ಮತ್ತೆ ಸದ್ದು ಮಾಡುತ್ತಿರುವ ಸ್ಪಟಿಕಂ

Update: 2023-02-19 06:23 GMT

1995 ಮಾರ್ಚ್ 30ರಂದು ಭದ್ರನ್ ನಿರ್ದೇಶನದಲ್ಲಿ ಮೋಹನ್ ಲಾಲ್ ಅಭಿನಯದಲ್ಲಿ ತೆರೆಕಂಡ ಆ್ಯಕ್ಷನ್ ಡ್ರಾಮಾ ಚಿತ್ರ ಸ್ಪಟಿಕಂ. ಕಾಲ ಉರುಳಿದರೂ ಇಂದಿಗೂ ಚಿತ್ರ ರಸಿಕರ ಮನಸ್ಸಿನಿಂದ ಮಾಸದ ಚಿತ್ರ ಸ್ಪಟಿಕಂ. ಚಿತ್ರ ಕೇರಳದಾದ್ಯಂತ ಮಲೆಯಾಳಿ ಚಿತ್ರರಸಿಕರ ಮನಗೆದ್ದು ಗಲ್ಲಾ ಪೆಟ್ಟಿಗೆಯಲ್ಲಿ ಭಾರೀ ಸದ್ದು ಮಾಡಿತ್ತು. ಇಂದಿಗೂ ಚಿತ್ರ ರಸಿಕರು ಸ್ಪಟಿಕಂ ಚಿತ್ರದ ಪಾತ್ರಧಾರಿಗಳ ಹೆಸರುಗಳನ್ನು ಮೆಲುಕು ಹಾಕುವಷ್ಟು ಮಟ್ಟಿಗೆ ಜನಜನಿತವಾದ ಚಿತ್ರವದು. ಚಿತ್ರದ ಪಾತ್ರಗಳಾದ ಆಡುತೋಮ, ಚಾಕೋ ಮಾಸ್ಟರ್, ತುಳಸಿ, ಪೊನ್ನಮ್ಮ, ರಾವುಣ್ಣಿ ಮಾಸ್ಟರ್ ಇಂದಿಗೂ ಸಿನಿರಸಿಕರ ಮನಸ್ಸಿನಲ್ಲಿ ಸ್ಥಾನ ಪಡೆದಿದ್ದಾರೆ. ಮಲಯಾಳಂ ಚಿತ್ರಗಳಲ್ಲಿ ಟಾಪ್ ಹತ್ತು ಆ್ಯಕ್ಷನ್ ಚಿತ್ರಗಳ ಪಟ್ಟಿ ಮಾಡಿದರೆ ಸ್ಪಟಿಕಂ ಚಿತ್ರ ಖಂಡಿತಾ ಮುಂಚೂಣಿಯಲ್ಲಿ ನಿಂತಿದೆ. ಬಹುಮುಖ ಪ್ರತಿಭೆ, ಭಾರತೀಯ ಚಿತ್ರರಂಗ ಕಂಡ ಅದ್ಭುತ ನಟ ಮೋಹನ್ ಲಾಲ್‌ರವರ ಅತ್ಯುತ್ತಮ ಹತ್ತು ಚಿತ್ರಗಳಲ್ಲಿ ಖಂಡಿತಾ ಸ್ಪಟಿಕಂ ಚಿತ್ರಕ್ಕೆ ಸ್ಥಾನವಿದೆ.

