ರಾಜ್ಯಗಳ ನಡುವೆ ಒಮ್ಮತ ಮೂಡಿದ ಕೂಡಲೇ ಪೆಟ್ರೋಲಿಯಂ ಉತ್ಪನ್ನಗಳನ್ನು GST ವ್ಯಾಪ್ತಿಗೆ ಸೇರ್ಪಡೆ: ನಿರ್ಮಲಾ ಸೀತಾರಾಮನ್

Update: 2023-02-16 09:31 GMT

ಹೊಸ ದಿಲ್ಲಿ: ರಾಜ್ಯಗಳ ನಡುವೆ ಒಮ್ಮತ ಮೂಡಿದ ಕೂಡಲೇ ಪೆಟ್ರೋಲಿಯಂ ಉತ್ಪನ್ನಗಳನ್ನು ಜಿಎಸ್‌ಟಿ ವ್ಯಾಪ್ತಿಗೆ ತರಲಾಗುವುದು ಎಂದು ಬುಧವಾರ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ ಎಂದು outlookindia.com ವರದಿ ಮಾಡಿದೆ.

ಬಜೆಟ್ ಅಧಿವೇಶನದ ನಂತರ ಉದ್ಯಮಿಗಳ ವಾಣಿಜ್ಯ ಮಂಡಳಿಯಾದ PHDCCI ಸದಸ್ಯರೊಂದಿಗೆ ಸಂವಾದ ನಡೆಸಿದ ಅವರು, ಅಭಿವೃದ್ಧಿಯನ್ನು ಉತ್ತೇಜಿಸಲು ಕಳೆದ ವರ್ಷಗಳಲ್ಲಿ ಸಾರ್ವಜನಿಕ ವೆಚ್ಚವನ್ನು ಹೆಚ್ಚಿಸಲು ಕೇಂದ್ರ ಸರ್ಕಾರವು ಒತ್ತು ನೀಡಿದೆ ಎಂದೂ ತಿಳಿಸಿದ್ದಾರೆ.

"ಪೆಟ್ರೋಲಿಯಂ ಉತ್ಪನ್ನಗಳನ್ನು ಜಿಎಸ್‌ಟಿ ವ್ಯಾಪ್ತಿಗೆ ತರಲು ಈಗಾಗಲೇ ಅವಕಾಶವಿದೆ. ನಮ್ಮ ಹಿಂದಿನ ಸರ್ಕಾರಗಳು ಅದಕ್ಕಾಗಿ ಬಾಗಿಲನ್ನು ಮುಕ್ತವಾಗಿರಿಸಿವೆ" ಎಂದು ಸ್ಪಷ್ಟಪಡಿಸಿದ್ದಾರೆ.

ಕಚ್ಚಾ ಪೆಟ್ರೋಲ್, ಮೋಟಾರ್ ಸ್ಪಿರಿಟ್ (ಪೆಟ್ರೋಲ್), ಹೈಸ್ಪೀಡ್ ಪೆಟ್ರೋಲ್, ಡೀಸೆಲ್, ನೈಸರ್ಗಿಕ ಅನಿಲ ಹಾಗೂ ವಿಮಾನ ಇಂಧನಗಳನ್ನು ತಾತ್ಕಾಲಿಕವಾಗಿ ಜಿಎಸ್‌ಟಿ ವ್ಯಾಪ್ತಿಯಿಂದ ಹೊರಗಿಡಲಾಗಿದೆ. ಅವನ್ನು ಎಂದಿನಿಂದ ಜಿಎಸ್‌ಟಿ ವ್ಯಾಪ್ತಿಗೆ ಸೇರಿಸಬಹುದು ಎಂಬ ಸಂಗತಿಯನ್ನು ಜಿಎಸ್‌ಟಿ ಮಂಡಳಿ ನಿರ್ಧರಿಸಲಿದೆ ಎಂದು ಹೇಳಿದ್ದಾರೆ.

ನಮ್ಮಲ್ಲಿ ಬಹುತೇಕರಿಗೆ ಒಪ್ಪಿಗೆಯಿಲ್ಲದೆ ಇರುವುದರಿಂದ, ರಾಜ್ಯಗಳ ನಡುವೆ ಒಮ್ಮತ ಮೂಡಿದ ಕೂಡಲೇ ಪೆಟ್ರೋಲಿಯಂ ಉತ್ಪನ್ನಗಳನ್ನು ಜಿಎಸ್‌ಟಿ ವ್ಯಾಪ್ತಿಗೆ ಸೇರಿಸಲಾಗುವುದು ಎಂದು ತಿಳಿಸಿದ್ದಾರೆ.

ಜಿಎಸ್‌ಟಿ ಮಂಡಳಿಯ 49ನೇ ಸಭೆಯು ಹೊಸ ದಿಲ್ಲಿಯಲ್ಲಿ ಫೆಬ್ರವರಿ 18, 2023ರಂದು ನಿಗದಿಯಾಗಿದೆ

Similar News