'ಶಿವಸೇನೆ' ಹೆಸರು, 'ಬಿಲ್ಲುಬಾಣ' ಚಿಹ್ನೆ ಏಕನಾಥ್‌ ಶಿಂಧೆ ಬಣದ ಪಾಲಿಗೆ: ಚುನಾವಣಾ ಆಯೋಗ ಆದೇಶ

Update: 2023-02-17 16:17 GMT

ಹೊಸದಿಲ್ಲಿ, ಫೆ. 17: ಶಿವಸೇನೆಯ ಏಕನಾಥ ಶಿಂಧೆ ಬಣ ಪಕ್ಷದ ಅಧಿಕೃತ ಹೆಸರು ಹಾಗೂ ‘ಬಿಲ್ಲು-ಬಾಣ’ ಚಿಹ್ನೆಯನ್ನು ಉಳಿಸಿಕೊಳ್ಳಲು ಚುನಾವಣಾ ಆಯೋಗ ಶುಕ್ರವಾರ ಆದೇಶ ನೀಡಿದೆ. ಇದರಿಂದ ಉದ್ಧವ್ ಠಾಕ್ರೆ ಬಣಕ್ಕೆ ತೀವ್ರ ಮುಖಭಂಗ ಉಂಟಾಗಿದೆ. 

ಉದ್ಧವ್ ಠಾಕ್ರೆ ನೇತೃತ್ವದ ಬಣ ಪಕ್ಷಕ್ಕೆ ಮಧ್ಯಂತರ ನೀಡಲಾದ ಹೆಸರು ಶಿವಸೇನೆ ಯುಬಿಟಿ ಹಾಗೂ ಚುನಾವಣಾ ಚಿಹ್ನೆಯಾಗಿ ಉರಿಯುವ ದೊಂದಿಯನ್ನು  ಉಳಿಸಿಕೊಳ್ಳಬಹುದು ಎಂದು ಚುನಾವಣಾ ಆಯೋಗ ಘೋಷಿಸಿದೆ.

ಮಹಾರಾಷ್ಟ್ರದ ಕಸ್ಬಾ ಪೇಥ್ ಹಾಗೂ ಚಿಂಚ್ವಾಡ-ಈ ಎರಡು ವಿಧಾನ ಸಭಾ ಕ್ಷೇತ್ರಗಳಿಗೆ  ಫೆಬ್ರವರಿ 26ರಂದು ಉಪ ಚುನಾವಣೆ ನಡೆಯಲಿದ್ದು, ಅದಕ್ಕಿಂತ ಮುನ್ನ ಚುನಾವಣಾ ಆಯೋಗದ ಈ ಆದೇಶ ಹೊರ ಬಿದ್ದಿದೆ.

ಉಭಯ ಬಣವೂ ತಾವು ನಿಜವಾದ ಶಿವಸೇನೆ ಎಂದು ಪರಸ್ಪರ ಸಂಘರ್ಷದಲ್ಲಿ ತೊಡಗಿದ್ದವು. ಕಳೆದ ವರ್ಷ ಜೂನ್ನಲ್ಲಿ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ ಬಣದ ವಿರುದ್ಧ ಬಂಡಾಯ ಎದ್ದ ಬಳಿಕ ಏಕನಾಥ ಶಿಂಧೆ ಪಕ್ಷದ ಕುರಿತು ಹಕ್ಕು ಮಂಡಿಸಿದ್ದರು. ತಮ್ಮದು ನಿಜವಾದ ಶಿವಸೇನೆ ಹಾಗೂ ಪಕ್ಷದ ಚುನಾವಣಾ ಚಿಹ್ನೆಯನ್ನು ತಮಗೆ ನೀಡಿ ಎಂದು ಪ್ರತಿಪಾದಿಸಿ ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಸಿದ್ದರು.

