ಬಾಲ್ಯವಿವಾಹ ಬಂಧನ ವಿನಾಶಕ್ಕೆ ದಾರಿ: ಅಸ್ಸಾಂ ಸರ್ಕಾರದ ಕ್ರಮಕ್ಕೆ ಹೈಕೋರ್ಟ್ ಅಸಮಾಧಾನ

Update: 2023-02-16 04:56 GMT

ಗುವಾಹತಿ: ಬಾಲ್ಯವಿವಾಹ ವಿರುದ್ಧದ ಕಾರ್ಯಾಚರಣೆ ನೆಪದಲ್ಲಿ ಸಾವಿರಾರು ಮಂದಿಯನ್ನು ಬಂಧಿಸಿರುವ ಅಸ್ಸಾಂ ಸರ್ಕಾರದ ಕ್ರಮಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಗುವಾಹತಿ ಹೈಕೋರ್ಟ್, "ಈ ಬಂಧನ ಕಾರ್ಯಾಚರಣೆ ಜನರ ಖಾಸಗಿ ಬದುಕಿನ ಮೇಲೆ ವಿನಾಶಕಾರಿ ಪರಿಣಾಮ ಬೀರಿದೆ" ಎಂದು ಹೇಳಿದೆ. ಈ ಸಂಬಂಧ ಒಂಬತ್ತು ಮಂದಿಗೆ ನಿರೀಕ್ಷಣಾ ಜಾಮೀನು ನೀಡಿರುವ ಹೈಕೋರ್ಟ್, "ಇವು ಕಸ್ಟಡಿಯಲ್ಲಿ ವಿಚಾರಣೆ ನಡೆಸುವ ಪ್ರಕರಣಗಳಲ್ಲ" ಎಂದು ಸ್ಪಷ್ಟಪಡಿಸಿದೆ.

ಬಾಲ್ಯವಿವಾಹ ಸಂಬಂಧ ಪೋಕ್ಸೋ ಕಾಯ್ದೆಯಡಿ ಮತ್ತು ಅತ್ಯಾಚಾರ ಪ್ರಕರಣ ದಾಖಲಿಸುವುದು ನಿಸ್ಸಂದೇಹವಾಗಿ ವಿಲಕ್ಷಣ ಕ್ರಮ" ಎಂದು ನ್ಯಾಯಮೂರ್ತಿ ಸುಮನ್ ಶ್ಯಾಮ್ ಮೌಖಿಕವಾಗಿ ಅಭಿಪ್ರಾಯಪಟ್ಟರು. "ಆರೋಪಿಗಳಲ್ಲಿ ಮಕ್ಕಳಿದ್ದಾರೆ; ಕುಟುಂಬದ ಸದಸ್ಯರಿದ್ದಾರೆ... ವೃದ್ಧರಿದ್ದಾರೆ... ಖಂಡಿತವಾಗಿಯೂ ಇದು ಕೆಟ್ಟ ಯೋಚನೆ" ಎಂದು ಅವರು ಸ್ಪಷ್ಟಪಡಿಸಿದರು.

"ನಾವು ಕಾನೂನಿನ ಪ್ರಕಾರ ಮುಂದುವರಿಯುತ್ತೇವೆ. ನಾವು ಹೇಳುವುದು ಏನೂ ಇಲ್ಲ. ತಪ್ಪಿತಸ್ಥರೆಂದು ನಿಮಗೆ ಕಂಡುಬಂದಲ್ಲಿ ಆರೋಪಪಟ್ಟಿ ಸಲ್ಲಿಸಿ. ಅತ ಅಥವಾ ಆಕೆ ವಿಚಾರಣೆ ಎದುರಿಸಲಿ. ಅವರು ಅಪರಾಧಿಗಳಾದಲ್ಲಿ ಶಿಕ್ಷೆ ಅನುಭವಿಸಲಿ" ಎಂದು ನ್ಯಾಯಮೂರ್ತಿ ನುಡಿದರು.

ನ್ಯಾಯಾಲಯದ ಮೊರೆ ಹೋದ ಒಂಬತ್ತು ಮಂದಿಗೆ ಮಧ್ಯಂತರ ಜಾಮೀನು ಮಂಜೂರು ಮಾಡಿದ ಅವರ, "ಕಾನೂನು ಉಲ್ಲಂಘಿಸಿ ವಿವಾಹ ನೆರವೇರಿಸಿದರೆ ಕಾನೂನು ತನ್ನದೇ ಕ್ರಮ ಕೈಗೊಳ್ಳುತ್ತದೆ..ನಾವು ಪರಿಗಣಿಸುವುದು ಕೇವಲ ತಕ್ಷಣಕ್ಕೆ ಕಸ್ಟಡಿಯಲ್ಲಿ ವಿಚಾರಣೆ ಅಗತ್ಯವೇ ಅಥವಾ ಇಲ್ಲವೇ ಎನ್ನುವ ಅಂಶವನ್ನು ಮಾತ್ರ. ಸದ್ಯಕ್ಕೆ ಇದು ಕಸ್ಟಡಿ ವಿಚಾರಣೆಯ ಪ್ರಕರಣವಲ್ಲ ಎನ್ನುವುದು ನ್ಯಾಯಾಲಯದ ಭಾವನೆ. ಅವರು ವಿಚಾರಣೆಗೆ ಹಾಜರಾಗುವಂತೆ ಹಾಗೂ ತಮ್ಮ ಹೇಳಿಕೆಗಳನ್ನು ದಾಖಲಿಸುವಂತೆ ಸೂಚಿಸುತ್ತೇವೆ. ಇವು ಎನ್‌ಡಿಪಿಎಸ್, ಸ್ಮಗ್ಲಿಂಗ್, ಅಸ್ತಿ ಕಳ್ಳತನದ ಪ್ರಕರಣಗಳಲ್ಲ" ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.

Similar News