ಚಿತ್ರದಲ್ಲಿ ಒಬ್ಬ ಮನುಷ್ಯನ ವಿವಿಧ ಭಾವಗಳನ್ನು ಆಡುತೋಮನಾಗಿ, ತೋಮಚ್ಚನಾಗಿ, ಥಾಮಸ್ ಚಾಕೋ ಆಗಿ ಮೋಹನ್ ಲಾಲ್ ಅವಿಸ್ಮರಣೀಯವಾಗಿ ಅಭಿನಯಿಸಿ ತೋರಿಸಿಕೊಟ್ಟಿದ್ದಾರೆ. ಅತ್ಯುತ್ತಮ ಶಿಕ್ಷಕ ರಾಷ್ಟ್ರೀಯ ಪುರಸ್ಕಾರಕ್ಕೆ ಪಾತ್ರನಾದ ಗಣಿತ ಶಿಕ್ಷಕ ಚಾಕೋ ಮಾಸ್ಟರ್ (ತಿಲಕನ್). ಚಾಕೋ ಮಾಸ್ಟರ್‌ನ ಎಲ್ಲಾ ಲೆಕ್ಕಾಚಾರಗಳನ್ನು ತಲೆಕೆಳಗಾಗಿಸಿ ಊರಿನಲ್ಲಿ ಪುಂಡನಾಗಿ ಬೆಳೆಯುತ್ತಿದ್ದಾನೆ ಎಂದು ಅಪ್ಪನಿಂದ ಆರೋಪ ಹೊತ್ತ ಮಗ ಆಡುತೋಮ(ಮೋಹನ್ ಲಾಲ್). ಇಡೀ ಬ್ರಹ್ಮಾಂಡವೇ ಗಣಿತದ ಲೆಕ್ಕಾಚಾರದಲ್ಲಿ ನಡೆಯುತ್ತದೆ ಎಂದೇ ನಂಬಿಕೊಂಡು ಬಂದ ಅಪ್ಪಚಾಕೋ ಮಾಸ್ಟರಿಗೆ ಮಗ ಆಡುತೋಮ ಜೀವನದ ನೈಜ ಗಣಿತಸೂತ್ರವನ್ನು ತೋರಿಸಿಕೊಡುತ್ತಾನೆ. ಮನದಲ್ಲಿ ಬೇರೆಯೇ ಕನಸಿನ ಬೆನ್ನತ್ತಿ ಹೋಗುವ ಮಗನ ನೈಜ ಪ್ರತಿಭೆ, ಕನಸುಗಳನ್ನು ಅರಿಯುವ ತಾಳ್ಮೆ ಗಣಿತದ ಬೆನ್ನತ್ತಿ ಹೋದ ಅಪ್ಪನಿಗೆ ಇರುವುದೇ ಇಲ್ಲ. ಮಗನ ಎಲ್ಲಾ ಕನಸುಗಳಿಗೂ ಅಪ್ಪಕೊಳ್ಳಿ ಇಡುತ್ತಾನೆ. ಅದೊಂದು ಇರುಳು ತಂದೆಯ ಹಿಂಸೆಗೆ ಊರು ಬಿಟ್ಟು ಹೋದ ತೋಮ ಬರೋಬ್ಬರಿ ಹದಿನಾಲ್ಕು ವರ್ಷಗಳ ನಂತರ ಕೆಂಪು ಶರ್ಟ್, ಬಿಳಿ ಪಂಚೆ, ಕಣ್ಣಿಗೆ ಕಪ್ಪು ರೇಬಾನ್ ಕನ್ನಡಕ ಧರಿಸಿ ಊರಿನಲ್ಲಿ ಕಾಣಿಸಿಕೊಳ್ಳುತ್ತಾನೆ. ಈಗಾತ ಊರಿನವರು ಅಚ್ಚರಿಪಡುವಷ್ಟರ ಮಟ್ಟಿಗೆ ಅನುಕೂಲಸ್ಥ. ಕೈಯಲ್ಲಿ ಕಾಸು ಓಡಾಡುತ್ತಿರುತ್ತದೆ.

