ನಿಕ್ಕಿ ಯಾದವ್ ಹತ್ಯೆ ಪ್ರಕರಣಕ್ಕೆ ಸ್ಫೋಟಕ ತಿರುವು: ಮೊದಲ ಪತ್ನಿಯನ್ನು ಕೊಂದು ಅದೇ ದಿನ 2ನೇ ಮದುವೆಯಾಗಿದ್ದ ಆರೋಪಿ
ಹೊಸದಿಲ್ಲಿ, ಫೆ. 18: 23 ವರ್ಷದ ದಿಲ್ಲಿ ಮಹಿಳೆ ನಿಕ್ಕಿ ಯಾದವ್ (Nikki Yadav) ಮತ್ತು ಆಕೆಯನ್ನು ಚಾರ್ಜರ್ ಕೇಬಲ್ ಮೂಲಕ ಕತ್ತುಹಿಸುಕಿ ಕೊಂದ 24 ವರ್ಷದ ಪ್ರಿಯಕರ ಸಾಹಿಲ್ ಗೆಹ್ಲೋಟ್ (Sahil Gehlot) 2020ರಲ್ಲಿ ಮದುವೆಯಾಗಿದ್ದರು (Marriage) ಎಂಬ ಮಹತ್ವದ ಅಂಶವನ್ನು ಪೊಲೀಸರು ಶನಿವಾರ ಹೊರಗೆಡವಿದ್ದಾರೆ. ಅವರ ಮದುವೆ ಸಮಾರಂಭದ ಒಂದು ಚಿತ್ರವೂ ಬಹಿರಂಗಗೊಂಡಿದೆ.
ಸಾಹಿಲ್, ನಿಕ್ಕಿ ಯಾದವ್‌ರನ್ನು ಕೊಂದು, ಶವವನ್ನು ಕುಟುಂಬ ನಡೆಸುತ್ತಿರುವ ದಾಬಾದಲ್ಲಿರುವ ಫ್ರಿಜ್‌ನಲ್ಲಿಟ್ಟು ಅದೇ ದಿನ ಇನ್ನೋರ್ವ ಮಹಿಳೆಯನ್ನು ಮದುವೆಯಾಗಿದ್ದಾನೆ ಎನ್ನುವುದು ವರದಿಯಾಗಿದೆ. ಇನ್ನೋರ್ವ ಮಹಿಳೆಯನ್ನು ಮದುವೆಯಾಗುವ ತನ್ನ ಯೋಜನೆಯನ್ನು ಸಾಹಿಲ್ ನಿಕ್ಕಿ ಯಾದವ್‌ರಿಂದ ಮುಚ್ಚಿಟ್ಟಿದ್ದನು. ಬಳಿಕ ಈ ವಿಷಯ ಬಯಲಾಗಿ ಇಬ್ಬರ ನಡುವೆ ಜಗಳ ಸಂಭವಿಸಿತ್ತು.
ಫಾರ್ಮಾ ಪದವೀಧರ ಸಾಹಿಲ್ ಮತ್ತು ನಿಕ್ಕಿ 2020ರ ಅಕ್ಟೋಬರ್‌ನಲ್ಲಿ ಉತ್ತರಪ್ರದೇಶದ ನೋಯಿಡದಲ್ಲಿರುವ ಆರ್ಯ ಸಮಾಜ ದೇವಸ್ಥಾನದಲ್ಲಿ ಮದುವೆಯಾಗಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಈ ಮದುವೆಗೆ ಸಾಹಿಲ್ ಕುಟುಂಬ ಅತೃಪ್ತಿ ವ್ಯಕ್ತಪಡಿಸಿತ್ತು ಹಾಗೂ ನಿಕ್ಕಿ ಹೊರಹೋಗಬೇಕೆಂದು ಬಯಸಿತ್ತು.
ದೇವಸ್ಥಾನದ ಅರ್ಚಕ ಈ ಮದುವೆ ನಡೆದಿರುವುದನ್ನು ದೃಢೀಕರಿಸಿದ್ದಾರೆ. ಅವರೊಂದಿಗೆ ಇತರ ಇಬ್ಬರು ಇದ್ದರು ಎಂದು ಅವರು ಹೇಳಿದ್ದಾರೆ. ಅವರ ಮದುವೆ ಪ್ರಮಾಣಪತ್ರವನ್ನೂ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಇನ್ನೋರ್ವ ಮಹಿಳೆಯೊಂದಿಗೆ ಸಾಹಿಲ್‌ನ ಮದುವೆಯನ್ನು 2022 ಡಿಸೆಂಬರ್‌ನಲ್ಲಿ ನಿಗದಿಪಡಿಸಲಾಗಿತ್ತು. ಆದರೆ, ಈ ಬಗ್ಗೆ ನಿಕ್ಕಿಗೆ ಯಾವುದೇ ಮಾಹಿತಿಯನ್ನು ನೀಡಲಾಗಿರಲಿಲ್ಲ.
► ಹತ್ಯೆಯಲ್ಲಿ ಆರೋಪಿ ಕುಟುಂಬವೂ ಶಾಮೀಲು
ಪ್ರಕರಣಕ್ಕೆ ಸಂಬಂಧಿಸಿ ದಿಲ್ಲಿ ಪೊಲೀಸ್‌ನ ಕ್ರೈಮ್ ಬ್ರಾಂಚ್ ಶುಕ್ರವಾರ ಸಾಹಿಲ್‌ನ ತಂದೆ ವೀರೇಂದ್ರ ಸಿಂಗ್, ಸಹೋದರರಾದ ಅನೀಶ್ ಮತ್ತು ನವೀನ್ ಹಾಗೂ ಸ್ನೇಹಿತರಾದ ಲೋಕೇಶ್ ಮತ್ತು ಅಮರ್ ಎಂಬವರನ್ನು ಬಂಧಿಸಿದೆ. ಕೊಲೆಯಲ್ಲಿ ಸಾಹಿಲ್‌ನ ಕುಟುಂಬ ಸದಸ್ಯರು ಮತ್ತು ಸ್ನೇಹಿತರೂ ಭಾಗಿಯಾಗಿದ್ದಾರೆ ಎಂದು ಪತ್ತೆಯಾದ ಬಳಿಕ ಈ ಬಂಧನಗಳು ನಡೆದಿವೆ.
ಸಾಹಿಲ್‌ನ ಮನೆಯಿಂದ 700 ಮೀಟರ್ ದೂರದ ದಾಬಾದಲ್ಲಿರುವ ಫ್ರಿಜ್‌ನಲ್ಲಿ ನಿಕ್ಕಿಯ ಮೃತದೇಹವನ್ನಿಡಲು ಅವನ ಓರ್ವ ಸೋದರ ಸಂಬಂಧಿ ಮತ್ತು ಓರ್ವ ಸ್ನೇಹಿತ ನೆರವಾಗಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.