ಬಾಲ್ಯ ವಿವಾಹದ ವಿರುದ್ಧ ಪೊಲೀಸ್ ಕಾರ್ಯಾಚರಣೆ ತೀವ್ರ: ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮ
ಗುವಾಹಟಿ, ಫೆ. 18: ಬಾಲ್ಯವಿವಾಹಗಳ ವಿರುದ್ಧದ ಕಾರ್ಯಾಚರಣೆಯನ್ನು ಅಸ್ಸಾಂ ತೀವ್ರಗೊಳಿಸುತ್ತದೆ ಎಂದು ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮ (Himanta Biswa Sarma) ಹೇಳಿದ್ದಾರೆ. ಅಸ್ಸಾಂ ಪೊಲೀಸರು (Assam Police) ಫೆಬ್ರವರಿ 3ರಿಂದ ಬಾಲ್ಯವಿವಾಹಗಳ ವಿರುದ್ಧ ಕಾರ್ಯಾಚರಣೆ ಆರಂಭಿಸಿದ್ದಾರೆ ಹಾಗೂ ಅಪ್ರಾಪ್ತ ವಯಸ್ಸಿನ ಬಾಲಕಿಯರನ್ನು ಮದುವೆಯಾದವರನ್ನು ಬಂಧಿಸಿದ್ದಾರೆ.
ಫೆಬ್ರವರಿ 17ರ ವೇಳೆಗೆ, ಲೈಂಗಿಕ ಅಪರಾಧಗಳಿಂದ ಮಕ್ಕಳನ್ನು ರಕ್ಷಿಸುವ ಕಾಯ್ದೆ (ಪೋಕ್ಸೊ) ಮತ್ತು ಬಾಲ್ಯವಿವಾಹ ನಿಷೇಧ ಕಾಯ್ದೆಗಳ ಅಡಿಯಲ್ಲಿ 4,037 ಪ್ರಕರಣಗಳು ದಾಖಲಾಗಿದ್ದು, ಒಟ್ಟು 3,047 ಮಂದಿಯನ್ನು ಮಂದಿಯನ್ನು ಬಂಧಿಸಿದ್ದಾರೆ.
ಬಾಲ್ಯವಿವಾಹ ವಿರುದ್ಧದ ಪೊಲೀಸ್ ಕಾರ್ಯಾಚರಣೆಯು ರಾಜ್ಯದಲ್ಲಿ ಹಾಹಾಕಾರವನ್ನು ಸೃಷ್ಟಿಸಿದೆ ಎಂಬುದಾಗಿ ಈ ವಾರದ ಆದಿ ಭಾಗದಲ್ಲಿ ಗೌಹಾಟಿ ಹೈಕೋರ್ಟ್ ಹೇಳಿತ್ತು. ನಾಲ್ಕು ಬಾಲ್ಯವಿವಾಹ ಪ್ರಕರಣಗಳ ಆರೋಪಿಗಳಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದ ಬಳಿಕ ನ್ಯಾಯಾಲಯ ಈ ಅಭಿಪ್ರಾಯ ವ್ಯಕ್ತಪಡಿಸಿತ್ತು. ಈ ವ್ಯಕ್ತಿಗಳ ವಿರುದ್ಧ ಪೋಕ್ಸೊ ಕಾಯ್ದೆಯಡಿ ಮೊಕದ್ದಮೆ ದಾಖಲಿಸಿರುವುದು ಸಮರ್ಥನೀಯವಲ್ಲ ಎಂದು ಅದು ಹೇಳಿತ್ತು.
ಬಾಲ್ಯ ವಿವಾಹಗಳ ವಿರುದ್ಧ ಬಿಜೆಪಿ ಸರಕಾರ ನಡೆಸುತ್ತಿರುವ ಕಾರ್ಯಾಚರಣೆಯನ್ನು ವಿರೋಧಿಸಿ ರಾಜ್ಯಾದ್ಯಂತ ಸಾವಿರಾರು ಮಹಿಳೆಯರು ಬೀದಿಗಿಳಿದು ಪ್ರತಿಭಟಿಸಿದ್ದಾರೆ. ಬಂಧಿತ ವ್ಯಕ್ತಿಗಳು ತಮ್ಮ ಮನೆಗಳ ಏಕೈಕ ಅನ್ನ ಸಂಪಾದನೆ ಮಾಡುವವರಾಗಿದ್ದಾರೆ ಎಂದು ಅವರು ಹೇಳಿದ್ದಾರೆ.
ಈ ವಿಷಯದಲ್ಲಿ ಗೌಹಾಟಿ ಹೈಕೋರ್ಟ್ ಅಸಹನೆ ವ್ಯಕ್ತಪಡಿಸಿದ ಬಳಿಕವೂ, ಶುಕ್ರವಾರ ಎಲ್ಲಾ ಜಿಲ್ಲೆಯ ಜಿಲ್ಲಾಧಿಕಾರಿಗಳು ಮತ್ತು ಪೊಲೀಸ್ ಸೂಪರಿಂಟೆಂಡ್‌ಗಳ ಸಭೆಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಶರ್ಮ, ಬಾಲ್ಯ ವಿವಾಹಗಳ ವಿರುದ್ಧದ ಕಾರ್ಯಾಚರಣೆಯನ್ನು ತೀವ್ರಗೊಳಿಸಲಾಗುವುದು ಎಂಬ ಹೇಳಿಕೆಯನ್ನು ನೀಡಿದ್ದಾರೆ.