×
Ad

ನಿಧಿಯ ಕೊರತೆಯಿಂದ ರೊಹಿಂಗ್ಯ ನಿರಾಶ್ರಿತರಿಗೆ ಆಹಾರ ನೆರವು ಕಡಿತ: ವಿಶ್ವಸಂಸ್ಥೆ

Update: 2023-02-17 21:29 IST

ಬ್ಯಾಂಕಾಕ್, ಫೆ.17: ನಿಧಿಯ ಕೊರತೆಯಿಂದಾಗಿ ಬಾಂಗ್ಲಾದೇಶದಲ್ಲಿನ ರೊಹಿಂಗ್ಯಾ ನಿರಾಶ್ರಿತರಿಗೆ ಆಹಾರ ನೆರವು ಕಡಿತಗೊಳಿಸುವುದು ಅನಿವಾರ್ಯವಾಗಿದೆ ಎಂದು ವಿಶ್ವಸಂಸ್ಥೆ ಶುಕ್ರವಾರ ಹೇಳಿದ್ದು ಇದರಿಂದ ವಿಶ್ವದ ಅತೀ ದೊಡ್ಡ ನಿರಾಶ್ರಿತರ ವಸಾಹತುಗಳಲ್ಲಿ ಆಹಾರದ ಅಭದ್ರತೆ ಮತ್ತು ಅಪೌಷ್ಟಿಕತೆಯ ಸಮಸ್ಯೆ ತೀವ್ರಗೊಳ್ಳಲಿದೆ ಎಂದು ವಿಶ್ವ ಆಹಾರ ಯೋಜನೆ(WFP) ಎಚ್ಚರಿಸಿದೆ.

ಮ್ಯಾನ್ಮಾರ್ ನ ರಖೈನ್ ರಾಜ್ಯದಲ್ಲಿ  ಕಿರುಕುಳಕ್ಕೆ ಒಳಗಾದ ಸುಮಾರು 7,30,000 ರೊಹಿಂಗ್ಯಾಗಳು(ಇವರಲ್ಲಿ ಹೆಚ್ಚಿನವರು ಮುಸ್ಲಿಂ ಅಲ್ಪಸಂಖ್ಯಾತರು) ಸೇನೆಯ ಕಾರ್ಯಾಚರಣೆಯಿಂದ ತಪ್ಪಿಸಿಕೊಳ್ಳಲು 2017ರಲ್ಲಿ ಬಾಂಗ್ಲಾದೇಶಕ್ಕೆ ಪಲಾಯನ ಮಾಡಿದ್ದರೆ, ಇನ್ನೂ ಕೆಲವರು ಅದಕ್ಕೂ ಮುನ್ನ ಮ್ಯಾನ್ಮಾರ್ ಸೇನೆಯ ದಬ್ಬಾಳಿಕೆಯಿಂದ ಹೆದರಿ ಬಾಂಗ್ಲಾಕ್ಕೆ ಓಡಿಹೋಗಿದ್ದರು. ಹೀಗೆ ಸುಮಾರು 1 ದಶಲಕ್ಷ ಜನರನ್ನು ಬಿದಿರು ಮತ್ತು ಪ್ಲಾಸ್ಟಿಕ್ ಹೊದಿಕೆಯಿಂದ ತಯಾರಿಸಲಾದ ಶಿಬಿರದಲ್ಲಿ ನೆಲೆಗೊಳಿಸಲಾಗಿದೆ. ಈ ನಿರಾಶ್ರಿತರಿಗೆ ಆಹಾರ ಮತ್ತಿತರ ದೈನಂದಿನ ಅಗತ್ಯದ ವಸ್ತುಗಳನ್ನು ಅಂತಾರಾಷ್ಟ್ರೀಯ ದೇಣಿಗೆದಾರರಿಂದ ಸಂಗ್ರಹಿಸಿ ವಿಶ್ವಸಂಸ್ಥೆಯ ನೇತೃತ್ವದಲ್ಲಿ ವಿತರಿಸಲಾಗುತ್ತಿದ್ದು ಪ್ರತಿಯೊಬ್ಬರಿಗೂ 12 ಡಾಲರ್ ಮೌಲ್ಯದ ನೆರವನ್ನು ಒದಗಿಸಲಾಗುತ್ತಿದೆ. 

ಆದರೆ ಮಾರ್ಚ್ ತಿಂಗಳಿಂದ ಇದನ್ನು 10 ಡಾಲರ್ ಮೊತ್ತಕ್ಕೆ ಇಳಿಸಲಾಗುವುದು. ಕೊರೋನ ಸಾಂಕ್ರಾಮಿಕದ ಆಘಾತ, ಆರ್ಥಿಕ ಕುಸಿತ ಮತ್ತು ವಿಶ್ವದಾದ್ಯಂತದ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ದೇಣಿಗೆ ಸಂಗ್ರಹ ಕಡಿಮೆಯಾಗಿದೆ . ಬಾಂಗ್ಲಾದೇಶದ ರೊಹಿಂಗ್ಯಾ ನಿರಾಶ್ರಿತರ ಶಿಬಿರದಲ್ಲಿನ ಮಕ್ಕಳು ಈಗಾಗಲೇ ಅಪೌಷ್ಟಿಕತೆ, ಕುಂಠಿತ ಬೆಳವಣಿಗೆ ಮತ್ತು ಕಡಿಮೆ ತೂಕದ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ನಿರಾಶ್ರಿತರಿಗೆ ಸೂಕ್ತ ಪ್ರಮಾಣದಲ್ಲಿ ನೆರವು ಮುಂದುವರಿಸಲು 125 ದಶಲಕ್ಷ ಡಾಲರ್ನಷ್ಟು ತುರ್ತು ನೆರವಿನ ಅಗತ್ಯವಿದೆ ಎಂದು ವಿಶ್ವ ಆಹಾರ ಯೋಜನೆ (WFP) ಹೇಳಿದೆ.

