ಇನ್ನು ಮುಂದೆ ಯಾವುದೇ ರಾಜ್ಯಗಳಿಗೆ ವಿಶೇಷ ಸ್ಥಾನಮಾನವಿಲ್ಲ: ನಿರ್ಮಲಾ ಸೀತಾರಾಮನ್‌

Update: 2023-02-18 08:34 GMT

ಹೊಸದಿಲ್ಲಿ: ಯಾವುದೇ ರಾಜ್ಯಕ್ಕೆ ವಿಶೇಷ ವರ್ಗ ಸ್ಥಾನಮಾನದ (special category) ಕುರಿತಾದ ಬೇಡಿಕೆಗಳನ್ನು ಕೇಂದ್ರ ಪರಿಗಣಿಸುವುದಿಲ್ಲ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ (Nirmala Sitharaman) ಸ್ಪಷ್ಟಪಡಿಸಿದ್ದಾರೆ. ತಮಗೆ ವಿಶೇಷ ವರ್ಗ ಸ್ಥಾನಮಾನ ಬೇಕೆಂದು ಈಗಾಗಲೇ ಆಗ್ರಹಿಸುತ್ತಿರುವ ಒಡಿಶಾ ಮತ್ತು ಬಿಹಾರ  ರಾಜ್ಯಗಳಿಗೆ ಸಚಿವೆಯ ಈ ಹೇಳಿಕೆ ನಿರಾಸೆ ಹುಟ್ಟಿಸಿದೆ.

ಒಡಿಶಾಗೆ ವಿಶೇಷ ಸ್ಥಾನಮಾನ ನೀಡುವ ಬಗ್ಗೆ ಪರಿಗಣಿಸುವಿರಾ ಎಂಬ ಕೇಂದ್ರ ಬಜೆಟ್‌ ಕುರಿತು ಮಾಧ್ಯಮಗಳೊಂದಿಗಿನ ಸಂವಾದದ ವೇಳೆ ಪತ್ರಕರ್ತರೊಬ್ಬರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವೆ "ಯಾವುದೇ ವಿಶೇಷ ಸ್ಥಾನಮಾನ ನೀಡಬಾರದು ಎಂದು 14ನೇ ವಿತ್ತ ಆಯೋಗ ಸ್ಪಷ್ಟವಾಗಿ ತಿಳಿಸಿದೆ," ಎಂದು ಹೇಳಿದರು.

ಆಂಧ್ರ ಪ್ರದೇಶ ಮತ್ತು ತೆಲಂಗಾಣ ವಿಭಜನೆ ನಂತರ ಅವುಗಳಿಗೆ ಆರಂಭಿಕ ವರ್ಷಗಳಲ್ಲಿ ನೀಡಲಾಗಿದ್ದ ವಿಶೇಷ ಸ್ಥಾನಮಾನದ ಕುರಿತು ಉಲ್ಲೇಖಿಸಿದ ಸಚಿವೆ ಇನ್ನು ಮುಂದೆ ಯಾವುದೇ ವಿಶೇಷ ಸ್ಥಾನಮಾನ ನೀಡಬಾರದೆಂದು ಆಯೋಗ ಸೂಚಿಸಿದೆ ಎಂದರು.

ಕೇಂದ್ರ ಪ್ರವರ್ತಿತ ಯೋಜನೆಗಳಲ್ಲಿ ಶೇ. 90 ರಷ್ಟು ಅನುದಾನ ಪಡೆಯುವ ಉದ್ದೇಶದೊಂದಿಗೆ ಒಡಿಶಾ ಮತ್ತು ಬಿಹಾರ ರಾಜ್ಯಗಳು ವಿಶೇಷ ಸ್ಥಾನಮಾನಕ್ಕಾಗಿ ಆಗ್ರಹಿಸಿದ್ದವು.

ಇದನ್ನೂ ಓದಿ: ರಾಜಮೌಳಿಯ ಚಿತ್ರಗಳು ಹಿಂದುತ್ವಕ್ಕೆ, ಬಿಜೆಪಿಗೆ ಪೂರಕವಾಗಿದೆಯೇ? : RRR ನಿರ್ದೇಶಕ ಪ್ರತಿಕ್ರಿಯಿಸಿದ್ದು ಹೀಗೆ...

Similar News