ಚುನಾವಣಾ ಆಯೋಗ ಕಳೆದ ವರ್ಷ ಅಕ್ಟೋಬರ್ನಲ್ಲಿ ಚಿಹ್ನೆ ಹಾಗೂ ಪಕ್ಷದ ಹೆಸರನ್ನು ಸ್ತಂಭನಗೊಳಿಸಿತ್ತು. ಅಲ್ಲದೆ, ಉಭಯ ಬಣಗಳಿಗೆ ಹೊಸ ಮಧ್ಯಂತರ ಹೆಸರು ಹಾಗೂ ಚಿಹ್ನೆಯನ್ನು ಮಂಜೂರು ಮಾಡಿತ್ತು. ಅಲ್ಲದೆ, ಪಕ್ಷ ಹಾಗೂ ಸಾಂಸ್ಥಿಕ ವಿಭಾಗ ಹೊಂದಿರುವ ಚುನಾಯಿತ ಪ್ರತಿನಿಧಿಗಳು, ಕಾರ್ಯಕರ್ತರ ಬೆಂಬಲದ ವಿವರ ಸಲ್ಲಿಸುವಂತೆ ಸೂಚಿಸಿತ್ತು.

ಚುನಾವಣಾ ಆಯೋಗದ ಈ ಆದೇಶಕ್ಕೆ ಪ್ರತಿಕ್ರಿಯಿಸಿರುವ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂಧೆ, ‘‘ಪ್ರಜಾಪ್ರಭುತ್ವದಲ್ಲಿ ನಾವು ಹೊಂದಿರುವ ಬಹುಮತ ಮುಖ್ಯವಾಗುತ್ತದೆ.  ಇದು ನಾವು ಮಾಡಿದ ಹೋರಾಟಕ್ಕೆ ಸಂದ ಜಯ. ನಾವು ಬಾಳಾ ಸಾಹೇಬ್ ಅವರ ಚಿಂತನೆಯನ್ನು ಮುಂದುವರಿಸಲಿದ್ದೇವೆ. ಇದು ಬಾಳಾಸಾಹೇಬ್ ಅವರ ಚಿಂತನೆಯ ವಿಜಯ’’ ಎಂದಿದ್ದಾರೆ.

ಉಪ ಮುಖ್ಯಮಂತ್ರಿ ಹಾಗೂ ಬಿಜೆಪಿ ನಾಯಕ ದೇವೇಂದ್ರ ಫಡ್ನಾವಿಸ್, ‘‘ನಾವು ಆರಂಭದಿಂದಲೂ ಏಕಾಂತ ಶಿಂಧೆಯ ಶಿವಸೇನೆ ನಿಜವಾದ ಶಿವಸೇನೆ ಎಂದು ಹೇಳುತ್ತಾ ಬಂದಿದ್ದೆವು. ಶಿವಸೇನೆ ಸಿದ್ಧಾಂತ ಹೊಂದಿದ ಪಕ್ಷ, ಕುಟುಂಬ ಅಲ್ಲ. ಅದು ಈಗ ಸಾಬೀತಾಗಿದೆ’’ ಎಂದಿದ್ದಾರೆ.

ಈ ನಿರ್ಧಾರವನ್ನು ಶಿಂಧೆ ಬಣ ಸ್ವಾಗತಿಸಿದ ಸಂದರ್ಭ, ಠಾಕ್ರೆ ನೇತೃತ್ವದ ಬಣ  ಅಸಮಾಧಾನ ವ್ಯಕ್ತಪಡಿಸಿದೆ. ಅಲ್ಲದೆ, ತಾವು ನ್ಯಾಯಾಲಯದ ಮೆಟ್ಟಿಲೇರಲಿದ್ದೇವೆ ಎಂದು ಹೇಳಿದೆ.

ಶಿವಸೇನೆ ಸಂಸದ ಸಂಜಯ್ ರಾವತ್, ‘‘ನಾವು ಜನತಾ ನ್ಯಾಯಾಲಯಕ್ಕೆ ಹೋಗಲಿದ್ದೇವೆ. ನಾವು ಕಾನೂನು ಹೋರಾಟ ಕೂಡ ನಡೆಸಲಿದ್ದೇವೆ. ನಾವು ಈ ನೆಲದಿಂದ ಮತ್ತೆ ನಿಜವಾದ ಶಿವಸೇನೆಯನ್ನು ಬೆಳೆಸಲಿದ್ದೇವೆ’’ ಎಂದಿದ್ದಾರೆ. 

Similar News