ಅಮೆರಿಕದ ಮಾರುಕಟ್ಟೆಯಿಂದ ಬಯೋಕಾನ್ ನ ಶಿಲೀಂಧ್ರ ಸೋಂಕು ವಿರೋಧಿ ಔಷಧಿ ಹಿಂತೆಗೆತ

ನಿಗದಿತ ಮಾನದಂಡಗಳ ಈಡೇರಿಕೆಯಲ್ಲಿ ವೈಫಲ್ಯ

Update: 2023-02-18 15:28 GMT

ಹೊಸದಿಲ್ಲಿ, ಫೆ.20:  ಭಾರತದ ಜೈವಿಕತಂತ್ರಜ್ಞಾನ ಉದ್ಯಮರಂಗದ ದಿಗ್ಗಜ  ಬಯೋಕಾನ್ ಅಮೆರಿಕದ ಮಾರುಕಟ್ಟೆಗೆ ರಫ್ತು ಮಾಡಿದ್ದ 3,665 ಶಿಲೀಂದ್ರ ಸೋಂಕು ನಾಶಕ ಔಷಧಿಗಳನ್ನು ಹಿಂದಕ್ಕೆ ಪಡೆದುಕೊಂಡಿದೆ. 

ಔಷಧಿಗಳ ಗುಣಮಟ್ಟದ ನಶಿಸುವಿಕೆ ಕುರಿತ ಅಮೆರಿಕದ ಆಹಾರ ಹಾಗೂ ಔಷಧಿ  ನಿರ್ವಹಣಾ ಸಂಸ್ಥೆ (ಯುಎಸ್ಎಫ್ಡಿಎ) ನಿಗದಿತ ಮಾನದಂಡಗಳನ್ನು ಈಡೇರಿಸುವಲ್ಲಿ  ವಿಫಲಗೊಂಡ ಹಿನ್ನೆಲೆಯಲ್ಲಿ ಬಯೋಕಾನ್ ಈ ಕ್ರಮ ಕೈಗೊಂಡಿದೆ ಎಂದು ಅಧಿಕೃತ ಮೂಲಗಳು  ತಿಳಿಸಿವೆ.

ಅಸ್ಪರ್ಜಿಲ್ಲೊಸಿಸ್ ಎಂಬ ಗಂಭೀರ ಶಿಲೀಂದ್ರ ಸೋಂಕು ರೋಗಗಳ ಚಿಕಿತ್ಸೆಗೆ ಬಳಸಲಾಗುವ ಪೊಸಾಕೊನಾರೆಲ್ ಡಿಲೆಯ್ಡಿ ರಿಲೀಸ್ ಟ್ಯಾಬ್ಲೆಟ್ಸ್  (100 ಮಿ.ಗ್ರಾಂ.) ಗಳನ್ನು ಬೆಂಗಳೂರು ಮೂಲದ ಬಯೋಕಾನ್, ಅಮೆರಿಕ ಮಾರುಕಟ್ಟೆಯಿಂದ ಹಿಂಪಡೆದುಕೊಂಡಿದೆಯೆಂದು  ಅಮೆರಿಕದ ಔಷಧ ನಿಯಂತ್ರಕ ಸಂಸ್ಥೆಯಾದ ಯುಎಸ್ಎಫ್ಡಿಎ ಹೇಳಿಕೆಯೊಂದರಲ್ಲಿ ತಿಳಿಸಿದೆ.

ಈ ವರ್ಷದ ಜನವರಿ 31ರಿಂದ ಅಮೆರಿಕಗೆ ರಫ್ತು ಮಾಡಿದ್ದ ಶಿಲೀಂದ್ರ ಸೋಂಕು ನಾಶಕ ಔಷಧಿಗಳನ್ನು ಹಿಂತೆಗೆದುಕೊಳ್ಳುವ  ಪ್ರಕ್ರಿಯೆಯನ್ನು ಬಯೋಕಾನ್ ಆರಂಭಿಸಿದೆಯೆಂದು ಮೂಲಗಳು ತಿಳಿಸಿವೆ. ಈ ಔಷಧಿಯ ಬಳಕೆಯಿಂದ ಗಂಭೀರವಾದ ಆರೋಗ್ಯ ಪರಿಣಾಮಗಳುಂಟಾಗುವ ಸಾಧ್ಯತೆ ತೀರಾ ಕಡಿಮೆಯಾದರೂ, ತಾತ್ಕಾಲಿಕವಾಗಿ ವೈದ್ಯಕೀಯವಾಗಿ ಪ್ರತಿಕೂಲ ಪರಿಣಾಮಗಳುಂಟಾಗಬಹುದಾದ್ದರಿಂದ   ಅವುಗಳನ್ನು ಹಿಂಪಡೆದುಕೊಳ್ಳಲಾಗಿದೆಯೆಂದು  ಮೂಲಗಳು ತಿಳಿಸಿವೆ.

Similar News