ಮುಂಬೈ: ಸಂಗಾತಿಯನ್ನು ಕೊಂದು ಮೃತದೇಹ ಹಾಸಿಗೆಯಲ್ಲಿ ತುಂಬಿಸಿಟ್ಟು ಪರಾರಿಯಾಗಿದ್ದ ವ್ಯಕ್ತಿಯ ಬಂಧನ
ಮುಂಬೈ: ನಗರದ ನಲಸೋಪರಾದಲ್ಲಿರುವ ನಿವಾಸದಲ್ಲಿ 35 ವರ್ಷದ ತನ್ನ ಸಹ ಜೀವನದ ಸಂಗಾತಿಯನ್ನು ಕೊಂದು ಮೃತದೇಹವನ್ನು ಹಾಸಿಗೆಯಲ್ಲಿ ತುಂಬಿಸಿಟ್ಟು ಪರಾರಿಯಾಗಿದ್ದ 27 ವರ್ಷದ ವ್ಯಕ್ತಿಯನ್ನು ಮಂಗಳವಾರ ಪೊಲೀಸರು ಬಂಧಿಸಿದ್ದಾರೆ. ಪಾಲ್ಘರ್ ಜಿಲ್ಲೆಯ ತುಲಿಂಜ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಪೊಲೀಸರ ಪ್ರಕಾರ, ಆರೋಪಿ ಹಾರ್ದಿಕ್ ಶಾ ನಲಸೋಪರಾದ ಸೀತಾ ಸದನ್ ಸೊಸೈಟಿಯಲ್ಲಿ ವಾಸವಿದ್ದ, ಮೇಘಾ ಧನ್ ಸಿಂಗ್ ಟೊರ್ವಿ ಅವರೊಂದಿಗೆ ಸಹಜೀವನ ನಡೆಸುತ್ತಿದ್ದ. ತಮ್ಮ ರಿಯಲ್ ಎಸ್ಟೇಟ್ ಏಜೆಂಟ್, ಮನೆ ಮಾಲಿಕರು ಹಾಗೂ ಇತರ ನೆರೆಹೊರೆಯವರಿಗೆ ತಾವು ಮದುವೆಯಾಗಿದ್ದೇವೆಂದು ಹೇಳಿದ್ದರು.
ನಲಸೋಪರ ವಿಜಯ್ ನಗರ ಪ್ರದೇಶದಲ್ಲಿರುವ ಫ್ಲ್ಯಾಟ್‌ನಿಂದ ಮೇಘಾ ಅವರ ಕೊಳೆತ ಶವವನ್ನು ವಶಪಡಿಸಿಕೊಂಡ ನಂತರ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ. ಬಾಡಿಗೆ ಮನೆಯ ಒಳಗಿನಿಂದ ಕೆಟ್ಟ ವಾಸನೆ ಬರಲಾರಂಭಿಸಿಸಿದಾಗ ನೆರೆಹೊರೆಯವರು ಪೊಲೀಸರಿಗೆ ದೂರು ನೀಡಿದ್ದರು
ಮೃತದೇಹವನ್ನು ಹಾಸಿಗೆಯಲ್ಲಿ ತುಂಬಿಸಲಾಗಿದೆ. ಕಳೆದ ವಾರದ ಕೊಲೆ ಮಾಡಲಾಗಿದೆ ಎಂದು ಶಂಕಿಸಲಾಗಿದೆ ಎಂದು ಹಿರಿಯ ಇನ್ಸ್‌ಪೆಕ್ಟರ್ ಶೈಲೇಂದ್ರ ನಾಗರ್ಕಾರ್ ಪಿಟಿಐಗೆ ತಿಳಿಸಿದರು.
ತನ್ನ ಸಹಜೀವನದ ಸಂಗಾತಿಯನ್ನು ಕೊಂದ ನಂತರ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದ ಶಾನನ್ನು ಮಂಗಳವಾರ ಪೊಲೀಸರು ಬಂಧಿಸಿದ್ದಾರೆ.
ಆರೋಪಿ ಶಾ ನಿರುದ್ಯೋಗಿಯಾಗಿದ್ದ. ದಂಪತಿಗಳು ಆಗಾಗ್ಗೆ ಜಗಳವಾಡುತ್ತಿದ್ದರು. ಅಂತಹ ಒಂದು ಜಗಳದ ಸಮಯದಲ್ಲಿ ಶಾ , ಮೇಘಾಳನ್ನು ಕೊಂದಿದ್ದಾನೆ ಎಂದು ಅಧಿಕಾರಿ ಹೇಳಿದರು
ಆರೋಪಿ ತನ್ನ ತಂಗಿಗೆ ಹತ್ಯೆಯ ಬಗ್ಗೆ ಸಂದೇಶ ಕಳುಹಿಸಿದ್ದ ಹಾಗೂ ಪರಾರಿಯಾಗುವ ಮೊದಲು ತನ್ನ ಫ್ಲ್ಯಾಟ್‌ನಲ್ಲಿ ಪೀಠೋಪಕರಣಗಳನ್ನು ಮಾರಿದ್ದ.
ಭಾರತೀಯ ದಂಡ ಸಂಹಿತೆ ಸೆಕ್ಷನ್ 302 ರ ಅಡಿಯಲ್ಲಿ ಕೊಲೆ ಪ್ರಕರಣವನ್ನು ನೋಂದಾಯಿಸಲಾಗಿದೆ ಹಾಗೂ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.