ಪ್ರತಿಪಕ್ಷಗಳು ಒಗ್ಗೂಡಿದರೆ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ 100ಕ್ಕೂ ಕಡಿಮೆ ಸೀಟುಗಳು ದೊರೆಯಲಿದೆ: ನಿತೀಶ್

Update: 2023-02-18 15:05 GMT

ಪಾಟ್ನಾ, ಫೆ.18:   2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು  ಪರಾಭವಗೊಳಿಸಲು ಕಾಂಗ್ರೆಸ್ ಸೇರಿದಂತೆ ಎಲ್ಲಾ ಪ್ರತಿಪಕ್ಷಗಳು ಕೈಜೋಡಿಸಬೇಕೆಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಶನಿವಾರ ಕರೆ ನೀಡಿದ್ದಾರೆ. 

ಪ್ರತಿಪಕ್ಷಗಳ ‘ಸಂಯುಕ್ತ ರಂಗ’ ರಚನೆಯಾದಲ್ಲಿ,  ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ 100ಕ್ಕೂ ಕಡಿಮೆ ಸೀಟುಗಳು ದೊರೆಯಲಿದೆ ಎಂದವರು ಹೇಳಿದ್ದಾರೆ. ಪಾಟ್ನಾದಲ್ಲಿ ಸಿಪಿಎಂ ಪಕ್ಷದ 11ನೇ ಮಹಾಧಿವೇಶನದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದ ಅರು,  ಪ್ರಧಾನಿಯಾಗಬೇಕೆಂಬ ದೊಡ್ಡ ಆಕಾಂಕ್ಷೆಯೇನನ್ನೂ ತಾನು ಇಟ್ಟುಕೊಂಡಿಲ್ಲವೆಂದು ಸ್ಪಷ್ಟಪಡಿಸಿದರು. ಪ್ರಧಾನಿ ಹುದ್ದೆಗೆ ಸ್ಪರ್ಧಿಯೂ ತಾನಲ್ಲವೆಂದವರು ಹೇಳಿದರು.

ತನ್ನ ಮಾಜಿ ಮಿತ್ರಪಕ್ಷವಾದ ಕಾಂಗ್ರೆಸನ್ನು ಉದ್ದೇಶಿಸಿ ಹೇಳಿದ ನಿತೀಶ್ ‘‘ನೀವು ಈ ಬಗ್ಗೆ ತ್ವರಿತ ನಿರ್ಧಾರವೊಂದನ್ನು ಕೈಗೊಳ್ಳಬೇಕೆಂದು ನಾನು ಬಯಸುತ್ತೇನೆ. ಒಂದು ವೇಳೆ ನನ್ನ ಸಲಹೆಯನ್ನು  ಗಣನೆಗೆ ತೆಗೆದುಕೊಂಡು, ಚುನಾವಣೆಯಲ್ಲಿ ಜೊತೆಯಾಗಿ ಸ್ಪರ್ಧಿಸಿದಲ್ಲಿ ಬಿಜೆಪಿಗೆ 100ಕ್ಕಿಂತಲೂ ಕಡಿಮೆ ಸೀಟುಗಳು ದೊರೆಯಲಿವೆ. ಒಂದು ವೇಳೆ  ನನ್ನ ಸಲಹೆಯನ್ನು  ಪರಿಗಣನೆಗೆ ತೆಗೆದುಕೊಳ್ಳದೇ ಇದ್ದಲ್ಲಿ, ಪರಿಣಾಮ ಏನಾಗಬಹುದೆಂಬುದು ನಿಮಗೆ ತಿಳಿದೇ ಇದೆ’’ ಎಂದರು.

‘‘ದೇಶವನ್ನು ಒಗ್ಗೂಡಿಸುವುದು ಹಾಗೂ ದ್ವೇಷವನ್ನು ಹರಡುವುದರ ವಿರುದ್ಧ ಜನರನ್ನು ಮುಕ್ತಗೊಳಿಸುವುದೇ ನನ್ನ ಏಕೈಕ ಮಹತ್ವಾಕಾಂಕ್ಷೆಯಾಗಿದೆ. ನಿಜಕ್ಕೂ ನಾನು ಏನನ್ನೂ ಬಯಸುವುದಿಲ್ಲ. ನಾನು  ಯಾವತ್ತೂ ನಿಮ್ಮ ಜೊತೆಗಿರುತ್ತೇನೆ’’ ಎಂದವರು ಪ್ರತಿಪಕ್ಷ ನಾಯಕರನ್ನುದ್ದೇಶಿಸಿ ಹೇಳಿದರು.

ಬಿಹಾರದ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್, ಕಾಂಗ್ರೆಸ್ ನಾಯಕ ಸಲ್ಮಾನ್ ಖುರ್ಷಿದ್ ಹಾಗೂ ಬಿಹಾರದ ಮಾಜಿ ಮುಖ್ಯಮಂತ್ರಿ ಜಿತೆನ್ ರಾಮ್ ಮಾಂಜಿ  ಸಮಾವೇಶದಲ್ಲಿ ಉಪಸ್ಥಿತರಿದ್ದರು.

Similar News