ಅಂತರಾಷ್ಟ್ರೀಯ ದೇಣಿಗೆದಾರರ ಸಮುದಾಯವು ಈಗ ಸುಮಾರು 5 ಲಕ್ಷದಷ್ಟು ರೊಹಿಂಗ್ಯಾ ಜನರನ್ನು ನಿರ್ಲಕ್ಷಿಸುತ್ತಿರುವುದು ಜಗತ್ತಿನ ಕೆಲವು ಅತ್ಯಂತ ದುರ್ಬಲ ಜನರ ಕುರಿತು ಅವರ ಬದ್ಧತೆಯ ಮಿತಿಯನ್ನು ತೋರಿಸುತ್ತದೆ ಎಂದು `ಸೇವ್ ದಿ ಚಿಲ್ಡ್ರನ್ಸ್' ಸಂಸ್ಥೆಯ ಬಾಂಗ್ಲಾ ಘಟಕದ ನಿರ್ದೇಶಕ ಆನ್ನೊವಾನ್ ಮನೇನ್ ಹೇಳಿದ್ದಾರೆ. ನೆರವಿನ ನಿಧಿಯ ಕೊರತೆಯು ವಿನಾಶಕಾರಿ ಪರಿಣಾಮ ಬೀರಲಿದೆ. ಮುಸ್ಲಿಮರ ಪವಿತ್ರ ರಮಾದಾನ್ ತಿಂಗಳಿಗೂ ಮುನ್ನ ಪಡಿತರ ಕಡಿತ ಮಾಡುವುದು ನ್ಯಾಯವಲ್ಲ ಎಂದು ಬಾಂಗ್ಲಾದೇಶಕ್ಕೆ  ವಿಶ್ವಸಂಸ್ಥೆಯ ವಿಶೇಷ  ಪ್ರತಿನಿಧಿಗಳಾದ ಮೈಕೆಲ್ ಫಕ್ರಿ ಮತ್ತು ಥಾಮಸ್ ಆ್ಯಂಡ್ರೂಸ್ ಹೇಳಿದ್ದಾರೆ.

ಪಡಿತರ ಕಡಿತ ಮಾಡಿರುವುದರಿಂದ ಇನ್ನಷ್ಟು ರೊಹಿಂಗ್ಯಾಗಳು ಕೆಲಸ ಹುಡುಕುವ ಹತಾಶ ಪ್ರಯತ್ನಕ್ಕೆ ಮುಂದಾಗಬಹುದು ಎಂದು ಬಾಂಗ್ಲಾದೇಶದ ನಿರಾಶ್ರಿತರ ಪರಿಹಾರ ಮತ್ತು ವಾಪಸಾತಿ ಆಯುಕ್ತ  ಮುಹಮ್ಮದ್ ರಹ್ಮಾನ್ ಹೇಳಿದ್ದಾರೆ.

ರೊಹಿಂಗ್ಯಾಗಳು ತಮ್ಮ ಶಿಬಿರದ ವ್ಯಾಪ್ತಿ ಬಿಟ್ಟು ಹೊರಗೆ ತೆರಳಿ, ಹೆಚ್ಚುವರಿ ಆದಾಯಕ್ಕೆ ಕೆಲಸ ಮಾಡದಂತೆ ತಡೆಯಲು ಬಾಂಗ್ಲಾದ ಅಧಿಕಾರಿಗಳು ಅವರ ಶಿಬಿರದ ಸುತ್ತ ಮುಳ್ಳುತಂತಿಯ ಬೇಲಿ ಹಾಕಿದ್ದಾರೆ. ಆದರೂ ಬೇಲಿಯಿಂದ ನುಸುಳಿ, ತಮ್ಮ ಜೀವವನ್ನು ಪಣಕ್ಕೆ ಇಟ್ಟು ಅಪಾಯಕಾರಿ ರೀತಿಯಲ್ಲಿ ದೋಣಿಯಲ್ಲಿ ಪ್ರಯಾಣಿಸಿ ನಿರಾಶ್ರಿತರು ಮಲೇಶ್ಯಾ ಅಥವಾ ಇಂಡೊನೇಶ್ಯಾಕ್ಕೆ ತೆರಳಲು ಪ್ರಯತ್ನಿಸುತ್ತಿದ್ದಾರೆ. 69 ರೊಹಿಂಗ್ಯಾ ನಿರಾಶ್ರಿತರಿದ್ದ ದೋಣಿಯು  ಗುರುವಾರ ಇಂಡೊನೇಶ್ಯಾದ ಅಸೆಹ್ ಪ್ರಾಂತ ತಲುಪಿದೆ ಎಂದು ನಿರಾಶ್ರಿತರಿಗಾಗಿನ ವಿಶ್ವಸಂಸ್ಥೆಯ ಸಂಸ್ಥೆಯ ವರದಿ ಹೇಳಿದೆ.

Similar News