ತಂದೆಯ ಹಠಮಾರಿ ಧೋರಣೆಗೆ ಕಳೆದು ಹೋದ ತನ್ನ ಬಾಲ್ಯದ, ಹರೆಯದ ಮಹತ್ವದ ಹದಿನಾಲ್ಕು ವರ್ಷಗಳ ಬದುಕನ್ನು ನೆನಪಿಸಿಕೊಂಡ ಆಡುತೋಮನ ಕಣ್ಣಿನಲ್ಲಿನ ಕಿಡಿ, ರೋಷ, ದ್ವೇಷ, ಕಣ್ಣೀರನ್ನು ಶ್ರೀಮಂತಿಕೆಯ ಹೊಚ್ಚ ಹೊಸ ಜೀವನಕ್ಕೆ ಕಾಲಿಟ್ಟ ತೋಮನ ರೇಬಾನ್ ಗ್ಲಾಸು ಮರೆ ಮಾಡಿದೆ. ಮಗನ ಪ್ರತಿಭೆಗೆ ನೀರೆರೆಯದೇ ತನ್ನ ಹಟ ಮಾತ್ರ ಗೆಲ್ಲಬೇಕೆಂದು ಹೊರಟ ತಂದೆಯ ಕತೆ ಕೂಡ ಆಗಿದೆ ಸ್ಪಟಿಕಂ. ದಶಕಗಳ ನಂತರವೂ ಸ್ಪಟಿಕಂ ಇನ್ನೂ ಸಿನಿರಸಿಕರ ನಡುವೆ ಚಾಲ್ತಿಯಲ್ಲಿರುವುದಕ್ಕೆ ಕಾರಣ ಅದರ ಬಾಕ್ಸ್ ಆಫೀಸ್ ಗಳಿಕೆ ಮಾತ್ರವಲ್ಲ. ಶಕ್ತವಾದ ಕಥೆ, ಚಿತ್ರಕಥೆ, ಗಟ್ಟಿಯಾದ ನಿರೂಪಣೆ, ಭದ್ರನ್‌ರವರ ಅತ್ಯುತ್ತಮ ನಿರ್ದೇಶನ, ಆಗಿನ ಕಾಲಕ್ಕೆ ಸಲ್ಲುವಂತೆ ಎಲ್ಲಾ ವಿಭಾಗಗಳಲ್ಲೂ ಅತ್ಯುತ್ತಮ ತಂತ್ರಜ್ಞಾನದ ಬಳಕೆ ಇವೆಲ್ಲವೂ ಸ್ಪಟಿಕಂ ಅನ್ನು ಎತ್ತರದಲ್ಲಿ ನಿಲ್ಲಿಸಿದೆ. ಬಾಲ್ಯದಲ್ಲಿ ನಮಗೆ ಸ್ಪಟಿಕಂ ಅಂದರೆ ಮೋಹನ್ ಲಾಲ್ ಎಂಬ ನಟ ಲುಂಗಿಯನ್ನು ಮೇಲಕ್ಕೆತ್ತಿ ಕಟ್ಟಿ ವಿಲ್ಲನ್‌ಗಳನ್ನು ಅಟ್ಟಾಡಿಸಿ ಹೊಡೆಯುವ ಆಡುತೋಮನ ಕತೆಯಾಗಿತ್ತು. ಕಾಲ ಕಳೆದಂತೆ ಹರೆಯ ಮುಗಿಸಿ ಪ್ರಾಪ್ತ ವಯಸ್ಸಿಗೆ ಕಾಲಿಡುತ್ತಿದ್ದಂತೆ ಚಿತ್ರದಲ್ಲಿ ತುಳಸಿ ಮತ್ತು ಪೊನ್ನಮ್ಮ ಅನುಭವಿಸಿದ ಸಂಕಟಗಳ ಅರಿವಾಗತೊಡಗಿತು. ಕಾಲ ಉರುಳಿ ನಲ್ವತ್ತು ದಾಟಿದಾಗ, ನಮ್ಮ ಮಕ್ಕಳು ಎದೆಯೆತ್ತರ ಬೆಳೆದು ನಿಂತಾಗ ನಾವು ಚಿತ್ರದಲ್ಲಿ ಚಾಕೋ ಮಾಸ್ಟರ್ ಕಣ್ಣಿನಲ್ಲಿ ಆಡುತೋಮನನ್ನು ನೋಡತೊಡಗಿದೆವು. ಒಟ್ಟಾರೆ ಚಿತ್ರ ಬದುಕಿನ ಒಂದೊಂದು ಹಂತಗಳಲ್ಲಿ ಒಂದೊಂದು ರೀತಿ ಭಾಸವಾಗತೊಡಗಿತು. ಸಾಮಾಜಿಕ ಅವಶ್ಯಕತೆಗಳು, ಅದರಿಂದ ಉಂಟಾಗುವ ಬದಲಾವಣೆಗಳು, ಬಹಿಷ್ಕೃತ ವ್ಯಕ್ತಿಯ ಜೀವನ, ತನ್ನ ಕಳೆದು ಹೋದ ಜೀವನಕ್ಕೆ ಕಾರಣನಾದವರ ಮೇಲಿನ ಪ್ರತೀಕಾರದ ಮನಸ್ಸು ಹೀಗೆ ಹಲವು ಮಜಲುಗಳಿಗೆ ಸ್ಪಟಿಕಂ ನಮ್ಮನ್ನು ಕೊಂಡೊಯ್ಯುತ್ತದೆ.

