ಉತ್ತರ ಪ್ರದೇಶ: ನಿರ್ಮಾಣ ಹಂತದ ಮಸೀದಿ ಧ್ವಂಸಗೊಳಿಸಿದ ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರು; ವರದಿ

Update: 2023-02-17 11:48 GMT

ಬಾಂದಾ (ಉತ್ತರ ಪ್ರದೇಶ): ಮಸೀದಿಯ ಎರಡನೆ ಮಹಡಿಯನ್ನು ಕಾನೂನುಬಾಹಿರವಾಗಿ ನಿರ್ಮಿಸಲಾಗುತ್ತಿದೆ ಎಂದು ಆರೋಪಿಸಿ ವಿಶ್ವ ಹಿಂದೂ ಪರಿಷತ್‌ನ (VHP) ಕಾರ್ಯಕರ್ತರು ಬಾಂದಾ ಜಿಲ್ಲೆಯ ಬಲ್ಖಂಡಿ ನಾಕಾ ಪ್ರದೇಶದಲ್ಲಿ ನಿರ್ಮಾಣ ಹಂತದಲ್ಲಿದ್ದ ಮಸೀದಿಯನ್ನು ಗುರುವಾರ ಧ್ವಂಸಗೊಳಿಸಿದ್ದರಿಂದ ಆ ಪ್ರದೇಶದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ ಎಂದು thehindu.com ವರದಿ ಮಾಡಿದೆ.

ಬುಧವಾರ ಉದ್ರಿಕ್ತ ಗುಂಪೊಂದು ಆವೇಶದಿಂದ ನಿರ್ಮಾಣ ಕಾಮಗಾರಿಯ ವಸ್ತುಗಳನ್ನು ರಸ್ತೆಗೆಸೆದು, ಕಾನೂನುಬಾಹಿರ ನಿರ್ಮಾಣ ಕಾಮಗಾರಿ ನಡೆಯುತ್ತಿದೆ ಎಂದು ಆರೋಪಿಸಿ ಮಸೀದಿ ಎದುರು ಪ್ರತಿಭಟನೆ ನಡೆಸಿತು. ಸುದ್ದಿ ತಿಳಿದ ಕೂಡಲೇ ಉತ್ತರ ಪ್ರದೇಶ ಪೊಲೀಸರು ಸ್ಥಳಕ್ಕೆ ಧಾವಿಸಿದರು.

ಈ ಕುರಿತು ಪ್ರತಿಕ್ರಿಯಿಸಿರುವ ಬಾಂದಾ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ಅಭಿನಂದನ್, "ಮಸೀದಿಯನ್ನು ನವೀಕರಿಸಲಾಗುತ್ತಿತ್ತು. ಅಲ್ಲಿಗೆ ಭೇಟಿ ನೀಡಿದ್ದ ಕೆಲವರು ಪ್ರತಿಭಟನೆಯಲ್ಲಿ ತೊಡಗಿದ್ದರು. ನವೀಕರಣದ ಹೆಸರಲ್ಲಿ ಕಾನೂನುಬಾಹಿರ ನಿರ್ಮಾಣ ಕಾಮಗಾರಿ ನಡೆಯುತ್ತಿದೆ ಎಂದು ಅವರು ಆರೋಪಿಸಿದ್ದಾರೆ. ನಾವು ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದ್ದೇವೆ ಮತ್ತು ನವೀಕರಣ ಕಾಮಗಾರಿ ಕಾನೂನುಬಾಹಿರವೇ ಎಂಬ ಸಂಗತಿಯನ್ನು ಪರಿಶೀಲಿಸುತ್ತಿದ್ದೇವೆ" ಎಂದು ತಿಳಿಸಿದ್ದಾರೆ.

"ಅಧಿಕಾರಿಗಳು ಮಸೀದಿಯ ನವೀಕರಣಕ್ಕೆ ಮಾತ್ರ ಅನುಮತಿ ನೀಡಿದ್ದರು. ಆದರೆ, ಆ ಹೆಸರಲ್ಲಿ ಎರಡನೆಯ ಮಹಡಿಯನ್ನು ನಿರ್ಮಿಸಲಾಗುತ್ತಿದ್ದು, ಇದು ಕಾನೂನುಬಾಹಿರವಾಗಿದೆ" ಎಂದು ಬಾಂದಾ ಜಿಲ್ಲೆಯ ವಿಶ್ವ ಹಿಂದೂ ಪರಿಷತ್ ಅಧ್ಯಕ್ಷ ಚಂದ್ರಮೋಹನ್ ಬೇಡಿ ಆರೋಪಿಸಿದ್ದಾರೆ.

Similar News