ಯಸಭೆಯಲ್ಲಿ ಭಾರಿ ಗದ್ದಲ ನಡೆದು, ವಿರೋಧ ಪಕ್ಷದ ನಾಯಕರು 'ನಾಚಿಕೆಗೇಡು' ಎಂದು ಘೋಷಣೆ ಕೂಗಿದ್ದರು. ಈ ಸಂದರ್ಭದಲ್ಲಿ ಅವರ ರಾಜ್ಯಸಭಾ ನಾಮಕರಣಕ್ಕೆ ಕೆಲವು ನಿವೃತ್ತ ಸುಪ್ರೀಂಕೋರ್ಟ್ ನ್ಯಾಯಾಧೀಶರೂ ಆಕ್ಷೇಪ ವ್ಯಕ್ತಪಡಿಸಿದ್ದರು.
ಇತ್ತೀಚೆಗೆ ಸುಪ್ರೀಂಕೋರ್ಟ್ ನ್ಯಾಯಾಧೀಶ ಹುದ್ದೆಯಿಂದ ನಿವೃತ್ತರಾಗಿದ್ದ ನ್ಯಾ. ಅಬ್ದುಲ್ ನಝೀರ್ ಅವರನ್ನು ಆಂಧ್ರಪ್ರದೇಶದ ರಾಜ್ಯಪಾಲರನ್ನಾಗಿ ನೇಮಿಸಲಾಗಿದೆ. ಅವರು ಅಯೋಧ್ಯೆ ವಿವಾದದ ಕುರಿತು ತೀರ್ಪು ನೀಡಿದ ಐವರು ಸದಸ್ಯರ ಸಾಂವಿಧಾನಿಕ ಪೀಠದ ಓರ್ವ ಸದಸ್ಯರಾಗಿದ್ದರು. ಅಬ್ದುಲ್ ನಝೀರ್ ಅವರನ್ನು ರಾಜ್ಯಪಾಲರನ್ನಾಗಿ ನೇಮಿಸಿರುವ ಕ್ರಮವು ಸಾರ್ವಜನಿಕ ವಲಯದಲ್ಲಿ ತೀವ್ರ ಟೀಕೆಗೆ ಗುರಿಯಾಗಿದೆ. ವಿರೋಧ ಪಕ್ಷಗಳೂ ಈ ಕ್ರಮವನ್ನು ಕಟುವಾಗಿ ಟೀಕಿಸಿದ್ದು, ಪ್ರಮುಖ ವಿರೋಧ ಪಕ್ಷವಾದ ಕಾಂಗ್ರೆಸ್, "ಈ ಕ್ರಮವು ತೀವ್ರ ಅಧಃಪತನಕಾರಿಯಾಗಿದ್ದು, ಸ್ವತಂತ್ರ ನ್ಯಾಯಾಂಗ ವ್ಯವಸ್ಥೆಗೆ ಭಾರಿ ಬೆದರಿಕೆಯಾಗಿದೆ" ಎಂದು ಆಕ್ಷೇಪಿಸಿತ್ತು.