ಆಗಿನ ಕಾಲದಲ್ಲಿ ಚಿತ್ರ ಅದರಲ್ಲೂ ಮೋಹನ್ ಲಾಲ್ ಮ್ಯಾನರಿಸಂ, ಡೈಲಾಗ್ ಡೆಲಿವರಿ, ಮೋಹನ್ ಲಾಲ್ ಧರಿಸಿದ ಧಿರಿಸು ಯಾವ ಮಟ್ಟಿಗೆ ಜನಪ್ರಿಯ ಆಗಿತ್ತು ಎಂದರೆ ಯವಕರು ಕಾಲೇಜು ಪ್ರೋಗ್ರಾಂಗಳಲ್ಲಿ, ಇನ್ನಿತರ ಕಾರ್ಯಕ್ರಮಗಳಲ್ಲಿ ಮೋಹನ್ ಲಾಲ್‌ನಂತೆ ಕೆಂಪು ಶರ್ಟ್, ಬಿಳಿ ಪಂಚೆ, ಕಪ್ಪುಕನ್ನಡಕ ಧರಿಸಿ ಕಾಣಿಸಿಕೊಳ್ಳತೊಡಗಿದರು. ಇಂದಿಗೂ ಕೇರಳ ಮತ್ತು ಕರಾವಳಿ ಕರ್ನಾಟಕದ ಭಾಗಗಳಲ್ಲಿ ವಿಶೇಷ ಸಂದರ್ಭಗಳಲ್ಲಿ ಯುವಕರು ಧರಿಸಿ ಸಂಭ್ರಮಿಸುವ ಕೆಂಪು/ಕಪ್ಪು ಶರ್ಟ್, ಬಿಳಿ ಲುಂಗಿ, ಕಪ್ಪುರೇಬಾನ್ ಕನ್ನಡಕಕ್ಕೆ ಸ್ಪಟಿಕಂ ಚಿತ್ರದ ಮೋಹನ್ ಲಾಲ್ ಧಿರಿಸೇ ಪ್ರೇರಣೆ. ಅದೇ ರೀತಿ ಚಿತ್ರದಲ್ಲಿ ಪೊಲೀಸ್ ಇನ್‌ಸ್ಪೆಕ್ಟರ್ ಆಗಿ ಖಳನ ಪಾತ್ರದಲ್ಲಿ ನಟಿಸಿದ ಜಾರ್ಜ್ ನಂತರದಲ್ಲಿ ಸ್ಪಟಿಕಂ ಜಾರ್ಜ್ ಎಂದೇ ಚಿತ್ರರಂಗದಲ್ಲಿ ಹೆಸರು ವಾಸಿಯಾದರು.

 ಈಗಿನ ಜಮಾನದ ಹಲವರು ಈ ಚಿತ್ರವನ್ನು ಥಿಯೇಟರ್‌ನಲ್ಲಿ ನೋಡಿರುವ ಸಾಧ್ಯತೆ ಕಡಿಮೆ. ಆದರೆ ಹಲವು ಬಾರಿ ಟಿವಿಗಳಲ್ಲಿ, ಯೂಟ್ಯೂಬ್‌ನಲ್ಲಿ ನೋಡಿ ನಾವೆಲ್ಲಾ ರೋಮಾಂಚನಗೊಂಡ ಚಿತ್ರ ಸ್ಪಟಿಕಂ. ಚಿತ್ರದ ಸಂಭಾಷಣೆಯಲ್ಲಿರುವ ಪವರ್ ಇಂದಿಗೂ ಸ್ಪಟಿಕಂ ಚಿತ್ರವನ್ನು ಜೀವಂತವಾಗಿರಿಸಿದೆ. ಸ್ಪಟಿಕಂನಂತಹ ಚಿತ್ರಗಳನ್ನು ಥಿಯೇಟರ್‌ನಲ್ಲಿ ನೋಡದೆ ತಪ್ಪಿಸಿಕೊಂಡು ಕೈ ಕೈ ಹಿಸುಕಿಕೊಳ್ಳುತ್ತಿದ್ದ ಪ್ರೇಕ್ಷಕನಿಗೆ ಸಂತಸದ ಸುದ್ದಿ ಎಂಬಂತೆ ಬಿಡುಗಡೆಯಾದ 28 ವರ್ಷಗಳ ನಂತರ ಚಿತ್ರ 4ಕೆ ಫಾರ್ಮೇಟ್ ಅನ್ನು ಅಳವಡಿಸಿಕೊಂಡು ಫೆಬ್ರವರಿ 9ರಂದು ರಿ ರಿಲೀಸ್ ಆಗಿ ಕೇರಳದಾದ್ಯಂತ ಸದ್ದು ಮಾಡುತ್ತಿದೆ. ಆಡುತೋಮ ಮತ್ತು ಚಾಕೋ ಮಾಸ್ಟರ್ ಇಬ್ಬರ ಮಧ್ಯದ ಜಿದ್ದನ್ನು ಥಿಯೇಟರ್ ಎಕ್ಸ್ ಪೀರಿಯನ್ಸ್ ನಲ್ಲಿ ನೋಡಲು ಬಯಸುವವರಿಗೆ ಇದೊಂದು ಸುವರ್ಣಾವಕಾಶ.

Similar News